ADVERTISEMENT

ಒಳಮೀಸಲಾತಿ ಜಾರಿಗೆ ಸರ್ಕಾರ ಬದ್ಧ: ಗೃಹ ಸಚಿವ ಜಿ. ಪರಮೇಶ್ವರ

ಛಲವಾದಿ ಮಹಾಸಭಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 28 ಜುಲೈ 2025, 6:40 IST
Last Updated 28 ಜುಲೈ 2025, 6:40 IST
<div class="paragraphs"><p>ದಾವಣಗೆರೆಯ ಬಿಐಇಟಿ ಸಭಾಂಗಣದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗೃಹ ಸಚಿವ ಜಿ. ಪರಮೇಶ್ವರ ಉದ್ಘಾಟಿಸಿದರು </p></div>

ದಾವಣಗೆರೆಯ ಬಿಐಇಟಿ ಸಭಾಂಗಣದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭವನ್ನು ಗೃಹ ಸಚಿವ ಜಿ. ಪರಮೇಶ್ವರ ಉದ್ಘಾಟಿಸಿದರು

   

–ಪ್ರಜಾವಾಣಿ ಚಿತ್ರ

ದಾವಣಗೆರೆ: ‘ಒಳಮೀಸಲಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ದತ್ತಾಂಶ ಸಂಗ್ರಹ ಸಮೀಕ್ಷೆ ಅಂತಿಮ ಹಂತ ತಲುಪಿದೆ. ಎಡ ಮತ್ತು ಬಲ ಎರಡೂ ಒಂದೇ ಸಮುದಾಯ ಎಂಬುದನ್ನು ಈಗಾಗಲೇ ಘೋಷಣೆ ಮಾಡಿದ್ದೇವೆ. ಒಳಮೀಸಲಾತಿ ಜಾರಿಗೆ ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.

ADVERTISEMENT

ಇಲ್ಲಿನ ಬಾಪೂಜಿ ಎಂಜಿನಿಯರಿಂಗ್ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಛಲವಾದಿ ಮಹಾಸಭಾ ವತಿಯಿಂದ ಭಾನುವಾರ ಏರ್ಪಡಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಲಿಂಗಾಯತ, ಒಕ್ಕಲಿಗ ಸೇರಿ ಮುಂದುವರಿದ ಸಮುದಾಯದಲ್ಲಿ ಕೂಡ ಜಾತಿ ಸಂಘರ್ಷವಿದೆ. ದಲಿತ ಸಮುದಾಯ ಎಡ ಮತ್ತು ಬಲ ಎಂಬುದಾಗಿ ಇಬ್ಬಾಗವಾಗಿದೆ. ಈ ಒಡೆದಾಳುವ ನೀತಿಯನ್ನು ಅರ್ಥ ಮಾಡಿಕೊಂಡು ಪರಸ್ಪರ ಚರ್ಚಿಸಿ ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಒಳಮೀಸಲಾತಿ ಬಗ್ಗೆ ಅನುಮಾನ ಇಟ್ಟುಕೊಳ್ಳುವುದು ಬೇಡ’ ಎಂದರು.

‘ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿಯಲ್ಲಿ ನಾಲ್ಕು ಎಕರೆ ಜಮೀನು ಪಡೆದರೆ ಅಥವಾ ಅಂಬೇಡ್ಕರ್ ಸಮುದಾಯ ಭವನ ಕಟ್ಟಿಸಿಕೊಂಡರೆ ಸಾಲದು. ಸಮುದಾಯದ ಯುವಪೀಳಿಗೆ ಕಾರ್ಯಾಂಗದ ಪ್ರಮುಖ ಹುದ್ದೆಗಳನ್ನು ಅಲಂಕರಿಸಬೇಕು. ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆಯುತ್ತಿರುವ 4.5 ಕೋಟಿ ವಿದ್ಯಾರ್ಥಿಗಳಲ್ಲಿ ಪರಿಶಿಷ್ಟ ಜಾತಿಗೆ ಸೇರಿದ 58 ಲಕ್ಷ ವಿದ್ಯಾರ್ಥಿಗಳೂ ಇದ್ದಾರೆ. ಅಂಬೇಡ್ಕರ್‌ ಕಲ್ಪಿಸಿದ ಮೀಸಲಾತಿಯ ಫಲವಿದು’ ಎಂದು ಹೇಳಿದರು.

‘ರಾಜ್ಯ ಮಟ್ಟದ ಒನಕೆ ಓಬವ್ವ ಜಯಂತಿಯನ್ನು ನವೆಂಬರ್‌ನಲ್ಲಿ ದಾವಣಗೆರೆಯಲ್ಲಿ ಆಯೋಜಿಸಲಾಗುವುದು. ಸಚಿವರಾಗಿ ನಾನು ಮತ್ತು ಮಹದೇವಪ್ಪ ಇಬ್ಬರೂ ಜವಾಬ್ದಾರಿ ತೆಗೆದುಕೊಳ್ಳುತ್ತೇವೆ. ಅಗತ್ಯ ಸಿದ್ಧತೆಯನ್ನು ಆರಂಭಿಸಿ’ ಎಂದರು.

‘ಸಿದ್ದರಾಮಯ್ಯ ಅವರು ದಲಿತ ಸಮುದಾಯದ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡುತ್ತಿದ್ದಾರೆ. ಸಮುದಾಯದ ಸಾಂಸ್ಕೃತಿಕವಾಗಿ ಇನ್ನಷ್ಟು ಸಶಕ್ತಗೊಳ್ಳಬೇಕು. ಸಂವಿಧಾನ ರಕ್ಷಣೆ ಮಾಡುವ ಹೊಣೆಗಾರಿಕೆ ಪ್ರತಿಯೊಬ್ಬರ ಮೇಲಿದೆ. ಸಂವಿಧಾನ ವಿರೋಧಿ ಶಕ್ತಿಗಳ ಮಸಲತ್ತು ಸಾಕಾರಗೊಳ್ಳಬಾರದು. ಇದಕ್ಕೆ ಸರಿಯಾದ ಜ್ಞಾನ ಮತ್ತು ಸಂಘಟನೆಯ ಅಗತ್ಯವಿದೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅಭಿಪ್ರಾಯಪಟ್ಟರು.

ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ, ಜಿಲ್ಲಾ ಛಲವಾದಿ ಮಹಾಸಭಾ ಅಧ್ಯಕ್ಷ ಎನ್. ರುದ್ರಮುನಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಎಫ್.ಎಸ್. ಜಕ್ಕಪ್ಪನವರ್, ಬಿ.ಎಸ್.ವಿಜಯಕುಮಾರ್, ‘ಧೂಡಾ’ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಮುಖಂಡರಾದ ಹೊದಿಗೆರೆ ರಮೇಶ್, ಎಚ್.ಸಿ. ನಿರಂಜನಮೂರ್ತಿ, ನಾಗರಾಜ್, ನಿವೃತ್ತ ಪೊಲೀಸ್ ಅಧಿಕಾರಿ ವಿಜಯಕುಮಾರ್ ಎಂ.ಸಂತೋಷ್, ತುಮಕೂರು ಎಎಸ್‌ಪಿ ಸಿ.ಗೋಪಾಲ್ ಹಾಜರಿದ್ದರು.

ಸಿದ್ದರಾಮಯ್ಯ ಕಾಳಜಿಗೆ ಮೆಚ್ಚುಗೆ

‘ಶೋಷಿತರು ತಳ ಸಮುದಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಇರುವ ಕಾಳಜಿ ಮತ್ತು ಬದ್ಧತೆಯನ್ನು ಎಐಸಿಸಿ ಮುಕ್ತಕಂಠದಿಂದ ಶ್ಲಾಘಿಸಿದೆ. ಅವರ ಅಧಿಕಾರವಧಿಯಲ್ಲಿಯೂ ಅವಕಾಶಗಳನ್ನು ಬಳಸಿಕೊಂಡು ಸಮುದಾಯ ಮುಂದುವರಿಯದೇ ಹೋದರೆ ಮುರ್ಖರಾಗಬೇಕಾಗುತ್ತದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು. ‘ಇತ್ತೀಚೆಗೆ ದೆಹಲಿಯಲ್ಲಿ ನಡೆದ ಎಐಸಿಸಿ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ವರಿಷ್ಠರು ಕೊಂಡಾಡಿದ್ದಾರೆ. ಧ್ವನಿ ಇಲ್ಲದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಸಿದ್ದರಾಮಯ್ಯ ಶ್ರಮಿಸಿದ ಪರಿಗೆ ಮೆಚ್ಚುಗೆ ವ್ಯಕ್ತವಾಗಿದೆ. ಒಬ್ಬ ವ್ಯಕ್ತಿಯ ಬಗ್ಗೆ ಇಷ್ಟೊಂದು ಅಭಿಮಾನದ ಮಾತುಗಳನ್ನು ಕೇಳಿ ಅಚ್ಚರಿಯುಂಟಾಗಿದೆ. ನಾವು ಕೂಡ ಒಂದಷ್ಟು ಬದಲಾಗಬೇಕಿದೆ’ ಎಂದು ನುಡಿದರು.

ಅನುದಾನ ಬಳಕೆಗೆ ಅತೃಪ್ತಿ

‘ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಯ ಶೇ 28ರಷ್ಟು ಅನುದಾನ ಇಂಧನ ಇಲಾಖೆಗೆ ಹಂಚಿಕೆಯಾಗಿದೆ. ‘ಗೃಹಜ್ಯೋತಿ’ ಯೋಜನೆಯಡಿ ವಿದ್ಯುತ್ ಉಚಿತವಾಗಿ ನೀಡುತ್ತಿರುವ ಈ ಸಂದರ್ಭದಲ್ಲಿ ಇಷ್ಟು ಮೊತ್ತದ ಅನುದಾನವನ್ನು ಈ ಇಲಾಖೆಗೆ ನೀಡುವ ಅಗತ್ಯ ಏನಿತ್ತು’ ಎಂದು ರಾಜ್ಯ ಪರಿಸರ ನಿಯಂತ್ರಣ ಮಂಡಳಿ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಪ್ರಶ್ನಿಸಿದರು. ‘ಅನ್ಯಭಾಗ್ಯ ಯೋಜನೆಗೆ ಶೇ 27ರಷ್ಟು ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ. 11 ವರ್ಷಗಳಿಂದ ಈವರೆಗೆ ರಾಜ್ಯದಲ್ಲಿ ₹ 3.25 ಲಕ್ಷ ಕೋಟಿ ವೆಚ್ಚ ಮಾಡಲಾಗಿದೆ. ಇದಕ್ಕೆ ಅನುಗುಣವಾಗಿ ಸಮುದಾಯ ಅಭಿವೃದ್ಧಿ ಹೊಂದಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ದಲಿತರೊಬ್ಬರು ಮುಖ್ಯಮಂತ್ರಿಯಾಗಬೇಕು ಎಂಬ ಕೂಗು ಸ್ವಾತಂತ್ರ್ಯ ಬಂದಾಗಿನಿಂದ ಇದೆ. ಇದಕ್ಕೆ ಒಂದು ಮೆಟ್ಟಿಲು ಮಾತ್ರ ಬಾಕಿ ಇದೆ. ಈ ಅವಧಿಯಲ್ಲಿ ಅವಕಾಶ ಸಿಗುವ ಆಶ್ವಾಸವಿದೆ.
–ಬಿ. ದೇವೇಂದ್ರಪ್ಪ, ಶಾಸಕ ಜಗಳೂರು
ಅಂಬೇಡ್ಕರ್ ಸಮುದಾಯ ಭವನಕ್ಕೆ ₹ 5 ಕೋಟಿ ಅನುದಾನ ಬಂದಿದೆ. ಇದು ಎರಡು ಅಂತಸ್ತಿನ ಕಟ್ಟಡ ಆಗಬೇಕು. ಇದಕ್ಕೆ ₹ 14 ಕೋಟಿಗೂ ಹೆಚ್ಚು ಅನುದಾನದ ಅಗತ್ಯ ಇದೆ.
–ಎಸ್.ಎಸ್. ಮಲ್ಲಿಕಾರ್ಜುನ್‌, ಜಿಲ್ಲಾ ಉಸ್ತುವಾರಿ ಸಚಿವ
ಹಾಸ್ಟೆಲ್ ಸೌಲಭ್ಯವಿಲ್ಲದೇ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಈ ಬಗ್ಗೆ ಸಮಾಜ ಕಲ್ಯಾಣ ಇಲಾಖೆ ಗಮನ ಹರಿಸುವ ಅಗತ್ಯವಿದೆ
–ಕೆ.ಎಸ್. ಬಸವಂತಪ್ಪ, ಶಾಸಕ ಮಾಯಕೊಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.