ದಾವಣಗೆರೆ: ರಾಜ್ಯ ಹೆದ್ದಾರಿಯ ಇಕ್ಕೆಲಗಳಲ್ಲಿ ಕಟ್ಟಡ ನಿರ್ಮಿಸುವಾಗ 6 ಮೀಟರ್ ಸ್ಥಳ ಬಿಟ್ಟುಬಿಡಬೇಕು ಎಂಬ ನಿರ್ಬಂಧವನ್ನು ಜಿಲ್ಲಾ ಮುಖ್ಯ ರಸ್ತೆಗಳಿಗೂ ವಿಸ್ತರಿಸಿ ಲೋಕೋಪಯೋಗಿ ಇಲಾಖೆ ಪರಿಷ್ಕೃತ ಆದೇಶ ಹೊರಡಿಸಿದೆ. ಇದರಿಂದ ಗ್ರಾಮೀಣ ಪ್ರದೇಶದ ರಸ್ತೆ ಬದಿಯಲ್ಲಿರುವ ಕಟ್ಟಡಗಳಿಗೆ ‘ಇ–ಸ್ವತ್ತು’ ಪಡೆಯಲು ಮಾಲೀಕರುಪರದಾಡುವಂತಾಗಿದೆ.
ಜಿಲ್ಲಾ ಮುಖ್ಯ ರಸ್ತೆ ಹಾಗೂ ರಾಜ್ಯ ಹೆದ್ದಾರಿಗಳು ಹಾದು ಹೋಗಿರುವ ಗ್ರಾಮಗಳಲ್ಲಿ ‘ಇ–ಸ್ವತ್ತು’ ಪಡೆಯಲು ಹೊಸದೊಂದು ಸಮಸ್ಯೆ ತಲೆದೋರಿದೆ. ‘ಇ–ಸ್ವತ್ತು’ ಕೇಳಿ ಸಲ್ಲಿಕೆಯಾಗುವ ಅರ್ಜಿಗಳಿಗೆ ಲೋಕೋಪಯೋಗಿ ಇಲಾಖೆಯ ಪರಿಷ್ಕೃತ ಮಾರ್ಗಸೂಚಿಯನ್ನು ಉಲ್ಲೇಖಿಸಿ ಗ್ರಾಮ ಪಂಚಾಯಿತಿಗಳು ಹಿಂಬರಹ ನೀಡುತ್ತಿವೆ. ಕಟ್ಟಡ ನಿರ್ಮಾಣ, ಪರಭಾರೆ ಸೇರಿ ಇತರ ಚಟುವಟಿಕೆಗಳಿಗೆ ತೊಂದರೆ ಉಂಟಾಗಿದೆ.
ರಾಜ್ಯ ಹೆದ್ದಾರಿ ಬದಿಯ ಕಟ್ಟಡಗಳಿಗೆ ಲೋಕೋಪಯೋಗಿ ಇಲಾಖೆ 2004ರಲ್ಲಿ ‘ಕಟ್ಟಡ ರೇಖೆ’ ಹೆಸರಿನಲ್ಲಿ ಮಾರ್ಗಸೂಚಿಯನ್ನು ಪ್ರಕಟಿಸಿತ್ತು. ಗ್ರಾಮ ಪಂಚಾಯಿತಿ, ನಗರ ಹಾಗೂ ಪಟ್ಟಣಗಳ ವ್ಯಾಪ್ತಿಯಲ್ಲಿ ಹೆದ್ದಾರಿ ಬದಿಯ ಅಂಚಿನಿಂದ 6 ಮೀಟರ್‌ವರೆಗೆ ಯಾವುದೇ ಕಟ್ಟಡ ನಿರ್ಮಾಣ ಮಾಡದಂತೆ ಸೂಚಿಸಿತ್ತು. ಗ್ರಾಮ ಪಂಚಾಯಿತಿಯ ಪರಿಮಿತಿ ಹಾಗೂ ಜಿಲ್ಲಾ ಮುಖ್ಯ ರಸ್ತೆಗೂ ಈ ನಿಯಮ ಅನ್ವಯವಾಗುತ್ತದೆಯೇ ಎಂಬುದಕ್ಕೆ ಸಂಬಂಧಿಸಿದಂತೆ ಮಾರ್ಗಸೂಚಿಯಲ್ಲಿ ಸ್ಪಷ್ಟತೆ ಇರಲಿಲ್ಲ.
ಈ ಮಾರ್ಗಸೂಚಿ ಪರಿಷ್ಕರಿಸುವಂತೆ ಜನಪ್ರತಿನಿಧಿಗಳು ಮಾಡಿಕೊಂಡ ಮನವಿಗೆ ಸ್ಪಂದಿಸಿದ ಲೋಕೋಪ
ಯೋಗಿ ಇಲಾಖೆ ಫೆ.17ರಂದು ಹೊಸ ಆದೇಶ ಹೊರಡಿಸಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಟ್ಟಡ ಹಾಗೂ ಜಿಲ್ಲಾ ಮುಖ್ಯ ರಸ್ತೆಗೂ 2004ರ ಮಾರ್ಗಸೂಚಿ ಅನ್ವಯ ಆಗುತ್ತದೆ ಎಂಬುದನ್ನು ಸ್ಟಷ್ಟಪಡಿಸಿದೆ.
‘ತಂದೆಯ ಹೆಸರಿನಲ್ಲಿದ್ದ ಮನೆಯ ಮಾಲೀಕತ್ವವನ್ನು ನನ್ನ ಹೆಸರಿಗೆ ವರ್ಗಾಯಿಸಿಕೊಳ್ಳಲು ‘ಇ–ಸ್ವತ್ತು’ಗೆ ಅರ್ಜಿ ಸಲ್ಲಿಸಿದ್ದೆ. ರಸ್ತೆಗೆ ಹೊಂದಿಕೊಂಡ ಮನೆಗಳಿಗೆ ಲೋಕೋಪಯೋಗಿ ಇಲಾಖೆಯ ಮಾರ್ಗಸೂಚಿಯ ಪ್ರಕಾರ ‘ಇ–ಸ್ವತ್ತು’ ನೀಡಲು ಸಾಧ್ಯವಿಲ್ಲ ಎಂಬುದಾಗಿ ಗ್ರಾಮ ಪಂಚಾಯಿತಿ ಹಿಂಬರಹ ಕೊಟ್ಟಿದೆ. ಆಸ್ತಿ ಪರಭಾರೆಗೆ ತೊಡಕು ಎದುರಾಗಿದೆ’ ಎಂದು ದಾವಣಗೆರೆ ತಾಲ್ಲೂಕಿನ ಬಾಡ ಗ್ರಾಮದ ಶಿವಪ್ರಕಾಶ್ ಅಳಲು ತೋಡಿಕೊಂಡರು.
ರಾಜ್ಯ ಹೆದ್ದಾರಿಯ ಮಾದರಿಯಲ್ಲಿ ಜಿಲ್ಲಾ ಮುಖ್ಯ ರಸ್ತೆಯ ಅಂಚು ಗುರುತಿಸುವ ಜವಾಬ್ದಾರಿಯನ್ನು ಆಯಾ ಜಿಲ್ಲೆಯ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರುಗಳಿಗೆ ನೀಡಲಾಗಿದೆ. ಮುಖ್ಯ ರಸ್ತೆ ಹಾದು ಹೋಗಿರುವ ಊರುಗಳನ್ನು ಪರಿಶೀಲಿಸಿ ‘ರೇಖೆ’ ಗುರುತಿಸುವ ಕಾರ್ಯಕ್ಕೆ ಇನ್ನೂ ಚಾಲನೆ ಸಿಗಬೇಕಿದೆ.
‘ರಾಜ್ಯ ಹೆದ್ದಾರಿ ಮಾದರಿಯಲ್ಲಿ ಜಿಲ್ಲಾ ಮುಖ್ಯ ರಸ್ತೆಗಳ ಪರಿಮಿತಿ ನಿಗದಿಪಡಿಸುವ ಕೆಲಸ ಆಗಿಲ್ಲ. ಹೊಸದಾಗಿ ಟೆಂಡರ್ ಕರೆದು ಏಜೆನ್ಸಿಯೊಂದನ್ನು ನೇಮಕ ಮಾಡುವ ಕಾರ್ಯ ಬಾಕಿ ಇದೆ. ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿರುವ ಕಟ್ಟಡಗಳಿಗೆ ‘ಇ–ಸ್ವತ್ತು’ ಸಿಗುತ್ತಿಲ್ಲ ಎಂಬುದಾಗಿ ಅನೇಕರು ಅಲವತ್ತುಕೊಳ್ಳುತ್ತಿದ್ದಾರೆ’ ಎಂದು ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಒಬ್ಬರು ತಿಳಿಸಿದ್ದಾರೆ.
ಈ ನಿಯಮವನ್ನು 2004ರಲ್ಲಿ ರೂಪಿಸಿದರೂ ಜನರು ಗಂಭೀರವಾಗಿ ಪರಿಗಣಿಸಲಿಲ್ಲ. ಪರಿಷ್ಕೃತ ಆದೇಶದ ಪ್ರಕಾರ ನೂತನ ಕಟ್ಟಡ ನಿರ್ಮಾಣಕ್ಕೆ ಅನುಮತಿ, ಹಳೆ ಕಟ್ಟಡಗಳಿಗೆ ‘ಇ–ಸ್ವತ್ತು’ಗೆ ಅವಕಾಶವಿಲ್ಲಜಿ.ನರೇಂದ್ರ ಬಾಬು, ಇಇ, ಲೋಕೋಪಯೋಗಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.