ಹೊನ್ನಾಳಿ: ಜಾತ್ಯತೀತ ಹಾಗೂ ರಾಷ್ಟ್ರೀಯ ಮನೋಭಾವದಿಂದ ಕೆಲಸ ಮಾಡುತ್ತಿರುವ ಏಕೈಕ ಪಕ್ಷವೆಂದರೆ ಅದು ಬಿಜೆಪಿ ಮಾತ್ರ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.
ಇಲ್ಲಿನ ಗುರುಭವನದಲ್ಲಿ ಬಿಜೆಪಿಯ ಹೊನ್ನಾಳಿ, ನ್ಯಾಮತಿ ತಾಲ್ಲೂಕು ನೂತನ ಮಂಡಲ ಅಧ್ಯಕ್ಷ ಅರಕೆರೆ ನಾಗರಾಜ್ ಪದಗ್ರಹಣ ಸಮಾರಂಭದಲ್ಲಿ ಅವರು ಮಾತನಾಡಿದರು.
ಬೂತ್‌ನಿಂದ ರಾಜ್ಯದವರೆಗೆ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪಕ್ಷದ ತತ್ವ ಸಿದ್ಧಾಂತಗಳ ಅಡಿ ನಡೆಯುತ್ತದೆ. ಇಲ್ಲಿ ಯಾರ ಶಿಫಾರಸು ನಡೆಯುವುದಿಲ್ಲ. ಆದರೂ ಕೆಲವರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದರು.
ನಿರ್ಗಮಿತ ಅಧ್ಯಕ್ಷ ಜೆ.ಕೆ.ಸುರೇಶ್ ಅವರು ನೂತನ ಅಧ್ಯಕ್ಷ ಅರಕೆರೆ ನಾಗರಾಜ್ ಅವರಿಗೆ ಪಕ್ಷದ ಧ್ವಜವನ್ನು ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಿದರು.
ನೂತನ ಅಧ್ಯಕ್ಷ ಅರಕೆರೆ ನಾಗರಾಜ್ ಮಾತನಾಡಿ, ಹೊನ್ನಾಳಿ, ನ್ಯಾಮತಿ ಅವಳಿ ತಾಲ್ಲೂಕಿನ ಮುಖಂಡರು, ಕಾರ್ಯಕರ್ತರ ಸಹಕಾರದಿಂದ ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲುವುದು ಮತ್ತು ರೇಣುಕಾಚಾರ್ಯ ಅವರನ್ನು ಮತ್ತೆ ಶಾಸಕರಾಗಿ ಮಾಡುವುದು ತಮ್ಮ ಗುರಿ’ ಎಂದರು.
ಜಿಲ್ಲಾ ಚುನಾವಣೆ ಉಸ್ತುವಾರಿ ದತ್ತಾತ್ರೇಯ, ಚುನಾವಣಾ ವೀಕ್ಷಕ ಬೈರಪ್ಪ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರಾಜಶೇಖರ್ ನಾಗಪ್ಪ, ಮುಖಂಡ ಕೆ.ಪಿ.ಕುಬೇಂದ್ರಪ್ಪ ಅವರು ಮಾತನಾಡಿದರು.
ಮುಖಂಡರಾದ ಸಿ.ಆರ್.ಶಿವಾನಂದ, ನೆಲಹೊನ್ನೆ ಮಂಜುನಾಥ್, ಕೆ.ರಂಗಪ್ಪ, ಟಿ.ಜಿ.ರಮೇಶ್ ಗೌಡ, ರವಿಕುಮಾರ್, ಶಿವು ಹುಡೇದ್, ದಿಡಗೂರು ಫಾಲಾಕ್ಷಪ್ಪ, ಕಡ್ಲೆಬಾಳು ಧನಂಜಯ, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.