ADVERTISEMENT

ಜಗಳೂರು: ಬಿರುಗಾಳಿ, ಮಳೆ

ರೈತರಲ್ಲಿ ಮಂದಹಾಸ ಮೂಡಿಸಿದ ವರುಣ

​ಪ್ರಜಾವಾಣಿ ವಾರ್ತೆ
Published 13 ಮೇ 2024, 15:58 IST
Last Updated 13 ಮೇ 2024, 15:58 IST
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್‌ ರಸ್ತೆಯಲ್ಲಿ ನೀರು ನಿಂತಿರುವುದು
ಜಗಳೂರು ತಾಲ್ಲೂಕಿನ ದೊಣೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಸರ್ವೀಸ್‌ ರಸ್ತೆಯಲ್ಲಿ ನೀರು ನಿಂತಿರುವುದು   

ಜಗಳೂರು: ತಾಲ್ಲೂಕಿನ ಕಸಬಾ ಮತ್ತು ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಉತ್ತಮ ಮಳೆಯಾಗಿದೆ.

ಸುಡು ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಭೂಮಿ ಮೊದಲ ಮಳೆಗೆ ತಂಪಾಗಿದೆ. ಬುಳ್ಳನಹಳ್ಳಿ, ಮಾಚಿಕೆರೆ, ದೊಣೆಹಳ್ಳಿ, ಮುಸ್ಟೂರು ಹಾಗೂ ತೊರೆಸಾಲು ಪ್ರದೇಶ ಮತ್ತು ಸೊಕ್ಕೆ ಹೋಬಳಿಯಲ್ಲಿ ಅರ್ಧ ತಾಸಿಗೂ ಹೆಚ್ಚು ಕಾಲ ಬಿರುಸಿನ ಮಳೆ ಬಿದ್ದಿದೆ.

ಗುಡುಗು, ಸಿಡಿಲಿನ ಆರ್ಭಟದ ಜೋರು ಗಾಳಿ ಮಳೆಯಿಂದಾಗಿ ಕೆಲವೆಡೆ ಮನೆಯ ಮೇಲಿನ ಸಿಮೆಂಟ್ ಶೀಟ್‌ಗಳು ಹಾಗೂ ರೈತರ ಶೆಡ್‌ಗಳು ಹಾರಿದ್ದು, ಸಿಮೆಂಟ್ ಶೀಟ್‌ಗಳು ಪುಡಿಪುಡಿಯಾಗಿವೆ. 

ADVERTISEMENT

ಜಗಳೂರಿನಲ್ಲಿ 2.6 ಮಿ.ಮೀ, ಮುಗ್ಗಿದರಾಗಿಹಳ್ಳಿ 4 ಮಿ.ಮೀ ಹಾಗೂ ಸೊಕ್ಕೆ ಗ್ರಾಮದಲ್ಲಿ 6 ಸೆಂ.ಮೀ. ಮಳೆಯಾಗಿದೆ.

ಭಾನುವಾರ ರಾತ್ರಿ ತಾಲ್ಲೂಕಿನ ಕೆಲವೆಡೆ ಉತ್ತಮ ಮಳೆಯಾಗಿದೆ. ರೈತರಿಗೆ ಭೂಮಿ ಹದ ಮಾಡಿಕೊಳ್ಳಲು ಅನುಕೂಲವಾಗಿದೆ. ದೊಡ್ಡ ಪ್ರಮಾಣದಲ್ಲಿ ಹಾನಿಯಾಗಿಲ್ಲ. ತಾಲ್ಲೂಕಿನ ಕಲ್ಲೇದೇವರಪುರದ ರೈತ ವಾಮದೇವಯ್ಯ ಅವರ ರೇಷ್ಮೆ ಶೆಡ್ ಸಂಪೂರ್ಣ ಹಾನಿಯಾಗಿದೆ. ಆಕನೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಹೆಂಚುಗಳು ಬಿದ್ದುಹೋಗಿವೆ ಎಂದು ತಹಶೀಲ್ದಾರ್ ಚಂದ್ರಶೇಖರ ನಾಯ್ಕ ತಿಳಿಸಿದರು.

ದೊಣೆಹಳ್ಳಿ ಗ್ರಾಮ ಜಯಶೀಲರೆಡ್ಡಿ ಅವರಿಗೆ ಸೇರಿದ ಮನೆಯ ಮೇಲಿನ ಸಿಮೆಂಟ್ ಶೀಟ್‌ಗಳು ಪುಡಿಪುಡಿಯಾಗಿವೆ. ‌ಸಮೀಪದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಮೂಕಣ್ಣ ಅವರ ಅಂಗಡಿಯ ಶೀಟ್‌ಗಳು ಹಾರಿ ಹೋಗಿದೆ. ಗ್ರಾಮದ ಅಲ್ಲಲ್ಲಿ ಮರಗಳು ಧರೆಗುರುಳಿವೆ. ವಿದ್ಯುತ್ ತಂತಿಗಳ ಮೇಲೆ ಮರದ ರೆಂಬೆಗಳು ಬಿದ್ದು ಹಾನಿಯಾಗಿದೆ.

ಹಳ್ಳದಂತಾದ ಸೇವಾ ರಸ್ತೆ:

ದೊಣೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಮೇಲ್ಸೇತುವೆಯ ಸರ್ವೀಸ್‌ ರಸ್ತೆಯಲ್ಲಿ ನೀರು ನಿಂತಿದ್ದು, ಸಂಚಾರ ಸಮಸ್ಯೆಯಾಗಿತ್ತು.

ಅವೈಜ್ಞಾನಿಕ ಹೆದ್ದಾರಿ ಕಾಮಗಾರಿಯ ಪರಿಣಾಮ ಪ್ರತಿ ಮಳೆಗಾಲದಲ್ಲೂ ಈ ರಸ್ತೆ ಹೊಂಡದಂತಾಗುತ್ತಿದೆ ಎಂದು ಸಾರ್ವಜನಿಕರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೊಣೆಹಳ್ಳಿ ಮತ್ತು ಕಲ್ಲೇದೇವಪುರದಲ್ಲಿ ಗಾಳಿಗೆ ಹಾರಿ ಹೋದ ಶೀಟ್‌ಗಳು
ದೊಣೆಹಳ್ಳಿ ಮತ್ತು ಕಲ್ಲೇದೇವಪುರದಲ್ಲಿ ಗಾಳಿಗೆ ಹಾರಿ ಹೋದ ಶೀಟ್‌ಗಳು
ಜಗಳೂರು ತಾಲ್ಲೂಕು ದೊಣೆಹಳ್ಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ ಸೆವಾ ರಸ್ತೆ ಹೊಂಡದಂತಾಗಿದ್ದು ಪ್ರಯಾಣಿಕರು ಪರದಾಡುವಂತಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.