ADVERTISEMENT

ನಿಯಮಾವಳಿ ಉಲ್ಲಂಘನೆ: ರಿಲಯನ್ಸ್‌ ಮಾರ್ಕೆಟ್‌ಗೆ ಬೀಗಮುದ್ರೆ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2018, 20:19 IST
Last Updated 26 ಅಕ್ಟೋಬರ್ 2018, 20:19 IST
ದಾವಣಗೆರೆಯ ಹಳೆ ಪಿ.ಬಿ. ರಸ್ತೆಯಲ್ಲಿರುವ ‘ರಿಲಯನ್ಸ್‌ ಮಾರ್ಕೆಟ್‌’ಗೆ ಪಾಲಿಕೆ ಅಧಿಕಾರಿಗಳು ಶುಕ್ರವಾರ ಬೀಗಮುದ್ರೆ ಹಾಕುತ್ತಿರುವುದು
ದಾವಣಗೆರೆಯ ಹಳೆ ಪಿ.ಬಿ. ರಸ್ತೆಯಲ್ಲಿರುವ ‘ರಿಲಯನ್ಸ್‌ ಮಾರ್ಕೆಟ್‌’ಗೆ ಪಾಲಿಕೆ ಅಧಿಕಾರಿಗಳು ಶುಕ್ರವಾರ ಬೀಗಮುದ್ರೆ ಹಾಕುತ್ತಿರುವುದು   

ದಾವಣಗೆರೆ: ನಿಯಮಾವಳಿಗಳನ್ನು ಉಲ್ಲಂಘಿಸಿದ ಹಿನ್ನೆಲೆಯಲ್ಲಿ ನಗರದ ಪಿ.ಬಿ. ರಸ್ತೆಯ ‘ರಿಲಯನ್ಸ್‌ ಮಾರ್ಕೆಟ್‌’ ಮಳಿಗೆಗೆ ಮಹಾನಗರ ಪಾಲಿಕೆಯ ಅಧಿಕಾರಿಗಳು ಶುಕ್ರವಾರ ಬೀಗಮುದ್ರೆ ಹಾಕಿದರು.

ಪಾಲಿಕೆಯ ಆರೋಗ್ಯಾಧಿಕಾರಿ ಡಾ. ಚಂದ್ರಶೇಖರ್‌ ಸುಂಕದ ನೇತೃತ್ವದ ತಂಡವು ಸಂಜೆ ರಿಲಯನ್ಸ್‌ ಮಾರ್ಕೆಟ್‌ಗೆ ತೆರಳಿ, ಜಪ್ತಿ ಮಾಡುತ್ತಿರುವ ಬಗ್ಗೆ ನೋಟಿಸ್‌ ನೀಡಿತು. ಖರೀದಿಗೆ ಬಂದಿದ್ದ ಗ್ರಾಹಕರನ್ನು ಹಾಗೂ ಮಳಿಗೆಯ ಸಿಬ್ಬಂದಿಯನ್ನು ಹೊರಗೆ ಕಳುಹಿಸಿ, ಐದು ಬಾಗಿಲುಗಳನ್ನೂ ಮುಚ್ಚಿಸಿತು.

‘ಆಗಸ್ಟ್‌ 13ರಂದು ದಾಳಿ ನಡೆಸಿದಾಗ ಪ್ಲಾಸ್ಟಿಕ್‌ ಕ್ಯಾರಿಬ್ಯಾಗ್‌ ಬಳಕೆ, ಅವಧಿ ಮುಗಿದ ಆಹಾರ ಪದಾರ್ಥಗಳ ಮಾರಾಟ ಸೇರಿ ಹಲವು ನಿಮಯಗಳನ್ನು ಉಲ್ಲಂಘಿಸಿರುವುದು ಕಂಡು ಬಂದಿತ್ತು. ಈ ಬಗ್ಗೆ ನೋಟಿಸ್‌ ನೀಡಲಾಗಿತ್ತು. ಆದರೆ, ಸಮರ್ಪಕವಾಗಿ ಉತ್ತರವನ್ನು ನೀಡಿರಲಿಲ್ಲ. ಹೀಗಾಗಿ ಮಳಿಗೆಯನ್ನು ಜಪ್ತಿ ಮಾಡಿದ್ದೇವೆ’ ಎಂದು ಡಾ. ಚಂದ್ರಶೇಖರ್‌ ಸುಂಕದ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

‘ಅಗ್ನಿಶಾಮಕ ಮತ್ತು ತುರ್ತುಸೇವೆಗಳ ಅಗತ್ಯ ನಿರಾಕ್ಷೇಪಣಾ ಪತ್ರ ಪಡೆಯದೇ ನೀಡಿದ ನೀಲನಕ್ಷೆಗೆ ವಿರುದ್ಧ ಕಟ್ಟಡ ನಿರ್ಮಿಸಿರುವುದು, ಕಡಿಮೆ ಜಾಗವನ್ನು ತೋರಿಸಿ ತೆರಿಗೆ ವಂಚಿಸಿ ಟ್ರೇಡ್‌ ಲೈಸನ್ಸ್‌ ಪಡೆದಿರುವುದು, ಕಸ ವಿಲೇವಾರಿ ನಿಯಮಾವಳಿ ಪಾಲಿಸದಿರುವುದು, ಮತ್ತೆ ಅವಧಿ ಮುಗಿದ ಆಹಾರಗಳನ್ನು ಮಾರಾಟಕ್ಕೆ ಇಟ್ಟಿರುವ ಕಾರಣದಿಂದಾಗಿ ಶಿಸ್ತುಕ್ರಮ ಕೈಗೊಳ್ಳುತ್ತಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.