ADVERTISEMENT

ರಾಮಮಂದಿರ ನಿರ್ಮಾಣ: ದಾವಣಗೆರೆಯ ನಂಟು

​ಪ್ರಜಾವಾಣಿ ವಾರ್ತೆ
Published 22 ಜನವರಿ 2024, 7:51 IST
Last Updated 22 ಜನವರಿ 2024, 7:51 IST
ಅಯೋಧ್ಯೆಯ ರಾಮಜನ್ಮ ಭೂಮಿ ಸ್ಥಳದಲ್ಲಿ ದಾವಣಗೆರೆಯ ಬಿಡಿಟಿಯಲ್ಲಿ ಓದಿದ್ದ ಎಂಜಿನಿಯರ್‌ ಟಿ.ಜಿ.ಸೀತಾರಾಂ
ಅಯೋಧ್ಯೆಯ ರಾಮಜನ್ಮ ಭೂಮಿ ಸ್ಥಳದಲ್ಲಿ ದಾವಣಗೆರೆಯ ಬಿಡಿಟಿಯಲ್ಲಿ ಓದಿದ್ದ ಎಂಜಿನಿಯರ್‌ ಟಿ.ಜಿ.ಸೀತಾರಾಂ   

ಮಲೇಬೆನ್ನೂರು: ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರದ ಅಡಿಪಾಯದ ಕಾಮಗಾರಿ, ವಿನ್ಯಾಸ ಹಾಗೂ ಸಲಹಾ ಸಮಿತಿ ಸದಸ್ಯರಾಗಿ ಕನ್ನಡಿಗ ಡಾ.ಟಿ.ಜಿ. ಸೀತಾರಾಮ್‌ ಅವರು ಕಾರ್ಯ ನಿರ್ವಹಿಸುವ ಮೂಲಕ ದೇವನಗರಿಯ ಕೀರ್ತಿ ಹೆಚ್ಚಿಸಿದ್ದಾರೆ.

ಕೇಂದ್ರ ಸರ್ಕಾರದ ಕಾರ್ಯಸೂಚಿಯಂತೆ ರಾಮ ಮಂದಿರ ನಿರ್ಮಾಣ ಸಮಿತಿಯ ಸದಸ್ಯರನ್ನಾಗಿ ಸೀತಾರಾಮ್‌ ಅವರನ್ನು 2020ರ ಸೆಪ್ಟಂಬರ್‌ನಲ್ಲಿ ಮುಖ್ಯಸ್ಥ ನೃಪೇಂದು ಮಿಶ್ರಾ ಆಯ್ಕೆ ಮಾಡಿದ್ದರು.

ಸತತ 1 ವರ್ಷ ಮಂದಿರ ಕಟ್ಟಡದ ನಿರ್ಮಾಣ ಸ್ಥಳದ ಅಧ್ಯಯನ ನಡೆಸಿ ಭೂಕಂಪ, ಪ್ರವಾಹ ಮತ್ತಿತರ ಪ್ರಕೃತಿ ವಿಕೋಪ ಎದುರಿಸುವಂತಹ, ಸಾವಿರಾರು ವರ್ಷ ಕಟ್ಟಡ ಬಾಳಿಕೆ ಬರುವಂತಹ ಭದ್ರ ಬುನಾದಿ ವಿನ್ಯಾಸಗೊಳಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ADVERTISEMENT

ಸೀತಾರಾಮ್‌ ಅವರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳುಕು ಗ್ರಾಮದವರು. ತಾಯಿ ವತ್ಸಲಾ, ತಂದೆ ಟಿ. ಗುಂಡೂರಾಯ. ಸ್ವಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿ, ಹರಿಹರ ತಾಲ್ಲೂಕಿನ ಮಲೇಬೆನ್ನೂರಿನಲ್ಲಿ ಪ್ರೌಢ ಶಿಕ್ಷಣ, ಬೆಂಗಳೂರಿನ ನ್ಯಾಷನಲ್‌ ಕಾಲೇಜಿನಲ್ಲಿ ಪಿಯುಸಿ, ದಾವಣಗೆರೆಯ ಬಿಡಿಟಿ ಕಾಲೇಜಿನಲ್ಲಿ 1984ನೇ ಸಾಲಿನಲ್ಲಿ ಸಿವಿಲ್‌ ಎಂಜಿನಿಯರಿಂಗ್‌ ಓದಿದ್ದಾರೆ.

ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಸೇರಿ ಮಾಸ್ಟರ್ಸ್‌ ಪದವಿ, ಕೆನಡಾದ ವಾಟರ್‌ ಲೂನಲ್ಲಿ ಪಿಎಚ್‌.ಡಿ ಅಧ್ಯಯನ ಮಾಡಿ 1994ರಲ್ಲಿ ಮತ್ತೆ ಇಂಡಿಯನ್‌ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ ಬೆಂಗಳೂರಿನಲ್ಲಿ ಸೇವೆ ಆರಂಭಿಸಿ, ಹಾಲಿ ದೆಹಲಿಯಲ್ಲಿ ಎಐಸಿಟಿಇ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ವಿಶೇಷತೆ: ರಾಮ ಮಂದಿರದ ಸಂಕೀರ್ಣ 2.77 ಎಕರೆ ವಿಸ್ತೀರ್ಣ ಹೊಂಡಿದ್ದು, ದೇವಾಲಯ 380 ಅಡಿ ಉದ್ದ, 250 ಅಡಿ ಅಗಲ, 161 ಅಡಿ ಎತ್ತರವಿದೆ. 3 ಅಂತಸ್ತುಗಳನ್ನು ಹೊಂದಿರುವ ದೇವಾಲಯದ ಅತಿ ಆಳವಿಲ್ಲದ ಅಡಿಪಾಯ (ಶ್ಯಾಲೋ ಫೌಂಡೇಷನ್‌) ತಂತ್ರಜ್ಞಾನದಡಿ ಉಕ್ಕನ್ನು ಉಪಯೋಗಿಸದೆ ಕಡಿಮೆ ಪ್ರಮಾಣದಲ್ಲಿ ಸಿಮೆಂಟ್‌ ಬಳಸಿ ನಿರ್ಮಿಸಲಾಗಿದೆ ಎಂದು ಡಾ.ಟಿ.ಜಿ. ಸೀತಾರಾಮ್‌ ತಿಳಿಸಿದರು.

ಚಂದ್ರಕಾಂತ್‌ ಸೋಮಾಪುರ, ನಿಖಿಲ್‌ ಸೋಮಾಪುರ ಹಾಗೂ ಆಶಿಷ್‌ ಸೋಮಾಪುರ ಮುಖ್ಯ ವಿನ್ಯಾಸಗಾರರಾಗಿದ್ದಾರೆ. ಕಟ್ಟಡದ ಉಸ್ತುವಾರಿಯನ್ನು ಟಾಟಾ ಕನ್ಸಲ್ಟಿಂಗ್‌ ಎಂಜಿನಿಯರ್ಸ್‌, ಎಲ್‌ ಆ್ಯಂಡ್‌ ಟಿ ಕಂಪನಿ ಕಾಮಗಾರಿ ನಿರ್ವಹಿಸಿದೆ. ರಾಮ ಮಂದಿರ ಕಟ್ಟಡಕ್ಕೆ ಮುಖ್ಯ ಅಡಿಪಾಯ ಹಾಕುವ ಕೆಲಸ ಮಾಡಿರುವುದು ಸಂತಸ ತಂದಿದೆ ಎಂದು ಅವರು ಹೇಳಿದರು.

ಅಯೋಧ್ಯೆಯ ರಾಮಜನ್ಮ ಭೂಮಿ ಸ್ಥಳದಲ್ಲಿ ಎಂಜಿನಿಯರ್‌ ಟಿ.ಜಿ. ಸೀತಾರಾಂ ದಂಪತಿ

ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ವಿನ್ಯಾಸ ಸಲಹೆಗಾರ

ಡಾ.ಟಿ.ಜಿ. ಸೀತಾರಾಮ್‌ ಅವರು ಗುವಾಹತಿ ಚೆನ್ನೈ ಬಾಂಬೆ ಐಐಟಿ ಎನ್‌ಐಟಿ ಸೂರತ್‌ ರೂರ್ಕಿಯ ಸೆಂಟ್ರಲ್‌ ಬಿಲ್ಡಿಂಗ್‌ ರಿಸರ್ಚ್‌ ಇನ್‌ಸ್ಟಿಟ್ಯೂಟ್‌ ಹೈದರಾಬಾದ್‌ನ ನ್ಯಾಷನಲ್‌ ಜಿಯೊ ರೀಸರ್ಚ್‌ ಇನ್‌ಸ್ಟಿಟ್ಯೂಟ್‌ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ರಾಕ್‌ ಮೆಕ್ಯಾನಿಕ್ಸ್‌ ಹಾಗೂ ರಾಷ್ಟ್ರಿಯ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ವಿನ್ಯಾಸ ಸಲಹಾಗಾರರಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.