ಸಾಸ್ವೆಹಳ್ಳಿ: ಭದ್ರಾ ಕಾಲುವೆಯ ನೀರನ್ನು ರೈತರು ಅಕ್ರಮ ಪಂಪ್‌ಸೆಟ್ ಮೂಲಕ ಹೊಲ, ತೋಟ, ಗದ್ದೆಗಳಿಗೆ ಹರಿಸುತಿದ್ದು, ಇದರಿಂದ ನಾಲೆಯ ಕೊನೆ ಭಾಗಕ್ಕೆ ನೀರು ತಲುಪದ ಕಾರಣ ಸೋಮವಾರ ಬೆಳಿಗ್ಗೆಯಿಂದ ಸಂಜೆವರೆಗೆ ಅಧಿಕಾರಗಳ ತಂಡ ಭದ್ರಾ ಕಾಲುವೆಯಲ್ಲಿದ್ದ ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿದರು.
ಹೊನ್ನಾಳಿ ಉಪ ವಿಭಾಗಾಧಿಕಾರಿ ಅಭಿಷೇಕ್, ತಹಶೀಲ್ದಾರ್ ಪುರಂದರ ನೇತೃತ್ವದಲ್ಲಿ, ಪೊಲೀಸ್ ಭದ್ರತೆಯಲ್ಲಿ ಭದ್ರಾ ಕಾಲುವೆಗೆ ಅಕ್ರಮವಾಗಿ ಅಳವಡಿಸಿಕೊಂಡಿದ್ದ, ಪಂಪ್‌ಸೆಟ್‌ಗಳನ್ನು ಚನ್ನಮುಂಭಾಪುರ, ಹುಣಸಘಟ್ಟ, ಕ್ಯಾಸಿನಕೆರೆ, ಕುಳಗಟ್ಟೆ ಭದ್ರಾ ನಾಲೆಯಲ್ಲಿದ್ದ ಸುಮಾರು 200ಕ್ಕೂ ಹೆಚ್ಚು ಅಕ್ರಮ ಪಂಪ್‌ಸೆಟ್‌ಗಳನ್ನು ತೆರವುಗೊಳಿಸಿದರು.
‘ನೀರನ್ನು ಮಿತವಾಗಿ ಬಳಸಬೇಕು. ಕೊನೆ ಭಾಗದ ಜನರಿಗೆ ನೀರು ತಲುಪದಿದ್ದರೆ ಆ ಭಾಗದ ಜನರಿಗೆ ತೊಂದರೆಯಾಗುತ್ತದೆ. ಮಳೆ ಇಲ್ಲದೆ ರೈತರು ಕಂಗಾಲಾಗಿದ್ದಾರೆ. ಆದ್ದರಿಂದ ರೈತರು ಸಹಕಾರ ನೀಡಬೇಕು’ ಎಂದು ಶಾಸಕ ಡಿ.ಜಿ. ಶಾಂತನಗೌಡ ತೆರವು ಕಾರ್ಯಾಚರಣೆಯ ಸ್ಥಳಕ್ಕೆ ಭೇಟಿ ನೀಡಿ ರೈತರಲ್ಲಿ ಮನವಿ ಮಾಡಿದರು.
ಪಿಎಸ್‌ಐಗಳಾದ ಶಾಂತಲಾ, ನವೀನ್, ಸಾಸ್ವೆಹಳ್ಳಿ ಪೋಲಿಸ್ ಠಾಣೆಯ ಎಎಸ್‌ಐ ಹರೀಶ್, ಸಾಸ್ವೆಹಳ್ಳಿ ನೀರಾವರಿ ಇಲಾಖೆಯ ಎಇಇ ರಾಜಕುಮಾರ್, ಉಪ ತಹಶೀಲ್ದಾರ್ ಚಂದ್ರಪ್ಪ, ಆರ್.ಐ. ದಿನೇಶ್ ಬಾಬು, ಎಲ್ಲ ಇಲಾಖೆಯ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.