ಸಂತೇಬೆನ್ನೂರು: ನಟ ಪುನೀತ್ ರಾಜ್‌ಕುಮಾರ್ ಇನ್ನಿಲ್ಲ ಎಂಬ ಸುದ್ದಿಯಿಂದ ಹೋಬಳಿಯಲ್ಲಿ ನೀರವ ಮೌನ ಆವರಿಸಿದೆ.
‘ದೊಡ್ಮನೆ ಹುಡುಗ’ ಚಿತ್ರದ ಚಿತ್ರೀಕರಣಕ್ಕಾಗಿ ಸಂತೇಬೆನ್ನೂರಿಗೆ ಬಂದಿದ್ದ ಪುನೀತ್ ರಾಜ್‌ಕುಮಾರ್ ಅವರ ನೆನಪು ಇನ್ನೂ ಮಾಸಿಲ್ಲ. ಆದರೆ, ಅವರಿಲ್ಲ ಎನ್ನುವ ಸುದ್ದಿ ಹಲವರಲ್ಲಿ ಆಘಾತವನ್ನುಂಟು ಮಾಡಿದೆ.
ಚಿತ್ರೀಕರಣದ ನಿಮಿತ್ತ ಬಂದಾಗ ಬಸ್ಸಿನಿಂದ ಇಳಿದ ಪುನೀತ್ ಅಭಿಮಾನಿಗಳತ್ತ ಕೈ ಬೀಸುತ್ತಾ ಪುಷ್ಕರಿಣಿಯ ಒಳ ನಡೆದಿದ್ದರು. ಪುಷ್ಕರಿಣಿ ಮೆಟ್ಟಿಲುಗಳಲ್ಲಿ ನಿಂತು ಸೌಂದರ್ಯವನ್ನು ಕಣ್ಣುತುಂಬಿಕೊಂಡಿದ್ದರು. ಸಂಜೆವರೆಗೂ ಚಿತ್ರೀಕರಣ ನಡೆದಿದ್ದರಿಂದ ಜನ ಜಂಗುಳಿ ನಿಯಂತ್ರಿಸುವುದು ಕಷ್ಟವಾಗಿತ್ತು. ಸುತ್ತಮುತ್ತಲ ಗ್ರಾಮಗಳ ಜನರೂ ಪುನೀತ್ ಅವರನ್ನು ನೋಡಲು ದೌಡಾಯಿಸಿದ್ದರು. ಶಾಲಾ-ಕಾಲೇಜು ಮಕ್ಕಳು ಓಡೋಡಿ ಬಂದಿದ್ದರು. ಅವರೆಲ್ಲರೊಂದಿಗೂ ಪುನೀತ್ ಅವರು ಮಗುವಿನ ನಗು ಚಿಮ್ಮಿಸಿ ಮಾತನಾಡಿಸಿದ್ದರು. ಕೆಲವರೊಂದಿಗೆ ಫೋಟೊವನ್ನೂ ತೆಗೆಸಿಕೊಂಡಿದ್ದರು.
ಚಿತ್ರದಲ್ಲಿ ಸಾಂಪ್ರದಾಯಿಕ ಬಿಳಿ ಪಂಚೆ, ಟವೆಲ್‌ನೊಂದಿಗೆ ನೀರಿನಲ್ಲಿ ಮುಳುಗಿ ಮೇಲೇಳುವ ದೃಶ್ಯ ಇಲ್ಲಿನ ಜನರ ಮನದಲ್ಲಿ ಅಚ್ಚಳಿಯದೇ ಉಳಿದಿದೆ. ಕೆಲವು ಸಾವುಗಳು ಸಂಬಂಧವಿಲ್ಲದಿದ್ದರೂ ನಮ್ಮನ್ನು ಮೌನವಾಗಿಸುತ್ತವೆ ಎಂಬಂತೆ ಎಲ್ಲೆಡೆ ನೀರವ ಮೌನ. ಆಘಾತಕಾರಿ ಸುದ್ದಿಯಿಂದ ನೊಂದ ಯುವಕರು ಕೈಕಾಲುಗಳು ಅದುರುತ್ತಿವೆ ಎಂದು ಪ್ರತಿಕ್ರಿಯಿಸಿದರು.
‘ಪುನೀತ್ ಸಭ್ಯತೆಯ ಪ್ರತೀಕ. ಕುಟುಂಬದ ಸದಸ್ಯರೆಲ್ಲಾ ಒಟ್ಟಾಗಿ ಕುಳಿತು ನೋಡಬಹುದಾದ ಚಿತ್ರಗಳಲ್ಲಿ ನಟನೆ. ನೃತ್ಯ, ಸಾಹಸ ಎಲ್ಲದರಲ್ಲೂ ಪರಿಪೂರ್ಣರಾಗಿದ್ದ ಪವರ್ ಸ್ಟಾರ್ ಅವರ ಸಾವು ನಂಬಲಾಗುತ್ತಿಲ್ಲ’ ಎಂದು ಅಭಿಮಾನಿ ಆನಂದ್, ರವಿ, ಮೋಹನ್ ದುಃಖಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.