ADVERTISEMENT

ದಾವಣಗೆರೆ| ಸಹಾನುಭೂತಿ, ಪ್ರಾಮಾಣಿಕ ಸೇವೆ ಅಗತ್ಯ: ಡಾ. ಪ್ರಭಾ ಮಲ್ಲಿಕಾರ್ಜುನ್‌

​ಪ್ರಜಾವಾಣಿ ವಾರ್ತೆ
Published 14 ಜನವರಿ 2026, 7:10 IST
Last Updated 14 ಜನವರಿ 2026, 7:10 IST
<div class="paragraphs"><p>ಪ್ರಭಾ ಮಲ್ಲಿಕಾರ್ಜುನ್‌</p></div>

ಪ್ರಭಾ ಮಲ್ಲಿಕಾರ್ಜುನ್‌

   

ದಾವಣಗೆರೆ: ಸರ್ಕಾರಿ ಕಚೇರಿಯ ಮೆಟ್ಟಿಲೇರುವ ಸಾರ್ವಜನಿಕರ ಬಗ್ಗೆ ನೌಕರರು ಸಹಾನುಭೂತಿ ತೋರಬೇಕು. ಪ್ರಾಮಾಣಿಕತೆ ಮೈಗೂಡಿಸಿಕೊಂಡು ಸೇವೆ ಸಲ್ಲಿಸಿದರೆ ಸಮಾಜದಲ್ಲಿರುವ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್‌ ಸಲಹೆ ನೀಡಿದರು.

ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ವತಿಯಿಂದ ಹಮ್ಮಿಕೊಂಡಿರುವ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಿಗೆ ಮಂಗಳವಾರ ಚಾಲನೆ ನೀಡಿ ಅವರು ಮಾತನಾಡಿದರು.

ADVERTISEMENT

‘ನಿತ್ಯ ಸಾವಿರಾರು ಜನರು ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸುತ್ತಾರೆ. ಸಾಕಷ್ಟು ಜನರೊಂದಿಗೆ ಸರ್ಕಾರಿ ನೌಕರರ ಸಂಪರ್ಕ ಬೆಳೆಯುತ್ತದೆ. ಪ್ರತಿಯೊಬ್ಬರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹರಿಸಲು ಪ್ರಯತ್ನಿಸಬೇಕು. ಸರ್ಕಾರಿ ನೌಕರರಾಗಿ ಸೇವೆ ಸಲ್ಲಿಸುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ’ ಎಂದು ಹೇಳಿದರು.

‘ಸಾರ್ವಜನಿಕ ಸೇವೆ ದೇವರ ಸೇವೆಯಷ್ಟೇ ಪವಿತ್ರ. ಕಚೇರಿಗೆ ಬರುವ ಸಾರ್ವಜನಿಕರಲ್ಲಿ ನೌಕರರು ದೇವರನ್ನು ಕಾಣಬೇಕು. ಆತ್ಮಸಾಕ್ಷಿಯಿಂದ ಕೆಲಸ ಮಾಡಬೇಕು. ಪ್ರಾಮಾಣಿಕತೆ ಮೈಗೂಡಿಸಿಕೊಂಡಾಗ ಸಾರ್ಥಕ ಜನಸೇವೆ ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಸರ್ಕಾರಿ ಕಚೇರಿಗಳನ್ನು ಸಂಪರ್ಕಿಸುವ ಮುನ್ನ ಸಾರ್ವಜನಿಕರು ಆಲೋಚಿಸುವಂತೆ ಆಗಬಾರದು. ಇದು ತಮ್ಮ ವ್ಯಾಪ್ತಿಗೆ ಬರುವುದಿಲ್ಲ, ತಮ್ಮ ಕೆಲಸವಲ್ಲ ಎಂಬ ಸಬೂಬು ಹೇಳಿ ಜಾರಿಕೊಳ್ಳಬಾರದು. ಎಲ್ಲಿ ಹೋದರೆ ಅಥವಾ ಯಾರನ್ನು ಸಂಪರ್ಕಿಸಿದರೆ ಕೆಲಸ ಆಗುತ್ತದೆ ಎಂಬುದನ್ನು ಜನರಿಗೆ ಮನವರಿಕೆ ಮಾಡಿಕೊಡಬೇಕು’ ಎಂದು ಕಿವಿಮಾತು ಹೇಳಿದರು.

‘ಸರ್ಕಾರಿ ನೌಕರರು ನಿತ್ಯ 8 ರಿಂದ 10 ಗಂಟೆ ಒತ್ತಡದಲ್ಲಿ ಕೆಲಸ ಮಾಡುತ್ತಾರೆ. ಆರೋಗ್ಯ ಎಂದರೆ ಕೇವಲ ದೈಹಿಕ ಸದೃಢತೆಯಲ್ಲ. ಮಾನಸಿಕ, ಭಾವನಾತ್ಮಕ ಹಾಗೂ ಸಾಮಾಜಿಕ ಯೋಗಕ್ಷೇಮವನ್ನು ಇದು ಒಳಗೊಂಡಿದೆ’ ಎಂದರು.

‘ಜಿಲ್ಲೆಯಲ್ಲಿ 4,500ಕ್ಕೂ ಅಧಿಕ ಮಹಿಳಾ ಸರ್ಕಾರಿ ನೌಕರರಿದ್ದಾರೆ. ಮಹಿಳಾ ನೌಕರರ ಮೇಲೆ ಒತ್ತಡ ಇನ್ನೂ ಹೆಚ್ಚು. ಮಹಿಳಾ ನೌಕರರ ಆರೋಗ್ಯ ತಪಾಸಣೆಗೆ ಎಸ್.ಎಸ್‌. ಕೇರ್‌ ಟ್ರಸ್ಟ್‌ ಸಿದ್ಧವಿದೆ. ಇದಕ್ಕೆ ಪ್ರತ್ಯೇಕ ಆರೋಗ್ಯ ತಪಾಸಣಾ ಶಿಬಿರ ಏರ್ಪಡಿಸುವ ಆಲೋಚನೆ ಹೊಂದಿದ್ದೇವೆ. ಸಂಘದ ಅಧ್ಯಕ್ಷರು ಈ ಬಗ್ಗೆ ತೀರ್ಮಾನ ಕೈಗೊಂಡು ಟ್ರಸ್ಟ್‌ ಕಚೇರಿ ಸಂಪರ್ಕಿಸಿ’ ಎಂದು ಹೇಳಿದರು.

‘ಧೂಡಾ’ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಮಮತಾ ಹೊಸಗೌಡರ್, ಉದ್ಯಮಿ ಶಿವಗಂಗಾ ಶ್ರೀನಿವಾಸ್, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ರೇಣುಕಾದೇವಿ, ಈಶ ಫೌಂಡೇಷನ್‌ನ ವಿಜಯಕುಮಾರ್, ರಾಜ್ಯ ಪರಿಷತ್ ಮಾಜಿ ಸದಸ್ಯ ಡಾ.ರಂಗನಾಥ್, ಯೋಗ ಒಕ್ಕೂಟದ ವಾಸುದೇವ ರಾಯ್ಕರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.