ADVERTISEMENT

ದಾವಣಗೆರೆ: ಸೆ.14ರಂದು ರಾಷ್ಟ್ರೀಯ ಲೋಕ ಅದಾಲತ್‌

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ಮಾಹಿತಿ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2024, 15:29 IST
Last Updated 11 ಸೆಪ್ಟೆಂಬರ್ 2024, 15:29 IST
ರಾಜೇಶ್ವರಿ ಎನ್.ಹೆಗಡೆ
ರಾಜೇಶ್ವರಿ ಎನ್.ಹೆಗಡೆ   

ದಾವಣಗೆರೆ: ತ್ವರಿತ ಹಾಗೂ ಕಡಿಮೆ ವೆಚ್ಚದಲ್ಲಿ ನ್ಯಾಯದಾನ ನೀಡಲು ರಾಷ್ಟ್ರೀಯ ಲೋಕ ಅದಾಲತ್‌ ಅನ್ನು ಸೆ.14ರಂದು ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಹಮ್ಮಿಕೊಳ್ಳಲಾಗಿದೆ. ವಿಚಾರಣೆಗೆ ಬಾಕಿ ಇರುವ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ರಾಜಿ ಮೂಲಕ ಇತ್ಯರ್ಥಪಡಿಸಲಾಗುವುದು ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶೆ ರಾಜೇಶ್ವರಿ ಎನ್.ಹೆಗಡೆ ತಿಳಿಸಿದರು.

‘ರಾಜಿಯಾಗಬಲ್ಲ ಸಿವಿಲ್ ಹಾಗೂ ಕ್ರಿಮಿನಲ್ ಪ್ರಕರಣಗಳನ್ನು ಅದಾಲತ್‌ಗೆ ಪರಿಗಣಿಸಲಾಗಿದೆ. ಅಪಘಾತ ಪರಿಹಾರ, ಚೆಕ್ ಅಮಾನ್ಯ, ಭೂಸ್ವಾಧೀನ, ಬ್ಯಾಂಕ್ ಸಾಲ, ಕೌಟುಂಬಿಕ, ಪಿಂಚಣಿ, ವಿದ್ಯುತ್, ನೀರಿನ ಶುಲ್ಕ, ಕಾರ್ಮಿಕರ ವೇತನ, ಆಸ್ತಿ ತೆರಿಗೆ ಸೇರಿ ಇತರ ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿದೆ. 8,272 ಕ್ಕಿಂತ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸುವ ಗುರಿ ಹೊಂದಲಾಗಿದೆ’ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಜಿಲ್ಲೆಯಲ್ಲಿ ಸೆ.9 ರವರೆಗೆ 42,523 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇವೆ. ದಾವಣಗೆರೆ ತಾಲ್ಲೂಕಿನ ಬಾವಿಹಾಳ, ಓಬಣ್ಣನಹಳ್ಳಿ ಹಾಗೂ ಶ್ರೀರಂಗಯ್ಯನಮಟ್ಟಿಯನ್ನು ವ್ಯಾಜ್ಯ ಮುಕ್ತ ಗ್ರಾಮಗಳೆಂದು ಘೋಷಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಅದಾಲತ್‍ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ತಾಲ್ಲೂಕು ನ್ಯಾಯಾಲಯದಲ್ಲಿ ಭಾಗವಹಿಸಬಹುದಾಗಿದೆ. ವಿಡಿಯೊ ಕಾನ್ಪರೆನ್ಸ್ ಮೂಲಕ ಪಾಲ್ಗೊಳ್ಳಲು ಅವಕಾಶವಿದೆ’ ಎಂದರು.

ADVERTISEMENT

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ ಮ.ಕರೆಣ್ಣವರ, ‘ಈ ಹಿಂದಿನ ಅದಾಲತ್‍ನಲ್ಲಿ 18 ದಂಪತಿಗಳು ಒಂದಾಗಿದ್ದರು. ಈ ಬಾರಿ 17 ದಂಪತಿ ಸಂದಾನದ ಮೂಲಕ ಒಂದಾಗಲು ಮುಂದೆ ಬಂದಿದ್ದಾರೆ. ತಾಲ್ಲೂಕು ನ್ಯಾಯಾಲಯಗಳಲ್ಲಿ ರಾಜಿ ಸಭೆಗಳು ನಡೆಯುತ್ತಿವೆ. ಜಗಳೂರಿನಲ್ಲಿ ನಡೆದ ಸಭೆಯಲ್ಲಿ 35 ಪ್ರಕರಣಗಳು ಇತ್ಯರ್ಥ ಹಂತಕ್ಕೆ ಬಂದಿವೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಟಿ.ಎಂ.ನಿವೇದಿತಾ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‍ಕುಮಾರ್, ಕಾರ್ಯದರ್ಶಿ ಎಸ್.ಬಸವರಾಜ್, ಜಂಟಿ ಕಾರ್ಯದರ್ಶಿ ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.