ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಸಂಜೆ ಮತ್ತು ರಾತ್ರಿ ಉತ್ತಮ ಮಳೆಯಾಗಿದೆ.
ದಾವಣಗೆರೆ ಗ್ರಾಮಾಂತರ ಪ್ರದೇಶಗಳಲ್ಲಿ ಸಂಜೆಯೇ ಮಳೆ ಸುರಿಯತೊಡಗಿದರೆ, ನಗರದಲ್ಲಿ ರಾತ್ರಿ ಮಳೆ ಬಂದಿದೆ. ಬಿತ್ತನೆಗೆ ತಯಾರಿ ಮಾಡಿಕೊಂಡಿದ್ದ ರೈತರು ಕೆಲವು ದಿನಗಳಿಂದ ಮಳೆ ಇಲ್ಲದೇ ಕಂಗಾಲಾಗಿದ್ದರು. 15 ದಿನಗಳ ಬಳಿಕ ಈಗ ಮತ್ತೆ ಮಳೆ ಸುರಿಯತೊಡಗಿರುವುದು ರೈತರಿಗೆ ತುಸು ನೆಮ್ಮದಿ ತಂದಿದೆ.
ಚನ್ನಗಿರಿಯಲ್ಲಿ ಚರಂಡಿ ತುಂಬಿ ಹರಿಯುವಷ್ಟು ಮಳೆಯಾಗಿದೆ. ಜಗಳೂರಿನಲ್ಲಿ ಹದ ಮಳೆಯಾಗಿದೆ. ಹೊನ್ನಾಳಿ, ನ್ಯಾಮತಿ, ಹರಿಹರ ತಾಲ್ಲೂಕುಗಳಲ್ಲಿ ಉತ್ತಮ ಮಳೆಯಾಗಿದೆ.
ಉಚ್ಚಂಗಿದುರ್ಗ ವರದಿ: ಅರಸೀಕೆರೆ ಹೋಬಳಿಯಾದ್ಯಂತ ಭಾನುವಾರ
ರಾತ್ರಿ ಸಾಧಾರಣ ಮಳೆಯಾಗಿದೆ.
ಮಧ್ಯಾಹ್ನದಿಂದಲೇ ಮೋಡ ಕವಿದ ವಾತವರಣ ನಿರ್ಮಾಣವಾಗಿತ್ತು. ಸಣ್ಣ ಗುಡುಗಿನ ಮೂಲಕ ರಾತ್ರಿ 10ರ ಸುಮಾರಿಗೆ ಆರಂಭವಾದ ಮಳೆ 2 ಗಂಟೆಗೂ ಹೆಚ್ಚು ಕಾಲ ಎಡೆಬಿಡದೇ ಸುರಿಯಿತು.
ಹೋಬಳಿ ವ್ಯಾಪ್ತಿಯಲ್ಲಿ ಈಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಂಡಿದ್ದು, ಕಳೆದ 20 ದಿನಗಳಿಂದ ಮಳೆ ಕೊರತೆಯಿಂದ ಭೂಮಿಯ ತೇವಾಂಶ ಕೊರತೆ ಉಂಟಾಗಿ ಬೆಳೆ ಬಾಡಲಾರಂಭಿಸಿದ್ದವು. ಮಳೆ ವಿರಾಮ ನೀಡಿದ್ದರಿಂದ ಹೊಲದಲ್ಲಿನ ಕಳೆ, ಎಡಿಕೊಂಟೆ ಕಾರ್ಯದಲ್ಲಿ ರೈತರು ತಲ್ಲೀನರಾಗಿದ್ದರು. ಹೊಲದ ಕೆಲಸ ಮುಗಿಸಿದ ರೈತರು ಮಳೆಗಾಗಿ ಕಾಯುತ್ತಿದ್ದರು. ರಾತ್ರಿ ಸುರಿದ ಮಳೆ ಹೋಬಳಿ ರೈತರಲ್ಲಿ ಮಂದಹಾಸ ಮೂಡಿಸಿದೆ. ಕೃಷಿ ಚಟುವಟಿಕೆ ಬಿರುಸುಗೊಳ್ಳುವ ವಿಶ್ವಾಸವನ್ನು ರೈತರು ವ್ಯಕ್ತಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.