ADVERTISEMENT

ಸಕಾಲಕ್ಕೆ ಬಾರದ ಮಳೆ; ಇಳುವರಿ ಕುಂಠಿತ

ಹರಪನಹಳ್ಳಿ ತಾಲ್ಲೂಕಿನ 67,710 ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆ

ವಿಶ್ವನಾಥ ಡಿ.
Published 20 ಆಗಸ್ಟ್ 2021, 2:53 IST
Last Updated 20 ಆಗಸ್ಟ್ 2021, 2:53 IST
ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಹೋಬಳಿಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ.
ಹರಪನಹಳ್ಳಿ ತಾಲ್ಲೂಕಿನ ಚಿಗಟೇರಿ ಹೋಬಳಿಯಲ್ಲಿ ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿವೆ.   

ಹರಪನಹಳ್ಳಿ: ವಾಡಿಕೆಗಿಂತ ಹೆಚ್ಚು ಮಳೆ ಸುರಿದಿದೆ. ಆದರೆ, ಸಮಯಕ್ಕೆ ಸರಿಯಾಗಿ ಮಳೆಯಾಗದ ಪರಿಣಾಮ ವಿವಿಧ ಬೆಳೆಗಳು ಬಾಡುತ್ತಿದ್ದು, ಇಳುವರಿ ಕುಂಠಿತವಾಗುವ ಆತಂಕ ಎದುರಾಗಿದೆ.

89 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯ ಗುರಿ ಹೊಂದಿದ್ದ ತಾಲ್ಲೂಕಿನಲ್ಲಿ 67,710 ಹೆಕ್ಟೇರ್‌ ಪ್ರದೇಶದ ಮುಕ್ಕಾಲು ಭಾಗದಲ್ಲಿ ಮೆಕ್ಕೆಜೋಳ ಬಿತ್ತನೆಯಾಗಿದೆ. ಮಳೆ ಕೊರತೆಯಿಂದ ಬೆಳೆಗಳು ಒಣಗುತ್ತಿದ್ದು, ರೈತರು ಚಿಂತೆಗೀಡಾಗಿದ್ದಾರೆ.

ಜುಲೈ ತಿಂಗಳೊಂದರಲ್ಲಿಯೇ ಬರೋಬ್ಬರಿ 169 ಮಿ.ಮೀ.ಮಳೆ ಸುರಿದಿದೆ. ಆದರೆ, ಆಗಸ್ಟ್ ತಿಂಗಳಲ್ಲಿ ವರುಣನ ಅವಕೃಪೆಯಿಂದಾಗಿ ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಬಾಡುತ್ತಿವೆ. ಚಿಗಟೇರಿ, ತೆಲಿಗಿ ಮತ್ತು ಹರಪನಹಳ್ಳಿ ಕಸಾಬ ಹೋಬಳಿಯಲ್ಲಿ ಅರ್ಧದಷ್ಟು ಮೆಕ್ಕೆಜೋಳದ ಬೆಳೆ ಒಣಗುತ್ತಿದೆ. ಅರಸೀಕೆರೆಯಲ್ಲಿ ಆಗಾಗ ಅಲ್ಪ ಮಳೆಯಾಗಿದ್ದು, ಬೆಳೆಗಳು ಹಸಿರಾಗಿವೆ. ಸಾಧಾರಣ ಇಳುವರಿಯನ್ನು ಮಾತ್ರ ರೈತರು ನಿರೀಕ್ಷಿಸಿದ್ದಾರೆ.

ADVERTISEMENT

ಮಳೆಯ ಕೊರತೆಯಿಂದಾಗಿ ಬೆಳೆಗಳು ಒಣಗುವ ಆತಂಕ ಎದುರಾಗಿದೆ. ಚಿಗಟೇರಿ ಹೋಬಳಿಯಲ್ಲಂತೂ ಮೆಕ್ಕೆಜೋಳದ ಬೆಳೆ ಸಂಪೂರ್ಣ ಹಾನಿಯಾಗಿದೆ. ಈ ವಾರವೂ ಮಳೆ ಸುರಿಯದಿದ್ದರೆ, ರೈತರ ಹೊಟ್ಟೆಮೇಲೆ ಕಲ್ಲು ಬಿದ್ದಂತೆ. ರೈತರಿಗೆ ಸೂಕ್ತ ಪರಿಹಾರ
ನೀಡಬೇಕು ಎಂದು ಮೈದೂರು ಗ್ರಾಮದ ರೈತ ಒ. ರಾಮಪ್ಪ ಆಗ್ರಹಿಸಿದ್ದಾರೆ.

ಸ್ಥಳೀಯ ಶಾಸಕರು, ಸರ್ಕಾರ ಹರಪನಹಳ್ಳಿಯನ್ನು ಬರಪೀಡಿತ ತಾಲ್ಲೂಕು ಎಂದು ಘೋಷಿಸಬೇಕು. ರೈತರಿಗೆ ಪರಿಹಾರ ಘೋಷಿಸುವ ಜೊತೆಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ಮನವರಿಕೆ ಮಾಡಿಕೊಡಬೇಕು ಎಂದು ರೈತ ಚಿಗಟೇರಿ ಎಸ್.ಎಸ್. ಬಸವನಗೌಡ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.