ADVERTISEMENT

ದಾವಣಗೆರೆ| ಮೇಯರ್, ಉಪಮೇರ್ ಚುನಾವಣೆ ನಡೆಸಲು ಮನವಿ

ಪ್ರಾದೇಶಿಕ ಆಯುಕ್ತ, ರಾಜ್ಯ ಮುಖ್ಯ ಚುನಾವಣಾ ಆಯುಕ್ತ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2020, 16:26 IST
Last Updated 21 ಜನವರಿ 2020, 16:26 IST
ಡಿ.ಬಸವರಾಜ್
ಡಿ.ಬಸವರಾಜ್   

ದಾವಣಗೆರೆ: ಮಹಾ ನಗರಪಾಲಿಕೆಗಳ ಮೇಯರ್ ಹಾಗೂ ಉಪಮೇಯರ್ ಸ್ಥಾನಗಳಿಗೆ ಸರ್ಕಾರ ಮೀಸಲಾತಿ ಪ್ರಕಟಿಸಿದ್ದರೂ ದಾವಣಗೆರೆ ನಗರಪಾಲಿಕೆಯ ಚುನಾಯಿತ ಸದಸ್ಯರ ಪಟ್ಟಿ ಸರ್ಕಾರದ ರಾಜ್ಯಪತ್ರದಲ್ಲಿ ಪ್ರಕಟವಾಗಿಲ್ಲ ಎಂದು ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಡಿ. ಬಸವರಾಜ್ ಆರೋಪಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಪಾಲಿಕೆ ಸದಸ್ಯರ ಹೆಸರನ್ನು ಸರ್ಕಾರದ ಪತ್ರದಲ್ಲಿ ಪ್ರಕಟಿಸಬೇಕು ಹಾಗೂ ಮೇಯರ್, ಉಪಮೇಯರ್ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿ ಪ್ರಾದೇಶಿಕ ಆಯುಕ್ತ, ರಾಜ್ಯ ಮುಖ್ಯ ಚುನಾವಣಾ ಆಯುಕ್ತ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ಪತ್ರ ಬರೆದು ಮನವಿ ಮಾಡಲಾಗುವುದು’ ಎಂದು ಹೇಳಿದರು.

‘ಕಾಂಗ್ರೆಸ್ 22 ಸ್ಥಾನಗಳನ್ನು ಪಡೆದಿದ್ದು, ಶಾಸಕರ ಹಾಗೂ ವಿಧಾನಪರಿಷತ್ ಸದಸ್ಯರ ಹಾಗೂ ಪಕ್ಷೇತರ ಸದಸ್ಯರ ಬೆಂಬಲದಿಂದ ಕಾಂಗ್ರೆಸ್ ಪಕ್ಷ ಪಾಲಿಕೆ ಅಧಿಕಾರ ಹಿಡಿಯಲು ಸ್ಪಷ್ಟ ಬಹುಮತ ಹೊಂದಿದೆ. ಆದರೆ ಬಿಜೆಪಿ ವಾಮಮಾರ್ಗದಿಂದ ಪಾಲಿಕೆ ಅಧಿಕಾರ ಹಿಡಿಯಲು ಕಾರ್ಯತಂತ್ರ ರೂಪಿಸುತ್ತಿದೆ. ಮೇಯರ್ ಹಾಗೂ ಉಪಮೇಯರ್ ಚುನಾವಣೆ ವಿಳಂಬ ಮಾಡಿದರೆ ಹೈಕೋರ್ಟ್‌ನಲ್ಲಿ ಸರ್ಕಾರದ ನಡೆಯನ್ನು ಪ್ರಶ್ನಿಸಲಾಗುವುದು’ ಎಂದು ಎಚ್ಚರಿಸಿದರು.

ADVERTISEMENT

‘ಚುನಾಯಿತ ಸದಸ್ಯರ ಹೆಸರನ್ನು ಕರ್ನಾಟಕ ಸರ್ಕಾರದ ರಾಜ್ಯಪತ್ರದಲ್ಲಿ ಪ್ರಕಟಿಸಲು ಸಂಬಂಧಪಟ್ವರಿಗೆ ಸೂಕ್ತ ಕ್ರಮಕೈಗೊಳ್ಳಲು ಆದೇಶಿಸುವಂತೆ ಕೋರಿ ಕಾಂಗ್ರೆಸ್ ನಿಯೋಗ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಎ.ನಾಗರಾಜ್‍ ಮಾತನಾಡಿ, ‘ನಾಗರಿಕರ ಕುಂದು–ಕೊರತೆಗಳಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ನಾವು ಕೇಳಲು ಹೋದರೆ ನಿಮ್ಮ ಹೆಸರು ಗೆಜೆಟ್‍ನಲ್ಲಿ ಪ್ರಕಟಣೆ ಆಗಿಲ್ಲ ನಿಮಗೆ ಯಾವುದೇ ಅಧಿಕಾರ ಇಲ್ಲ ಎಂದು ಹೇಳುತ್ತಾರೆ. ನಗರದೇವತೆ ದುರ್ಗಾಂಬಿಕ ಜಾತ್ರೆ ಬರಲಿದ್ದು, ಪಾಲಿಕೆ ಸದಸ್ಯರಿಗೆ ಪಾಲಿಕೆ ಅಧಿಕಾರಿಗಳು ಸ್ಪಂದಿಸಬೇಕು’ ಎಂದು ಆಗ್ರಹಿಸಿದರು.

ಮತ್ತೊಬ್ಬ ಸದಸ್ಯ ಅಬ್ದುಲ್ ಲತೀಫ್‍, ‘ಬಡವರ ಕೆಲಸ ಹೇಳಲು ಪಾಲಿಕೆಗೆ ಹೋದರೆ ಅಧಿಕಾರಿಗಳು ನಮ್ಮ ಮಾತು ಕೇಳುತ್ತಿಲ್ಲ. ಕುಡಿಯಲು ನೀರು ಒಂದು ಟ್ಯಾಂಕರ್ ಕಳಿಸಿ ಎಂದರೆ ಬಡಜನರ ಪ್ರದೇಶಕ್ಕೆ ಕಳುಸುತ್ತಿಲ್ಲ. ಬದಲಾಗಿ ಲಕ್ಷಗಟ್ಟಲೆ ಸಂಬಳ ತೆಗೆದುಕೊಳ್ಳುವ ಅಧಿಕಾರಿಗಳ ಮನೆಗೆ ನೀರನ್ನು ಕಳುಹಿಸುತ್ತಿದ್ದಾರೆ’ ಎಂದು ಆರೋಪಿಸಿದರು.

ಪಾಲಿಕೆ ಸದಸ್ಯರಾದ ದೇವರಮನೆ ಶಿವಕುಮಾರ್, ಗಡಿಗುಡಾಳ್ ಜಿ.ಎಸ್. ಮಂಜುನಾಥ್, ಕೆ. ಚಮನ್‍ಸಾಬ್, ಅಬ್ದುಲ್ ಲತೀಫ್, ಜಿ.ಎಸ್. ಮಂಜುನಾಥ್, ಸೈಯದ್ ಚಾರ್ಲಿ, ಜೆ.ಎನ್. ಶ್ರೀನಿವಾಸ್, ಪಾಮೇನಹಳ್ಳಿ ನಾಗರಾಜ್, ಯಶೋಧಮ್ಮ ಉಮೇಶ್, ಕಾಂಗ್ರೆಸ್‍ ಮುಖಂಡರಾದ ಶಿವಗಂಗಾ ಬಸವರಾಜ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.