ADVERTISEMENT

ಧಾರ್ಮಿಕ ಆಚರಣೆ ವೈಚಾರಿಕವಾಗಿರಲಿ: ಜಿ. ರಂಗನಗೌಡ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 6:26 IST
Last Updated 27 ಅಕ್ಟೋಬರ್ 2025, 6:26 IST
ಬಸವಾಪಟ್ಟಣದ ಹಾಲಸ್ವಾಮಿ ಗವಿಮಠದಲ್ಲಿ ಭಾನುವಾರ ರಾತ್ರಿ ನಡೆದ 53ನೇ ಶಿವಯೋಗಾನುಷ್ಠಾನ ಕಾರ್ಯಕ್ರಮವನ್ನು ರಾಂಪುರ ಬೃಹನ್ಮಠದ ಶಿವಕುಮಾರಸ್ವಾಮೀಜಿ ಉದ್ಘಾಟಿಸಿದರು
ಬಸವಾಪಟ್ಟಣದ ಹಾಲಸ್ವಾಮಿ ಗವಿಮಠದಲ್ಲಿ ಭಾನುವಾರ ರಾತ್ರಿ ನಡೆದ 53ನೇ ಶಿವಯೋಗಾನುಷ್ಠಾನ ಕಾರ್ಯಕ್ರಮವನ್ನು ರಾಂಪುರ ಬೃಹನ್ಮಠದ ಶಿವಕುಮಾರಸ್ವಾಮೀಜಿ ಉದ್ಘಾಟಿಸಿದರು   

ಬಸವಾಪಟ್ಟಣ: ನಮ್ಮ ಧಾರ್ಮಿಕ ಆಚರಣೆಗಳು ಈಗಿನ ಪೀಳಿಗೆಯನ್ನು ಮೂಢ ನಂಬಿಕೆಯಿಂದ ದಾರಿ ತಪ್ಪಿಸದೇ ವೈಚಾರಿಕೆಯಿಂದ ಕೂಡಿರಬೇಕು ಎಂದು ಸಾಹಿತಿ ಜಿ. ರಂಗನಗೌಡ ಹೇಳಿದರು.

ಇಲ್ಲಿನ ಹಾಲಸ್ವಾಮಿ ಗವಿಮಠದಲ್ಲಿ ಭಾನುವಾರ ರಾತ್ರಿ ಆರಂಭವಾದ 21 ದಿನಗಳ ಇಷ್ಟಲಿಂಗ ಶಿವಯೋಗಾನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದು ವೈಚಾರಿಕ ಯುಗ. ಈ ಕಾಲದ ಯುವ ಜನ ಸಾಕಷ್ಟು ವಿದ್ಯಾವಂತರಾಗಿದ್ದು, ನಮ್ಮ ಪುರಾತನ ಆಚರಣೆಗಳನ್ನು ಪ್ರಶ್ನಿಸುವಷ್ಟು ಬದ್ಧರಾಗಿದ್ದಾರೆ. ನಾವು ಆಚರಿಸುವ ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು ಅರ್ಥಪೂರ್ಣವಾಗಿದ್ದು, ಅವುಗಳಿಂದ ಮಾನವ ಸಮಾಜಕ್ಕೆ ಪ್ರಯೋಜನ ವಾಗುವಂತಿರಬೇಕು. ನಾವು ನಡೆಸುವ ಹಬ್ಬ ಹರಿದಿನಗಳು, ದೈನಂದಿನ ಆಚರಣೆಗಳು ಮಾನವನ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಕ್ಕೆ ಪೂರಕವಾಗಿರಬೇಕೇ ಹೊರೆತು, ಅಂಧಾನುಕರಣೆಯಾಗಬಾರದು. 12ನೇ ಶತಮಾನದಲ್ಲಿ ಬಸವೇಶ್ವರರು ಹಾಗೂ ಅವರ ಅನುಯಾಯಿಗಳು ಇದಕ್ಕೆ ದಾರಿ ದೀಪವಾಗಿದ್ದು, ಅಲ್ಲಿಂದ ಈ ಜಗತ್ತಿನಲ್ಲಿ ಉಗಮವಾದ ಸಾಹಿತ್ಯ ಕ್ಷೇತ್ರ ಇದಕ್ಕೆ ಸಾಕಷ್ಟು ಬೆಂಬಲ ನೀಡಿದೆ. ವೈಚಾರಿಕತೆಯಿಂದ ಜೀವನ ನಡೆಸಿದಲ್ಲಿ ದೇಶದ ಹಾಗೂ ಜಗತ್ತಿನ ಕಲ್ಯಾಣ ಸಾಧ್ಯ ಎಂದು ರಂಗನಗೌಡರು ಹೇಳಿದರು.

ADVERTISEMENT

ಕಾರ್ಯಕ್ರಮ ಉದ್ಘಾಟಿಸಿದ ರಾಂಪುರ ಬೃಹನ್ಮಠದ ಶಿವಕುಮಾರಸ್ವಾಮೀಜಿ ಮಾತನಾಡಿ, ನಮ್ಮ ಹಿರಿಯರಾದ ಲಿಂ. ವಿಶ್ವಾರಾಧ್ಯಸ್ವಾಮೀಜಿ, ಲಿಂ. ವಿಶ್ವೇಶ್ವರಸ್ವಾಮೀಜಿ ನಡೆಸಿಕೊಂಡು ಬರುತ್ತಿದ್ದ ಈ ಇಷ್ಟಲಿಂಗ ಶಿವಯೋಗಾನುಷ್ಠಾನವನ್ನು ನಾವು ಮುಂದುವರೆಸಿಕೊಂಡು ಬರುತ್ತಿದ್ದೇವೆ. 21 ದಿನಗಳ ಕಾಲ ವಾಗ್ಮಿಗಳಿಂದ ಉಪನ್ಯಾಸ, ಮೂಲ ಹಾಲಸ್ವಾಮಿಗಳ ಪುರಾಣ ಪ್ರವಚನ, ಸಂಗೀತ, ಅನ್ನ ದಾಸೋಹ, ಧಾನ್ಯ ತುಲಾಭಾರ, ಉತ್ಸವದ ಕೊನೆಯ ದಿನ ಸಾಮೂಹಿಕ ವಿವಾಹ, ಕುಂಬಾಭಿಷೇಕದ ಮೆರವಣಿಗೆ ಮುಂತಾದ ಕಾರ್ಯಕ್ರಮಗಳನ್ನು ಜಾತ್ಯಾತೀತವಾಗಿ ಆಚರಿಸಿಕೊಂಡು ಬರುತ್ತಿದ್ದು, ಇದರಲ್ಲಿ ಎಲ್ಲಾ ಜಾತಿ ಜನಾಂಗದವರಿಗೆ ಅವಕಾಶವಿದ್ದು, ಸಂಗೀತ ಮತ್ತು ಜಾನಪದ ಕಲೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.

ಮಠದ ಸಂಚಾಲಕ ಕೆ.ಎಂ.ವೀರಯ್ಯ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮದ ಅಂಗವಾಗಿ ಶಿವಯೋಗಿ ಹಾಲಸ್ವಾಮಿಗಳ ಪುರಾಣ ಪ್ರವಚನ, ಸ್ವಾಮೀಜಿಯವರ ಧಾನ್ಯ ತುಲಾಭಾರ, ಅನ್ನ ದಾಸೋಹ ನಡೆಯಿತು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಆರ್‌. ಹಾಲೇಶ್‌, ಮಾಜಿ ಅಧ್ಯಕ್ಷ ಸೈಯದ್‌ ರಫೀಕ್‌, ಪಟೇಲ್‌ ಚಂದ್ರಶೇಖರಪ್ಪ, ಫಾಲಾಕ್ಷಪ್ಪ ಭಾಗವಹಿಸಿದ್ದರು. ಡಿ.ಕೆ.ರಾಜು ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.