ADVERTISEMENT

ದಾವಣಗೆರೆ ಜಿಲ್ಲೆಯ ವಿವಿಧೆಡೆ ಮಳೆ: ಬೆಳೆ ಹಾನಿ

ವರ್ಷಧಾರೆಗೆ ಪುಳಕಿತಗೊಂಡ ಜನ

​ಪ್ರಜಾವಾಣಿ ವಾರ್ತೆ
Published 21 ಮೇ 2019, 15:36 IST
Last Updated 21 ಮೇ 2019, 15:36 IST
ಮಲೇಬೆನ್ನೂರು ಸಮೀಪದ ಹರಳಹಳ್ಳಿ ಗ್ರಾಮದ ಹೊರವಲಯದಲ್ಲಿನ ಕಾಳುಕಾಟ್ಟಿದ್ದ ಭತ್ತದ ಗದ್ದೆ ಮಂಗಳವಾರ ಸುರಿದ ಆಲಿಕಲ್ಲು ಮಳೆಗೆ ಭತ್ತದ ಕಾಳು ಉದುರಿ ಹೋಗಿವೆ
ಮಲೇಬೆನ್ನೂರು ಸಮೀಪದ ಹರಳಹಳ್ಳಿ ಗ್ರಾಮದ ಹೊರವಲಯದಲ್ಲಿನ ಕಾಳುಕಾಟ್ಟಿದ್ದ ಭತ್ತದ ಗದ್ದೆ ಮಂಗಳವಾರ ಸುರಿದ ಆಲಿಕಲ್ಲು ಮಳೆಗೆ ಭತ್ತದ ಕಾಳು ಉದುರಿ ಹೋಗಿವೆ   

ದಾವಣಗೆರೆ: ಜಿಲ್ಲೆಯ ವಿವಿಧೆಡೆ ಮಂಗಳವಾರ ಸಂಜೆ ಗುಡುಗು ಸಹಿತ ಆಲಿಕಲ್ಲು ಮಳೆ ಸುರಿಯಿತು.

ಜಿಲ್ಲೆಯ ಹರಪನಹಳ್ಳಿ, ಚನ್ನಗಿರಿ, ಉಚ್ಚಂಗಿದುರ್ಗ, ಹೊನ್ನಾಳಿ ತಾಲ್ಲೂಕಿನ ಕುಂದೂರು, ಸೇರಿ ವಿವಿಧ ಭಾಗಗಳಲ್ಲಿ ಮಳೆಯಾಯಿತು.

ದಾವಣಗೆರೆಯಲ್ಲಿ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನುಗ್ಗಿ ಸಂಚಾರ ಅಸ್ತವ್ಯಸ್ತಗೊಂಡಿತು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದಾಗಿ ಜನರು ಪುಳಕಿತಗೊಂಡರು. ರಸ್ತೆಯ ಹೊರಗೆ ಬಂದು ನೃತ್ಯ ಮಾಡಿ ಖುಷಿಪಟ್ಟರು.

ADVERTISEMENT

ಮಳೆ ರಭಸಕ್ಕೆ ಮೋರಿಗಳು ಸ್ವಚ್ಛವಾದವು, ಬಿಸಿ ಇದ್ದ ವಾತಾವರಣ ತಂಪಾಗಿದ್ದು, ವಿದ್ಯುತ್ ಪೂರೈಕೆ ಸ್ಥಗಿತಗೊಂಡಿತ್ತು.

ಮಳೆಯಿಂದಾಗಿ ಭದ್ರಾ ಅಚ್ಚುಕಟ್ಟು ವ್ಯಾಪ್ತಿಯ ಕೊನೆಭಾಗದ ರೈತರಿಗೆ ವರದಾನವಾಗಿದ್ದು, ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಉಚ್ಚಂಗಿದುರ್ಗ ವರದಿ:

ಇಲ್ಲಿಗೆ ಸಮೀಪದ ಅರಸೀಕೆರೆ ಹೋಬಳಿಯ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ.

ಸಂಜೆ ಮೋಡ ಕವಿದ ವಾತಾವರಣ ನಿರ್ಮಾಣಗೊಂಡಿತು. ಬಿರುಗಾಳಿ, ಗುಡುಗು ಸಿಡಿಲಿನ ಅಬ್ಬರದ ನಡುವೆ ಮಳೆ ಸುರಿಯಿತು. ಅರ್ಧ ಗಂಟೆ ತಂಪೆರೆದ ಮಳೆಯಿಂದಾಗಿ ಅರಸೀಕೆರೆ ವ್ಯಾಪ್ತಿಯ ಜನರು ಕೆಲ ಕಾಲ ತಂಪು ವಾತಾವರಣ ಸವಿಯುವಂತಾಯಿತು.

ತವಡೂರು, ಉಚ್ಚಂಗಿದುರ್ಗ, ಹಿರೇಮೆಗಳಗೆರೆ, ಕಂಚಿಕೆರೆ, ಚಟ್ನಿಹಳ್ಳಿ ಪಂಚಾಯಿತಿ ವ್ಯಾಪ್ತಿಯಲ್ಲಿ ಸ್ವಲ್ಪ ಮಳೆಯಾಗಿದೆ. ಬಸಾಪುರ, ಯರಬಳ್ಳಿ, ತಿಮಲಾಪುರ ಉತ್ತಮ ಮಳೆಯಾಗಿದೆ.

ಸಾಸ್ವೆಹಳ್ಳಿ ವರದಿ:

ಹೋಬಳಿಯ ಕುಂದೂರು ಸೇರಿ ವಿವಿಧೆಡೆ ಮಂಗಳವಾರ ಸಂಜೆ ಕೃತ್ತಿಕಾ ಮಳೆ ಉತ್ತಮವಾಗಿ ಸುರಿಯುವ ಮೂಲಕ ಕೆಂಡದಂತೆ ಕಾದ ಧರೆಗೆ ಕೊಂಚ ತಂಪೆರೆಯಿತು.

ಕುಂದೂರು ಸುತ್ತಮುತ್ತಲ ಗ್ರಾಮಗಳಲ್ಲಿ ಮಂಗಳವಾರ ಸಂಜೆ 6ರಿಂದ 7ರವರೆಗೆ ಉತ್ತಮ ಮಳೆ ಸುರಿಯಿತು. ಮಂಗಳವಾರ ಸುರಿದ ಮಳೆಯಿಂದಾಗಿ ಭತ್ತದ ಒಕ್ಕಲು ಕಾರ್ಯಕ್ಕೆ ಕೊಂಚ ತೊಂದರೆಯಾಯಿತು. ಅಡಿಕೆ ತೋಟಗಳಿಗೂ ಈ ಮಳೆ ಸಂಜೀವಿನಿಯಂತಾಗಿದೆ.

‘ಅಡಿಕೆ ತೋಟಗಳನ್ನು ಉಳಿಸಿಕೊಳ್ಳಲು ರೈತರು ಭದ್ರಾ ನಾಲೆಗಳಿಂದ ಟ್ಯಾಂಕರ್ ಮೂಲಕ ನೀರು ಹರಿಸುತ್ತಿದ್ದರು. ಯುಗಾದಿ ಹಬ್ಬದ ನಂತರ ಪ್ರತಿ ವರ್ಷ ಮೂರರಿಂದ ನಾಲು ಮಳೆಗಳು ಸುರಿಯುತ್ತಿದ್ದವು. ಆಗ ಭೂಮಿ ತಂಪಾಗುತ್ತಿತ್ತು. ಆದರೆ, ಈ ಬಾರಿ ಯುಗಾದಿ ಹಬ್ಬದ ನಂತರ ಒಂದೂ ಗಟ್ಟಿ ಮಳೆ ಬರಲಿಲ್ಲ, ಈ ಕಾರಣಕ್ಕಾಗಿ ಭೂಮಿ ಕಾದ ಕಾವಲಿಯಂತಾಗಿತ್ತು. ಉಷ್ಣಾಂಶ 44 ಡಿಗ್ರಿ ಸೆಂಟಿಗ್ರೇಡ್‍ವರೆಗೂ ಹೆಚ್ಚಳವಾಗಿತ್ತು’ ಎಂದು ಹೇಳುತ್ತಾರೆ ಯಕ್ಕನಹಳ್ಳಿ ಗ್ರಾಮದ ಟಿ.ಎಸ್. ಜಗದೀಶ್.

ಚನ್ನಗಿರಿ ವರದಿ:

ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಂಗಳವಾರ ಸಂಜೆ ಆಲಿಕಲ್ಲು ಮಳೆಯಾಗಿದೆ. ಪಟ್ಟಣದಲ್ಲಿ 10 ನಿಮಿಷ ಕಾಲ ಸಾಧಾರಣ ಮಳೆಯಾಗಿದೆ.

ತಾಲ್ಲೂಕಿನ ಆಗರಬನ್ನಿಹಟ್ಟಿ, ಗರಗ, ಗುಳ್ಳೇಹಳ್ಳಿ ಹಾಗೂ ಬುಳುಸಾಗರ ಗ್ರಾಮಗಳಲ್ಲಿ ಆಲಿಕಲ್ಲು ಸಹಿತ ಉತ್ತಮ ಮಳೆಯಾಗಿದೆ. ಉಳಿದಂತೆ ತಾಲ್ಲೂಕಿನ ಬುಸ್ಸೇನಹಳ್ಳಿ, ಬೆಂಕಿಕೆರೆ, ಹೊದಿಗೆರೆ, ನಾರಶೆಟ್ಟಿಹಳ್ಳಿ ಗ್ರಾಮಗಳಲ್ಲಿ ಮಳೆಯಾಗಿದೆ. ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯಕ್ಕೆ ರೈತರು ಸಿದ್ದತೆಯನ್ನು ಮಾಡಿಕೊಳ್ಳುತ್ತಿದ್ದಾರೆ. ಎರಡು ದಿನಗಳಿಂದ ತಾಲ್ಲೂಕಿನ ಹಲವು ಭಾಗಗಳಲ್ಲಿ ಉತ್ತಮವಾಗಿ ಮುಂಗಾರು ಪೂರ್ವ ಮಳೆಯಾಗುತ್ತಿದೆ.

ಸಾಸ್ವೆಹಳ್ಳಿ ವರದಿ: ಹೋಬಳಿಯ ಹನುಮನಹಳ್ಳಿ, ಕ್ಯಾಸಿನಕೆರೆ, ಕುಳಗಟ್ಟೆ, ಹಟ್ಟಿಹಾಳ್, ಹುಣಸಘಟ್ಟಗಳಲ್ಲಿ ಗುಡುಗು ಸಿಡಿಲು ಸಹಿತ ಮಳೆಯಾಗಿದೆ.

ಸಾಸ್ವೆಹಳ್ಳಿ, ಲಿಂಗಾಪುರ, ಮಾವಿನಕೋಟೆಯಲ್ಲಿ ಸಾಧಾರಣ ಮಳೆಯಾಗಿದೆ. ಭೈರನಹಳ್ಳಿಯಲ್ಲಿ ಆಲಿಕಲ್ಲು ಸಹಿತ ಮಳೆಯಾದ ಬಗ್ಗೆ ವರದಿಯಾಗಿದೆ. ಭತ್ತದ ಬೆಳೆ ಕಟಾವಿಗೆ ಬಂದಿರುವುದರಿಂದ ರೈತರಲ್ಲಿ ಕ್ಷಣಕಾಲ ಆತಂಕ ಮೂಡಿಸಿತು. ಆದರೆ, ಯಾವುದೇ ಹಾನಿಯಾಗಿಲ್ಲ. ಅಡಿಕೆ, ತೆಂಗು, ಬಾಳೆ ಬೆಳೆದ ರೈತರಲ್ಲಿ ಮಳೆಯಿಂದಾಗಿ ಮಂದಹಾಸ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.