ADVERTISEMENT

ಜಗಳೂರು | ಮಳೆಗಾಳಿ: 66 ಎಕರೆ ತೋಟಗಾರಿಕೆ ಬೆಳೆ ನಾಶ

​ಪ್ರಜಾವಾಣಿ ವಾರ್ತೆ
Published 10 ಮೇ 2022, 2:52 IST
Last Updated 10 ಮೇ 2022, 2:52 IST
ಬಸವಾಪಟ್ಟಣದಲ್ಲಿ ಭಾನುವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಪರಮೇಶ್ವರನಾಯ್ಕ್ ಅವರಿಗೆ ಸೇರಿದ 60ಕ್ಕೂ ಅಡಿಕೆ ಮರಗಳು ನೆಲಕ್ಕೆ ಉರುಳಿವೆ.
ಬಸವಾಪಟ್ಟಣದಲ್ಲಿ ಭಾನುವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಪರಮೇಶ್ವರನಾಯ್ಕ್ ಅವರಿಗೆ ಸೇರಿದ 60ಕ್ಕೂ ಅಡಿಕೆ ಮರಗಳು ನೆಲಕ್ಕೆ ಉರುಳಿವೆ.   

ಜಗಳೂರು: ತಾಲ್ಲೂಕಿನ ಬಿಳಿಚೋಡು ಹೋಬಳಿ ವ್ಯಾಪ್ತಿಯಲ್ಲಿ ಭಾನುವಾರ ರಾತ್ರಿ ಭಾರಿ ಮಳೆ ಗಾಳಿಯಿಂದಾಗಿ 67ಎಕರೆ ತೋಟಗಾರಿಕೆ ಬೆಳೆಗಳು ನಾಶವಾಗಿದ್ದು, 14 ಮನೆಗಳಿಗೆ ಹಾನಿಯಾಗಿದೆ.

ಬಿಳಿಚೋಡು ಹೋಬಳಿ ವ್ಯಾಪ್ತಿಯ ಬಿಳಿಚೋಡು, ಚಿಕ್ಕಾರಕೆರೆ, ಹಾಲೇಕಲ್ಲು, ಕೊಡದಗುಡ್ಡ,ಹೊಸಕೆರೆ,ಮಾಚಿಕೆರೆ, ಗುಡ್ಡದನಿಂಗನಹಳ್ಳಿ ಸೇರಿದಂತೆ 21 ಹಳ್ಳಿಗಳಲ್ಲಿ ತೋಟಗಳಿಗೆ ಹಾನಿಯಾಗಿದೆ.

ಅಡಿಕೆ, ನುಗ್ಗೆ, ಬಾಳೆ, ಎಲೆಬಳ್ಳಿ ತೋಟ, ಹಲಸು, ಮಾವು, ಹಾಗೂ ತೆಂಗಿನ ಮರಗಳು ಸೇರಿ 67 ಎಕರೆ ಪ್ರದೇಶದಲ್ಲಿ ₹50 ಲಕ್ಷಕ್ಕೂ ಹೆಚ್ಚು ಹಾನಿಯಾಗಿದೆ. ಚಿಕ್ಕಬನ್ನಿಹಟ್ಟಿ, ಕೊರಟಿಕೆರೆ, ಚಿಕ್ಕಅರಕೆರೆ, ಮೆದಿಕೆರೇನಹಳ್ಳಿ ಸೇರಿ 14 ಹಳ್ಳಿಗಳಲ್ಲಿ 20 ಮನೆಗಳು ಕುಸಿದಿದ್ದು, ₹7 ಲಕ್ಷಕ್ಕೂ ಹೆಚ್ಚು ನಷ್ಟವಾಗಿದೆ.

ADVERTISEMENT

ಮಳೆಗಾಳಿಯಿಂದ ಬೆಳೆಹಾನಿ ಯಾಗಿರುವ ಗುಡ್ಡದ ನಿಂಗನಹಳ್ಳಿ, ಐನಹಳ್ಳಿ ಮುಂತಾದ ಗ್ರಾಮದ ತೋಟ ಗಳಿಗೆ ಶಾಸಕ ಎಸ್.ವಿ. ರಾಮಚಂದ್ರ ಹಾಗೂ ತಹಶೀಲ್ದಾರ್ ಸಂತೋಷ್ ಕುಮಾರ್, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು.

ಉರುಳಿದ ಅಡಿಕೆ ಮರಗಳು
ಬಸವಾಪಟ್ಟಣ:
ಈ ಭಾಗದಲ್ಲಿ ಭಾನುವಾರ ರಾತ್ರಿ ಬೀಸಿದ ಭಾರಿ ಬಿರುಗಾಳಿಗೆ ಇಲ್ಲಿನ ಶೃಂಗಾರ್‌ ಬಾಗ್‌ ತಾಂಡಾ ವಾಸಿ ಪರಮೇಶ್ವರ ನಾಯ್ಕ್‌ ಎಂಬುವವರ ಮೊಹದೀನ್‌ ಪುರ ಪ್ರದೇಶದ ತೋಟದಲ್ಲಿ 60ಕ್ಕೂ ಹೆಚ್ಚು ಅಡಿಕೆ ಮರಗಳು ಬುಡಸಮೇತ ನೆಲಕ್ಕೆ ಉರುಳಿವೆ.

‘13 ವರ್ಷಗಳ ಫಲಭರಿತ ಅಡಿಕೆ ಗಿಡಗಳು ನೆಲಕ್ಕೆ ಉರುಳಿದ್ದು, ಇದರಿಂದ ಲಕ್ಷಾಂತರ ರೂಪಾಯಿ ನಷ್ಟವಾಗಿದೆ. ಇರುವ ಕೇವಲ ಒಂದೂವರೆ ಎಕರೆ ಭೂಮಿಯಲ್ಲಿ ಅಡಿಕೆ ತೋಟ ಮಾಡಿದ್ದೆ. ಬಿರುಗಾಳಿಗೆ ತೋಟದ ಬಹುಪಾಲು ಮರಗಳು ನಾಶವಾಗಿದ್ದು, ಫಲಕ್ಕೆ ಬಂದ ಫಸಲು ಕೈಗೆ ಬಾರದಂತಾಗಿದೆ. ಸರ್ಕಾರ ಪ್ರಕೃತಿ ವಿಕೋಪ ನಿಧಿಯಿಂದ ಪರಿಹಾರವನ್ನು ನೀಡಬೇಕು. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು’ ಎಂದು ರೈತ ಪರಮೇಶ್ವರನಾಯ್ಕ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಸಮೀಪದ ಕಣಿವೆಬಿಳಚಿಯ ಮುಖ್ಯ ರಸ್ತೆಯಲ್ಲಿರುವ ಮಂಜುನಾಥ್‌ ಎಂಬುವವರ ಮನೆಯ ಮುಂದೆ ಇದ್ದ ಭಾರಿ ಗಾತ್ರದ ನೀಲಗಿರಿ ಮರ ವಿದ್ಯುತ್‌ ಕಂಬಗಳ ಮೇಲೆ ಉರುಳಿದೆ. 10ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳು ನೆಲಕ್ಕೆ ಬಿದ್ದಿವೆ. ಗ್ರಾಮದಲ್ಲಿ ವಿದ್ಯುತ್‌ ಸರಬರಾಜು ಸ್ಥಗಿತಗೊಂಡಿದ್ದು, ಸೋಮವಾರ ಮರವನ್ನು ತೆರವುಗೊಳಿಸ ಲಾಯಿತು’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಸ್‌.ಅಣ್ಣೋಜಿರಾವ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.