ADVERTISEMENT

ವಸತಿ ಯೋಜನೆಯಲ್ಲಿ ಸೈನಿಕರಿಗೆ ಮೀಸಲು: ಶಾಸಕ ಎಸ್‌. ರಾಮಪ್ಪ ಸೂಚನೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 3:53 IST
Last Updated 26 ಜೂನ್ 2021, 3:53 IST
ಹರಿಹರದ ಹೊರವಲಯದ ಯಲ್ಲಮ್ಮ ಬಡಾವಣೆ ಸುತ್ತಲಿನ ಪ್ರದೇಶವನ್ನು ಶಾಸಕ ಎಸ್‍. ರಾಮಪ್ಪ ಹಾಗೂ ನಗರಸಭೆ ಸಿಬ್ಬಂದಿ ಶುಕ್ರವಾರ ಪರಿಶೀಲಿಸಿದರು.
ಹರಿಹರದ ಹೊರವಲಯದ ಯಲ್ಲಮ್ಮ ಬಡಾವಣೆ ಸುತ್ತಲಿನ ಪ್ರದೇಶವನ್ನು ಶಾಸಕ ಎಸ್‍. ರಾಮಪ್ಪ ಹಾಗೂ ನಗರಸಭೆ ಸಿಬ್ಬಂದಿ ಶುಕ್ರವಾರ ಪರಿಶೀಲಿಸಿದರು.   

ಹರಿಹರ: ನಗರಸಭೆಯಿಂದ ರೂಪಿಸಲಾಗುವ ವಸತಿ ಯೋಜನೆಯಲ್ಲಿ ಪೌರಕಾರ್ಮಿಕರು, ಸೈನಿಕರು ಹಾಗೂ ಮಾಜಿ ಸೈನಿಕರಿಗೆ ನಿವೇಶನಗಳನ್ನು ಮೀಸಲಿಡುವಂತೆ ಪೌರಾಯುಕ್ತೆ ಎಸ್‍. ಲಕ್ಷ್ಮೀ ಅವರಿಗೆ ಶಾಸಕ ಎಸ್‍. ರಾಮಪ್ಪ ಸೂಚಿಸಿದರು.

ನಗರದ ಹೊರವಲಯದ ಯಲ್ಲಮ್ಮ ಬಡಾವಣೆ ಸುತ್ತಲಿನ ಪ್ರದೇಶವನ್ನು ಶುಕ್ರವಾರ ಪರಿಶೀಲನೆ ನಡೆಸಿ ಮಾತನಾಡಿದರು.

ವಸತಿ ಯೋಜನೆ ರೂಪಿಸುವ ಮುನ್ನ ಪೌರಕಾರ್ಮಿಕರು, ಸೈನಿಕರು ಹಾಗೂ ಮಾಜಿ ಸೈನಿಕರಿಗೆ ನಿವೇಶನಗಳನ್ನು ಮೀಸಲಿರಿಸಿ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಿದರು. ಕ್ಷೇತ್ರದಲ್ಲಿ ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂದು ಹೇಳಿದರು.

ADVERTISEMENT

ಮಾಜಿ ಸೈನಿಕ ಮಂಜುನಾಥ್ ಮಾತನಾಡಿ, ‘ಬಡಾವಣೆಯಲ್ಲಿ 100ಕ್ಕೂ ಹೆಚ್ಚು ಮನೆಗಳಿದ್ದು, 400ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಶುದ್ಧ ಕುಡಿಯುವ ನೀರು, ರಸ್ತೆ, ಚರಂಡಿ ಸೇರಿ ಮೂಲ ಸೌಕರ್ಯಗಳನ್ನು ಒದಗಿಸ
ಬೇಕು’ ಎಂದು ಮನವಿ ಮಾಡಿದರು.

ಪೌರಾಯುಕ್ತೆ ಎಸ್. ಲಕ್ಷ್ಮೀ ಮಾತನಾಡಿ, ‘ಈಚೆಗೆ ಗುತ್ತೂರು ಗ್ರಾಮವನ್ನು ಹರಿಹರ ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲಾಗಿದೆ. ಆದರೆ, ಸೇರ್ಪಡೆಯಾದ ಪ್ರದೇಶದ ಅಭಿವೃದ್ಧಿಗೆ ಅನುದಾನ ಮಂಜೂರಾಗಿಲ್ಲ. ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ತಿಳಿಸಿದರು.

ಇದೇ ವೇಳೆ ಶಾಸಕ ಎಸ್‍. ರಾಮಪ್ಪ ಅವರು ಗುರುವಾರ ಹಾವು ಕಚ್ಚಿ ಮೃತಪಟ್ಟ ಕಟ್ಟಡ ಕಾರ್ಮಿಕ ಪ್ರಭು ಅವರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು. ನಗರಸಭೆಯ ಎಇಇ ಎಸ್.ಎಸ್. ಬಿರಾದಾರ್ ಹಾಗೂ ಸ್ಥಳಿಯ ಮುಖಂಡರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.