ADVERTISEMENT

ಡಿ.ಜೆ. ನಿಷೇಧ ವಿರೋಧಿಸುವ ರೇಣುಕಾಚಾರ್ಯರನ್ನು ಬಂಧಿಸಿ: ಮಾಜಿ ಶಾಸಕ ಎಸ್. ರಾಮಪ್ಪ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2025, 2:48 IST
Last Updated 24 ಆಗಸ್ಟ್ 2025, 2:48 IST
ಎಸ್.ರಾಮಪ್ಪ
ಎಸ್.ರಾಮಪ್ಪ   

ಹರಿಹರ: ‘ಡಿ.ಜೆ. ಸಂಗೀತ ನಿಷೇಧ ಮಾಡಿ ನೋಡಿ ಎಂದು ಜಿಲ್ಲಾಡಳಿತಕ್ಕೆ ಸವಾಲು ಹಾಕಿರುವ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಅವರನ್ನು ಗಣೇಶ ಉತ್ಸವ ಮುಗಿಯುವವರೆಗೆ ಬಂಧನದಲ್ಲಿಡಬೇಕು’ ಎಂದು ಮಾಜಿ ಶಾಸಕ ಎಸ್.ರಾಮಪ್ಪ ಆಗ್ರಹಿಸಿದರು. 

ನ್ಯಾಯಾಲಯದ ಆದೇಶದ ಅನ್ವಯ ಗಣೇಶೋತ್ಸವ ಮತ್ತು ಈದ್ ಮಿಲಾದ್ ಹಬ್ಬದ ಸಂದರ್ಭದಲ್ಲಿ ಡಿ.ಜೆ. ಸಂಗೀತ ಬಳಕೆಯನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಆದೇಶಿಸಿರುವುದು ಜನಪರ ನಿರ್ಧಾರ ಎಂದು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

‘ಮಾಜಿ ಸಚಿವರ ವರ್ತನೆ ಜನ ವಿರೋಧಿಯಾಗಿದೆ. ಜಿಲ್ಲೆಯ ಕೋಮು ಸಾಮರಸ್ಯವನ್ನು ಸಹಿಸದೇ, ಹಿಂದೂ-ಮುಸ್ಲಿಮರ ನಡುವೆ ಸಂಘರ್ಷ ಉಂಟುಮಾಡುವ ದುಷ್ಟ ಯೋಚನೆ ಅವರದ್ದಾಗಿದೆ. ಬಿಜೆಪಿ ಸರ್ಕಾರ ಆಡಳಿತದಲ್ಲಿ ಇದ್ದಾಗ ಸುಮ್ಮನಿದ್ದು, ಬೇರೆ ಪಕ್ಷದ ಸರ್ಕಾರದ ಅವಧಿಯಲ್ಲಿ ಅಧಿಕಾರಿಗಳ ಜನಪರ ಆದೇಶವನ್ನು ಟೀಕಿಸುತ್ತಿರುವುದು ಸರಿಯಲ್ಲ’ ಎಂದರು.

ADVERTISEMENT

21 ದಿನಕ್ಕೆ ಬದಲಾಗಿ 11 ದಿನಕ್ಕೆ ಎಲ್ಲ ಗಣೇಶೋತ್ಸವಗಳ ಅವಧಿಯನ್ನು ಮೊಟಕುಗೊಳಿಸುವುದು ಸೂಕ್ತ. ಡಿ.ಜೆ. ಸಂಗೀತಕ್ಕೆ ವ್ಯಯಿಸುವ ಲಕ್ಷಾಂತರ ರೂಪಾಯಿ ಹಣವನ್ನು ಸ್ಥಳೀಯ ಸಾಂಸ್ಕೃತಿಕ ಕಲಾ ತಂಡಗಳಿಗೆ ನೀಡಿದರೆ ಕಲಾವಿದರಿಗೆ ಚೈತನ್ಯ ನೀಡಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟರು. 

ಕೆಪಿಸಿಸಿ ಸದಸ್ಯ ಬಿ.ರೇವಣಸಿದ್ದಪ್ಪ, ಕುರುಬ ಸಮಾಜದ ಅಧ್ಯಕ್ಷ ಹಾಲೇಶಪ್ಪ, ಕಾಂಗ್ರೆಸ್ ಮುಖಂಡರಾದ ಎಂ.ಆರ್.ಸೈಯದ್ ಸನಾವುಲ್ಲ, ಹಬೀಬ್‌ಉಲ್ಲಾ ಗನ್ನೆವಾಲೆ, ಮಲೇಬೆನ್ನೂರಿನ ಬೀರಪ್ಪ, ಉಮಾ ಮಹೇಶ್ವರ, ಪಿ.ನಾಗರಾಜ್ ಉಪಸ್ಥಿತರಿದ್ದರು.

‘ಪಕ್ಷೇತರ ಸ್ಪರ್ಧೆ: ನಿರ್ಧಾರ ಸದ್ಯಕ್ಕಿಲ್ಲ’

ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗದಿದ್ದರೆ ಪಕ್ಷೇತರವಾಗಿ ಸ್ಪರ್ಧಿಸುವಂತೆ ಬೆಂಬಲಿಗರು ಒತ್ತಡ ಹೇರುತ್ತಿದ್ದಾರೆ. ಅದಕ್ಕಿನ್ನೂ ಸಮಯ ಇರುವುದರಿಂದ ನಿರ್ಣಯ ಕೈಗೊಂಡಿಲ್ಲ ಎಂದು ಎಸ್.ರಾಮಪ್ಪ ಹೇಳಿದರು.

‘ಕಾಣದ ಕೈಗಳಿಂದಾಗಿ ನನಗೆ ಈ ಹಿಂದೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ತಪ್ಪಿದೆ. ಈ ಬಾರಿ ನನ್ನ ಹೆಸರು ಇದೆ’ ಎಂದರು.

ಮಾಜಿ ಸಚಿವ ದಿ.ಡಾ.ವೈ. ನಾಗಪ್ಪ ಅವರ ಪುತ್ರಿ ಡಾ.ರಶ್ಮಿ ಅವರಿಗೆ ಪಕ್ಷದ ಟಿಕೆಟ್ ಸಿಕ್ಕರೆ ಬೆಂಬಲಿಸುತ್ತೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಸ್ವಾಗತಿಸುತ್ತೇನೆ ಎಂದ ಅವರು ‘ಮುಂಬರುವ ತಾಲ್ಲೂಕು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಉಸ್ತುವಾರಿ ಸಚಿವರು ನನ್ನ ಬೆಂಬಲಿಗರಿಗೆ ಮನ್ನಣೆ ನೀಡುತ್ತಾರೆಂಬ ವಿಶ್ವಾಸ ಇದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.