ADVERTISEMENT

ಗಗನಕ್ಕೇರಿದ ಪಲ್ಸ್‌ ಆಕ್ಸಿಮೀಟರ್‌ ಬೆಲೆ

ಕೊರೊನಾ ಬಂದ ಒಂದೇ ವರ್ಷದಲ್ಲಿ ದರ ನಾಲ್ಕು ಪಟ್ಟು ಹೆಚ್ಚಳ

ಬಾಲಕೃಷ್ಣ ಪಿ.ಎಚ್‌
Published 13 ಮೇ 2021, 9:03 IST
Last Updated 13 ಮೇ 2021, 9:03 IST
ಆಕ್ಸಿಮೀಟರ್‌
ಆಕ್ಸಿಮೀಟರ್‌   

ದಾವಣಗೆರೆ: ವರ್ಷದ ಹಿಂದೆ ಪಲ್ಸ್‌ ಆಕ್ಸಿಮೀಟರ್‌ಗೆ ₹ 600ರಿಂದ ₹ 800 ಇತ್ತು. ಕೊರೊನಾ ಸೋಂಕು ಏರಿದ ವೇಗದಲ್ಲಿಯೇ ಆಕ್ಷಿಮೀಟರ್‌ ದರವೂ ಏರಿದೆ. ಈಗ ₹ 2,000 ದಿಂದ 2,800ವರೆಗೆ ನೀಡಿದರಷ್ಟೇ ಸಿಗುತ್ತದೆ.

ಕೊರೊನಾ ಎರಡನೇ ಅಲೆಯಲ್ಲಿ ಉಸಿರಾಟದ ಸಮಸ್ಯೆಗೆ ಸಿಲುಕುತ್ತಿರುವವರ ಪ್ರಮಾಣ ಅಧಿಕಗೊಂಡಿದೆ. ರಕ್ತದಲ್ಲಿ ಆಮ್ಲಜನಕ ಪ್ರಮಾಣ 94ಕ್ಕಿಂತ ಮೇಲಿರಬೇಕು. 90ರ ಮೇಲಿದ್ದರೆ ಸುಧಾರಿಸಿಕೊಳ್ಳಬಹುದು. ಆದರೆ ಇದ್ದಕ್ಕಿದ್ದಂತೆ 40–50ಕ್ಕೆ ಇಳಿದು ಭೀತಿ ಹುಟ್ಟಿಸುತ್ತಿದೆ. ಅದಕ್ಕಾಗಿ ಮನೆಯಲ್ಲಿ ಪಲ್ಸ್‌ ಆಕ್ಸಿಮೀಟರ್‌ ಇಟ್ಟುಕೊಳ್ಳುವಂತೆ ಸೋಂಕಿತರಿಗೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಆಮ್ಲಜನಕ ಪ್ರಮಾಣ ಕಡಿಮೆಯಾಗುತ್ತಿದ್ದರೆ ಕೂಡಲೇ ಆಸ್ಪತ್ರೆಗೆ ಬರಲು ನೆರವಾಗಲಿ ಎಂದು ನೀಡುತ್ತಿರುವ ಈ ಸಲಹೆಯಿಂದಾಗಿಯೇ ಪಲ್ಸ್‌ ಆಕ್ಸಿಮೀಟರ್‌ ದರ ಏರಲು ಕಾರಣ.

‘ಪಲ್ಸ್‌ ಆಕ್ಸಿಮೀಟರ್‌ಗಳ ಕೊರತೆ ಇಲ್ಲ. ಆದರೆ ಎಲ್ಲ ಕಡೆಯಿಂದ ಬೇಡಿಕೆ ಇರುವುದರಿಂದ ದರ ಹೆಚ್ಚಾಗಿದೆ. ಕಳೆದ ವರ್ಷ ಕೊರೊನಾ ಬಂದಾಗ ಮಾಸ್ಕ್‌, ಸ್ಯಾನಿಟೈಸರ್‌ನ ದರ ಒಂದೇ ಸಮನೆ ಏರಿಕೆಯಾಗಿತ್ತು. ಕೊರೊನಾ ಬಂದಲ್ಲಿಂದ ಒಂದು ವರ್ಷ ಆಕ್ಸಿಮೀಟರ್‌ಗೆ ದರ ಏರಿಕೆಯಾಗುತ್ತಲೇ ಹೋಗಿತ್ತು. ಕಳೆದ ವರ್ಷ ಮಾರ್ಚ್‌ಗೆ ₹ 800 ಇದ್ದಿದ್ದು, ಈ ವರ್ಷದ ಮಾರ್ಚ್‌ಗೆ ₹ 1,300ಕ್ಕೆ ತಲುಪಿತ್ತು. ಎರಡನೇ ಅಲೆ ಬಂದು ಒಂದೇ ತಿಂಗಳಿಗೆ ₹ 2 ಸಾವಿರ ದಾಟಿ ಹೋಗಿದೆ’ ಎಂದು ವಿಶ್ವಾಸ್‌ ಹೈಟೆಕ್‌ನ ಶಿವನಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ದೇಹದ ಉಷ್ಣಾಂಶ ಪರೀಕ್ಷಿಸಲು ಬಳಸುವ ಥರ್ಮಾ ಮೀಟರ್‌ನ ಬೆಲೆ ಅಷ್ಟೇನು ಏರಿಕೆಯಾಗಿಲ್ಲ. ಡಿಜಿಟಲ್‌ ಥರ್ಮಾಮೀಟರ್‌ ₹ 200ರಿಂದ ₹ 250ಕ್ಕೆ ಸಿಗುತ್ತಿದೆ. ಇದೇ ದರ ಕಳೆದ ವರ್ಷವೂ ಇತ್ತು. ಹಬೆ ತೆಗೆದುಕೊಳ್ಳುವ ಜಾರ್‌ಗಳ (ಸ್ಟೀಂ) ದರವೂ
₹ 350ರಿಂದ ₹ 500ರ ಒಳಗೆ ಸಿಗುತ್ತಿದೆ.

* ಅತಿ ಬೇಡಿಕೆ ಉಂಟಾದಾಗ ಕಾಳಸಂತೆಯಲ್ಲಿ ಮಾರಾಟ ಆರಂಭಗೊಳ್ಳುವುದರಿಂದ ಬೆಲೆ ಹೆಚ್ಚಾಗಿ ಬಿಡುತ್ತದೆ. ಈಗ ಪಲ್ಸ್‌ ಆಕ್ಸಿಮೀಟರ್‌ ಕೊರತೆಯಂತೂ ಇಲ್ಲ.

-ಶಿವನಗೌಡ, ಔಷಧೀಯ ಪರಿಕರ ಸರಬರಾಜುದಾರರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.