ADVERTISEMENT

ಜೋಡಿ ರೈಲು ಮಾರ್ಗ ಸಮರ್ಪಣೆ

₹ 115 ಕೋಟಿ ವೆಚ್ಚದಲ್ಲಿ ತೋಳಹುಣಸೆ–ಮಾಯಕೊಂಡ ದ್ವಿಪಥ ಮಾರ್ಗ ಪೂರ್ಣ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2018, 13:19 IST
Last Updated 16 ಡಿಸೆಂಬರ್ 2018, 13:19 IST
ತೋಳಹುಣಸೆ–ಮಾಯಕೊಂಡ ನಡುವಿನ ಜೋಡಿ ರೈಲು ಮಾರ್ಗ ಸಮರ್ಪಣೆ ಸಮಾರಂಭವನ್ನು ದಾವಣಗಾರೆ ರೈಲು ನಿಲ್ದಾಣದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಭಾನುವಾರ ಉದ್ಘಾಟಿಸಿದರು.
ತೋಳಹುಣಸೆ–ಮಾಯಕೊಂಡ ನಡುವಿನ ಜೋಡಿ ರೈಲು ಮಾರ್ಗ ಸಮರ್ಪಣೆ ಸಮಾರಂಭವನ್ನು ದಾವಣಗಾರೆ ರೈಲು ನಿಲ್ದಾಣದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಭಾನುವಾರ ಉದ್ಘಾಟಿಸಿದರು.   

ದಾವಣಗೆರೆ: ನೈರುತ್ಯ ರೈಲ್ವೆಯ ಮೈಸೂರು ವಿಭಾಗದಿಂದ ₹ 115 ಕೋಟಿ ವೆಚ್ಚದಲ್ಲಿ ನಿರ್ಮಿಸಿದ 19 ಕಿ.ಮೀ. ದೂರದ ತೋಳಹುಣಸೆ–ಮಾಯಕೊಂಡ ಜೋಡಿ ರೈಲು ಮಾರ್ಗವನ್ನು ಭಾನುವಾರ ಲೋಕಾರ್ಪಣೆ ಮಾಡಲಾಯಿತು.

ನಗರದ ರೈಲು ನಿಲ್ದಾಣದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಜೋಡಿ ಮಾರ್ಗವನ್ನು ಉದ್ಘಾಟಿಸಿದರು.

‘ಒಟ್ಟು ₹ 1,141 ಕೋಟಿ ವೆಚ್ಚದಲ್ಲಿ 190 ಕಿ.ಮೀ ದೂರದ ಚಿಕ್ಕಜಾಜೂರು–ಹುಬ್ಬಳ್ಳಿ ಜೋಡಿ ರೈಲು ಮಾರ್ಗದ ಮೊದಲ ಹಂತದ ತೋಳಹುಣಸೆ–ಮಾಯಕೊಂಡ ಜೋಡಿ ಮಾರ್ಗ ಕಾರ್ಯ ಪೂರ್ಣಗೊಂಡಿದೆ. ತೋಳಹುಣಸೆ–ಹರಿಹರ ನಡುವಿನ 23 ಕಿ.ಮೀ ದೂರದ ₹ 137 ಕೋಟಿ ವೆಚ್ಚದ ಜೋಡಿ ಮಾರ್ಗ ಕಾಮಗಾರಿಯು 2019ರ ಮಾರ್ಚ್‌ ಅಂತ್ಯದೊಳಗೆ ಮುಗಿಯಲಿದೆ’ ಎಂದು ಸಂಸದರು ತಿಳಿಸಿದರು.

ADVERTISEMENT

ತೋಳಹುಣಸೆ, ಹನುಮನಹಳ್ಳಿ, ಕೊಡಗನೂರು, ಮಾಯಕೊಂಡ ರೈಲು ನಿಲ್ದಾಣಗಳ ನಡುವೆ ಜೋಡಿ ಮಾರ್ಗ ಕಾಮಗಾರಿ ಮುಗಿದಿದೆ. ಈ ನಾಲ್ಕು ನಿಲ್ದಾಣಗಳಲ್ಲಿ ಹೊಸ ಫ್ಲಾಟ್‌ಫಾರ್ಮ್‌, ಶೆಲ್ಟರ್‌, ಶೌಚಾಲಯ, ಬೆಂಚ್‌ಗಳು, ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ.

ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ್‌ ಕುಮಾರ್‌ ಸಿಂಗ್‌, ‘ಚಿಕ್ಕಜಾಜೂರು–ಹುಬ್ಬಳ್ಳಿ ನಡುವಿನ ಜೋಡಿ ರೈಲು ಮಾರ್ಗವು 2020–21ನೇ ಸಾಲಿನಲ್ಲಿ ಪೂರ್ಣಗೊಳ್ಳಲಿದ್ದು, ಈ ಯೋಜನೆಯಡಿ ತೋಳಹುಣಸೆ–ಮಾಯಕೊಂಡ ಪೂರ್ಣಗೊಂಡ ಮೊದಲ ಜೋಡಿ ಮಾರ್ಗವಾಗಿದೆ. ಜೋಡಿ ಮಾರ್ಗ ನಿರ್ಮಾಣದಿಂದ ಪ್ರಮುಖ ನಗರಗಳಾದ ಬೆಂಗಳೂರನ್ನು ಹುಬ್ಬಳ್ಳಿ, ಬೆಳಗಾವಿ, ಮುಂಬೈ ನಗರಗಳೊಂದಿಗೆ ಸಂಪರ್ಕಿಸುವ ಈ ಮಾರ್ಗದ ಸಾಮರ್ಥ್ಯ ಹೆಚ್ಚಾಗಲಿದೆ. ಇದು ಈ ಪ್ರದೇಶದ ಮೂಲಸೌಲಭ್ಯದ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲಿದೆ. ಯೋಜನೆ ಪೂರ್ಣಗೊಂಡ ಬಳಿಕ ಅಂತರ್‌ ನಗರಗಳ ನಡುವಿನ ರೈಲುಗಳ ಸಂಪರ್ಕ ಸುಧಾರಣೆಯಾಗಲಿದೆ’ ಎಂದು ಅಭಿಪ್ರಾಯಪಟ್ಟರು.

ಶಾಸಕ ಎಸ್‌.ಎ. ರವೀಂದ್ರನಾಥ್, ‘ಜೋಡಿ ರೈಲು ಮಾರ್ಗ ಕಾಮಗಾರಿಯನ್ನು ಬೇಗನೆ ಪೂರ್ಣಗೊಳಿಸಬೇಕು. ಹೆಚ್ಚು ರೈಲು ಓಡಾಡುವಂತಾಗಬೇಕು’ ಎಂದು ಹೇಳಿದರು.

ಮೈಸೂರು ವಿಭಾಗದ ಡಿಆರ್‌ಎಂ ಅಪರ್ಣಾ ಗಾರ್ಗ್‌, ಡಿಸಿಇ ಆನಂದ ಭಾರತಿ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ವಲಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ರಾಘವೇಂದ್ರ, ಜಿಲ್ಲಾ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸದಸ್ಯ ಎನ್‌. ರಾಜಶೇಖರ್‌, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಇದ್ದರು. ನೈರುತ್ಯ ರೈಲ್ವೆಯ ಮುಖ್ಯ ಎಂಜಿನಿಯರ್‌ (ಕಾರ್ಯನಿರ್ವಹಣೆ) ಕೆ.ಸಿ. ಸ್ವಾಮಿ ವಂದಿಸಿದರು.

ಡಿಸಿಎಂ ಬಳಿ ನೂತನ ಆರ್‌.ಯು.ಬಿ

ಡಿಸಿಎಂ ಟೌನ್‌ಶಿಪ್‌ ಬಳಿ ಎರಡೂ ಹಳಿಗಳಿಗೆ 61 ಮೀಟರ್‌ ಉದ್ದದ ಕೆಳ ಸೇತುವೆ ನಿರ್ಮಿಸಿಕೊಡಲು ರೈಲ್ವೆ ಇಲಾಖೆ ಒಪ್ಪಿಕೊಂಡಿದೆ ಎಂದು ಸಿದ್ದೇಶ್ವರ ತಿಳಿಸಿದರು.

ನೂತನ ಜೋಡಿ ಮಾರ್ಗದ ಸೇತುವೆಯನ್ನು ಆರು ತಿಂಗಳ ಒಳಗೆ ಪೂರ್ಣಗೊಳಿಸಲಾಗುವುದು ಹಾಗೂ ಹಳೆಯ ಮಾರ್ಗದ ಜಾಗದಲ್ಲಿ ₹ 10 ಕೋಟಿ ವೆಚ್ಚದಲ್ಲಿ ಕೆಳ ಸೇತುವೆ ಪುನರ್‌ ನಿರ್ಮಾಣ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು, 18 ತಿಂಗಳ ಒಳಗೆ ಅದನ್ನೂ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದರು.

ಇದಕ್ಕೂ ಮೊದಲು ಸಂಸದರು ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಅಜಯ ಕುಮಾರ್ ಸಿಂಗ್‌ ಜೊತೆಗೆ ಹೋಗಿ ಡಿಸಿಎಂ ಬಳಿಯ ಸೇತುವೆ ನಿರ್ಮಾಣ ಕಾಮಗಾರಿಯನ್ನು ಪರಿಶೀಲಿಸಿದರು.

ಅಶೋಕ ರಸ್ತೆ ಆರ್‌ಒಬಿ ನಿರ್ಮಾಣಕ್ಕೆ ಬದ್ಧ

ಅಶೋಕ ರಸ್ತೆಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೈಲ್ವೆ ಮೇಲ್ಸೇತುವೆ ಸ್ಥಳವನ್ನು ಅಜಯ ಕುಮಾರ ಸಿಂಗ್‌ ಹಾಗೂ ಸಂಸದರು ಪರಿಶೀಲಿಸಿದರು.

30 ವರ್ಷಗಳಿಂದ ಆರ್‌.ಒ.ಬಿ ನಿರ್ಮಿಸುವಂತೆ ಕೋರಲಾಗುತ್ತಿದೆ. ಹಣ ಬಿಡುಗಡೆಯಾಗಿದ್ದರೂ ಕೆಲಸ ನಡೆಯುತ್ತಿಲ್ಲ. ನಗರದ ಜನ ತೊಂದರೆ ಪಡುತ್ತಿದ್ದಾರೆ. ಜಾಗದ ಸಮಸ್ಯೆಯಿಂದ ಕೆಲಸ ಆರಂಭಗೊಂಡಿಲ್ಲ ಎಂದು ಸಂಸದರು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್‌, ‘ರೈಲ್ವೆ ಇಲಾಖೆ ಭೂಮಿ ಅಗತ್ಯವಿರುವ ಬಗ್ಗೆ ಪ್ರಸ್ತಾವ ಸಲ್ಲಿಸಿದರೆ ನಾವು ಭೂಸ್ವಾಧೀನ ಮಾಡಿಕೊಡುತ್ತೇವೆ’ ಎಂದು ಪ್ರತಿಕ್ರಿಯಿಸಿದರು.

ಆದರೆ, ಇದಕ್ಕೆ ಖಡಕ್ಕಾಗಿ ಉತ್ತರಿಸಿದ ಅಜಯ್‌ ಕುಮಾರ್‌ ಸಿಂಗ್‌, ‘ನಮ್ಮ ರೈಲು ಸಂಚಾರಕ್ಕೆ ಭೂಮಿ ಬೇಕಾಗಿಲ್ಲ. ನಾವು ಈ ಗೇಟ್‌ ಬಂದ್‌ ಮಾಡಲೂ ಸಿದ್ಧರಿದ್ದೇವೆ. ನಗರದ ಜನರಿಗೆ ತೊಂದರೆಯಾಗುತ್ತಿರುವುದರಿಂದ ಸೇತುವೆ ನಿರ್ಮಿಸುವ ಜವಾಬ್ದಾರಿ ನಿಮ್ಮದು. ನೀವು ಭೂಮಿ ನೀಡಿದರೆ ಸೇತುವೆ ನಿರ್ಮಾಣ ವೆಚ್ಚದಲ್ಲಿ ನಮ್ಮ ಪಾಲು ನೀಡುತ್ತೇವೆ’ ಎಂದು ಸ್ಪಷ್ಟಪಡಿಸಿದರು.

‘ಸೇತುವೆ ನಿರ್ಮಿಸಲು ನಾವು ಬದ್ಧರಿದ್ದೇವೆ. ಶೀಘ್ರದಲ್ಲೇ ಡಿಪಿಆರ್‌ ಸಿದ್ಧಪಡಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು’ ಎಂದು ಜಿಲ್ಲಾಧಿಕಾರಿ ಭರವಸೆ ನೀಡಿದರು.

ಮುಖ್ಯ ಎಂಜಿನಿಯರ್‌ ತರಾಟೆಗೆ

ವಿವಿಧೆಡೆ ಸ್ಥಳ ಪರಿಶೀಲಿಸಿದ ನೈರುತ್ಯ ರೈಲ್ವೆ ಅಜಯ್‌ ಕುಮಾರ್‌ ಸಿಂಗ್‌ ಅವರು ಕಾಮಗಾರಿ ವಿಳಂಬವಾಗುತ್ತಿರುವುದಕ್ಕೆ ಮುಖ್ಯ ಎಂಜಿನಿಯರ್‌ (ಸಿವಿಲ್‌ ವರ್ಕ್ಸ್‌) ಅಲೋಕ ತಿವಾರಿ ಅವರನ್ನು ತರಾಟೆಗೆ ತೆಗೆದುಕೊಂಡರು.

‘ನನಗೆ ಕಥೆ ಹೇಳಬೇಡಿ. ನಿಮ್ಮ ಕಥೆಯನ್ನು ಕೇಳಲೂ ಬಂದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರತಿ ಕಾಮಗಾರಿಯ ಪ್ರಗತಿಯ ಬಗ್ಗೆಯೂ ಮಾಹಿತಿ ಕೇಳುತ್ತಾರೆ. ಮೂರು ವರ್ಷ ಒಂದೇ ಕಡೆ ಕೆಲಸ ಮಾಡಬೇಕು ಎಂದುಕೊಂಡಿದ್ದೀರೋ, ಇಲ್ಲವೋ’ ಎಂದು ಗದರಿದರು.

ಪಾಲಿಕೆಯ ಮುಖ್ಯ ಎಂಜಿನಿಯರ್‌ ಸತೀಶ್‌ ಅವರಿಗೆ ತಮ್ಮ ವಿಸಿಟಿಂಗ್‌ ಕಾರ್ಡ್‌ ನೀಡಿ, ಕೆಲಸ ಮಾಡಲು ಅಲೋಕ ತಿವಾರಿ ಸಹಕಾರ ನೀಡಿದ್ದರೆ ತಮಗೆ ನೇರವಾಗಿ ಕರೆ ಮಾಡಿ ಎಂದು ಸೂಚಿಸಿದರು.

ಸಂಸದರು ನೀಡಿದ ಮಾಹಿತಿ

* ಹರಿಹರದ ಅಮರಾವತಿ ಬಳಿ ₹ 30 ಕೋಟಿ ವೆಚ್ಚದ ರೈಲ್ವೆ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಭೂಸ್ವಾಧೀನ ವಿಚಾರವಾಗಿ ವಿಳಂಬವಾಗಿದೆ. 2019ರ ಜೂನ್‌ ಒಳಗೆ ಕಾಮಗಾರಿ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

* ಆನಗೋಡು–ಹೊಳಲ್ಕೆರೆ ರಾಜ್ಯ ಹೆದ್ದಾರಿಯಲ್ಲಿ ಮಾಯಕೊಂಡ ಬಳಿ ಹಾಗೂ ಬಾತಿ–ಕರೂರು ರಸ್ತೆಯಲ್ಲಿ ₹ 1.40 ಕೋಟಿ ವೆಚ್ಚದಲ್ಲಿ ಸಬ್‌ವೇ ನಿರ್ಮಿಸಲು ಇಲಾಖೆ ಒಪ್ಪಿಗೆ ಸೂಚಿಸಿದೆ.

* ಹನುಮನಹಳ್ಳಿ ಬಳಿ ನೀರು ನಿಲ್ಲದಂತೆ ಕೆಳಸೇತುವೆ ನಿರ್ಮಿಸಿಕೊಡುವುದಾಗಿ ಭರವಸೆ ಕೊಟ್ಟಿದ್ದಾರೆ.

* 24 ಕಡೆ ಸೇತುವೆಗಳ ಬಳಿ ನೀರು ನಿಲ್ಲುತ್ತಿದ್ದು, ಅವುಗಳನ್ನು ಸರಿಪಡಿಸಲು ಈಗಾಗಲೇ ಟೆಂಡರ್‌ ಕರೆಯಲಾಗಿದೆ.

* ಹರಿಹರ– ಕೊಟ್ಟೂರು ರೈಲನ್ನು 2019ರ ಮಾರ್ಚ್‌ ಒಳಗೆ ಹೊಸಪೇಟೆವರೆಗೆ ವಿಸ್ತರಿಸಲು ಇಲಾಖೆ ಒಪ್ಪಿಗೆ ಸೂಚಿಸಿದೆ.

* ದಾವಣಗೆರೆ–ಚಿತ್ರದುರ್ಗ– ತುಮಕೂರು ನೇರ ರೈಲು ಮಾರ್ಗಕ್ಕೆ ಒಟ್ಟು 2,281 ಎಕರೆ ಭೂಮಿ ಅಗತ್ಯವಿದ್ದು, ಜಿಲ್ಲೆಯಲ್ಲಿ 238 ಎಕರೆ ಭೂಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ.

* ಹರಿಹರ–ಶಿವಮೊಗ್ಗ ಹೊಸ ರೈಲು ಮಾರ್ಗಕ್ಕೆ 1,069 ಎಕರೆ ಜಮೀನು ಅಗತ್ಯವಿದ್ದು, ಭೂಮಿ ಒದಗಿಸಲು ರಾಜ್ಯ ಸರ್ಕಾರಕ್ಕೆ ರೈಲ್ವೆ ಇಲಾಖೆ ಪ್ರಸ್ತಾವ ಸಲ್ಲಿಸಿದೆ.

* ಕೊಟ್ಟೂರು–ಜಗಳೂರು– ಚಿತ್ರದುರ್ಗ ಹೊಸ ರೈಲು ಮಾರ್ಗ ಲಾಭದಾಯಕವಲ್ಲ ಎಂದು ಇಲಾಖೆ ಅಭಿಪ್ರಾಯಪಟ್ಟಿದ್ದು, ಸದ್ಯಕ್ಕೆ ಈ ಯೋಜನೆಯನ್ನು ಕೈಗೆತ್ತಿಕೊಳ್ಳದಿರಲು ನಿರ್ಧರಿಸಿದೆ.

* ಚಿಕ್ಕಜಾಜೂರು– ಹರಿಹರದವರೆಗೆ ₹ 60 ಕೋಟಿ ವೆಚ್ಚದಲ್ಲಿ ಶೀಘ್ರದಲ್ಲೇ ಎಲೆಕ್ಟ್ರಿಫಿಕೇಶನ್‌ ಕಾಮಗಾರಿ ಕೈಗೊಳ್ಳುವುದಾಗಿ ಇಲಾಖೆ ಭರವಸೆ ನೀಡಿದೆ.

* ಶಾಸಕ ಕರುಣಾಕರ ರೆಡ್ಡಿ ಮನವಿ ಮಾಡಿರುವ ಹಿನ್ನೆಲೆಯಲ್ಲಿ ತೆಲಿಗಿ, ಬೆಣ್ಣೆಹಳ್ಳಿ, ಹರಪನಹಳ್ಳಿ ರೈಲು ನಿಲ್ದಾಣಗಳಲ್ಲಿ ಸ್ವಚ್ಛತೆ ಕಾಪಾಡಲು ರೈಲು ನಿಲ್ದಾಣದ ಪ್ರಬಂಧಕರಿಗೆ ಹಿರಿಯ ಅಧಿಕಾರಿಗಳು ಸೂಚನೆ ನೀಡಿದ್ದಾರೆ.

* ಹರಿಹರ–ಯಶವಂತಪುರ ರೈಲಿನಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಕಡಿಮೆಯಾಗಿ, ಆದಾಯ ಕಡಿತಗೊಳ್ಳುತ್ತಿದೆ ಎಂದು ಅಧಿಕಾರಿಗಳು ದೂರುತ್ತಿದ್ದಾರೆ. ಹೀಗಾಗಿ ಹೆಚ್ಚು ಜನ ಪ್ರಯಾಣ ಮಾಡುವ ಮೂಲಕ ಈ ರೈಲನ್ನು ಉಳಿಸಿಕೊಳ್ಳಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.