ADVERTISEMENT

ದಾವಣಗೆರೆ: ವಿಶ್ವಕರ್ಮ ವೃತ್ತ ನಾಮಕರಣ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 1 ಜನವರಿ 2022, 7:15 IST
Last Updated 1 ಜನವರಿ 2022, 7:15 IST

ದಾವಣಗೆರೆ: ಗ್ರಾಮ, ಹೋಬಳಿ ಹಾಗೂ ತಾಲ್ಲೂಕು ಮಟ್ಟದಲ್ಲಿ ವಿಶ್ವಕರ್ಮ ಸಮುದಾಯದವರಿಗೆ ಸೌಲಭ್ಯ ಕಲ್ಪಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಆ ಮೂಲಕ ಸಮಸ್ಯೆ ಆಲಿಸಲಾಗುವುದು ಎಂದು ವಿಶ್ವಕರ್ಮ ರಾಷ್ಟ್ರೀಯ ಅಧ್ಯಕ್ಷ ಎಚ್.ವಿ. ಸತೀಶ್ ಕುಮಾರ್ ತಿಳಿಸಿದರು.

ಗ್ರಾಮ ವಾಸ್ತವ್ಯ ಕಾರ್ಯಕ್ರಮದ ‘ನಮ್ಮ ನಡಿಗೆ ಹಳ್ಳಿ ಕಡೆಗೆ’ ಕಲ್ಪನೆಯಡಿ ಕಡುಬಡವರ ಮನೆಯಲ್ಲಿ ವಾಸ್ಯವ್ಯ ಮಾಡಿ, ಸಮುದಾಯದವರಿಗೆ ಸರ್ಕಾರದ ಸವಲತ್ತುಗಳು ಸಿಕ್ಕಿವೆಯಾ ಎಂಬುದನ್ನು ಪರಿಶೀಲಿಸಲಾಗುವುದು. ಕಾರ್ಪೆಂಟರ್ ಕಿಟ್, ಸಾಲ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು. ಚನ್ನಗಿರಿಯಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು ಎಂದು ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವಕರ್ಮ ನಿಗಮದಿಂದ ಅನುದಾನ ಕಡಿಮೆ ಬರುತ್ತಿರುವುದರಿಂದ ಎಲ್ಲರಿಗೂ ಸಾಲ ಸೌಲಭ್ಯ ಒದಗಿಸಲು ಆಗಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರಿಗೂ ಕಿಟ್ ಸಿಗುವಂತೆ ಮಾಡಲಾಗುವುದು ಎಂದು ಹೇಳಿದರು.

ADVERTISEMENT

‘ದಾವಣಗೆರೆಯಲ್ಲಿ ಯಾವುದಾದರೂ ವೃತ್ತಕ್ಕೆ ಜಕಣಾಚಾರಿ ವೃತ್ತ, ಇಲ್ಲವೇ ವಿಶ್ವಕರ್ಮ ವೃತ್ತ ಎಂದು ಹೆಸರಿಡಲು ಒತ್ತಾಯಿಸಲಾಗುವುದು. ವಿಶ್ವಕರ್ಮರ ಪ್ರತಿಮೆಯನ್ನು ಅನಾವರಣಗೊಳಿಸಬೇಕು. ದಾವಣಗೆರೆಯಿಂದಲೇ ಈ ಕಾರ್ಯ ಆರಂಭಿಸಲಾಗುವುದು’ ಎಂದು ಹೇಳಿದರು.

‘ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ವಿಶ್ವಕರ್ಮ ಕುಲಕಸುಬಿಗೆ ಅನುಕೂಲವಾಗುವಂತೆ ತರಬೇತಿ ಕೇಂದ್ರಗಳನ್ನು ಆರಂಭಿಸಬೇಕು. ಐಎಎಸ್, ಐಪಿಎಸ್ ಆಕಾಂಕ್ಷಿಗಳಿಗೆ ತರಬೇತಿ ನೀಡಲು ಸ್ಪರ್ಧಾತ್ಮಕ ತರಬೇತಿ ಕೇಂದ್ರಗಳನ್ನು ಆರಂಭಿಸಬೇಕು. ಉನ್ನತ ಶಿಕ್ಷಣಕ್ಕೆ ಹೋಗುವವರೆಗೆ ದೆಹಲಿಯಲ್ಲಿ ಐಎಎಸ್, ಐಪಿಎಸ್ ತರಬೇತಿ ಕೇಂದ್ರ ಆರಂಭಿಸಿದ್ದು, ಸಮಾಜದ ವಿದ್ಯಾರ್ಥಿಗಳು ಅದರ ಸದುಪಯೋಗವನ್ನು ಪಡೆದುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ರಾಜ್ಯದಲ್ಲಿ ಕನ್ನಡ ಮಾತನಾಡುವ 35 ಲಕ್ಷ ಹಾಗೂ ಹೊರಗಿನಿಂದ ಬಂದ ವಿವಿಧ ರಾಜ್ಯಗಳ 10 ಲಕ್ಷ ವಿಶ್ವಕರ್ಮರು ಸೇರಿ ರಾಜ್ಯದಲ್ಲಿ 45 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಇದ್ದರೂ ರಾಜಕೀಯವಾಗಿ ಪ್ರಾತಿನಿಧ್ಯಸಿಕ್ಕಿಲ್ಲ. ರಾಜ್ಯದ ಯಾವುದಾದರೂ ಒಂದು ಕ್ಷೇತ್ರದಲ್ಲಿ ಸಂಸದರು ಹಾಗೂ ಶಾಸಕರ ಸ್ಥಾನಗಳಿಗೆ ವಿಶ್ವಕರ್ಮರಿಗೆ ಟಿಕೆಟ್ ನೀಡಬೇಕು. ಸರ್ಕಾರಗಳು ನಮ್ಮ ಸಮಾಜಕ್ಕೆ ರಾಜಕೀಯವಾಗಿಮೀಸಲಾತಿ ನೀಡಬೇಕು’ ಎಂದು ಆಗ್ರಹಿಸಿದರು.

ಎನ್.ವಿ.ಮೌನೇಶ್ವರಾಚಾರ್, ಬಾವಿಹಾಳ್ ಎಸ್.ನಾಗರಾಜಾಚಾರ್, ಮಹೇಂದ್ರ ಆಚಾರ್,ಎಂ.ಪಿ. ರಮೇಶ್ ಆಚಾರ್, ಮಂಜುನಾಥ್‌, ಅಂಜನಾಚಾರ್, ಸುರೇಶಚಾರ್, ಪ್ರಕಾಶ್,ದುಶ್ಯಂತ್ ಬಡಿಗೇರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.