ADVERTISEMENT

ಸಮಸ್ಯೆ ಸರಿಪಡಿಸದಿದ್ದರೆ ರಾಜೀನಾಮೆಗೂ ಸಿದ್ಧ

ಅಂಡರ್‌ಪಾಸ್‌, ಸೇವಾ ರಸ್ತೆ ಸರಿಪಡಿಸಿಯೇ 6 ಪಥ ಕಾಮಗಾರಿ ಮಾಡಿ: ಸಂಸದ ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 20:33 IST
Last Updated 6 ಜೂನ್ 2019, 20:33 IST
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಸಭೆ ನಡೆಸಿದರು
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗೆ ಸಂಸದ ಜಿ.ಎಂ. ಸಿದ್ದೇಶ್ವರ ಸಭೆ ನಡೆಸಿದರು   

ದಾವಣಗೆರೆ: ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಅಂಡರ್‌ಪಾಸ್‌, ಸರ್ವಿಸ್‌ ರಸ್ತೆಗಳನ್ನು ಮಾಡಿಯೇ ಆರು ಪಥ ರಸ್ತೆ ಕಾಮಗಾರಿ ಮಾಡಬೇಕು. ಇಲ್ಲದಿದ್ದರೆ ಧರಣಿ ಕುಳಿತುಕೊಳ್ಳುತ್ತೇನೆ. ಅಗತ್ಯ ಬಿದ್ದರೆ ರಾಜೀನಾಮೆ ನೀಡಲೂ ಸಿದ್ಧ ಎಂದು ಸಂಸದ ಜಿ.ಎಂ. ಸಿದ್ಧೇಶ್ವರ ಎಚ್ಚರಿಕೆ ನೀಡಿದರು.

ಹೆದ್ದಾರಿ ಕಾಮಗಾರಿಯಿಂದ ರೈತರಿಗೆ, ಜನರಿಗೆ ಉಂಟಾಗುವ ಸಮಸ್ಯೆಗಳ ಬಗ್ಗೆ ಚರ್ಚಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಅವರು ಮಾತನಾಡಿದರು.

‘6 ಪಥ ಕಾಮಗಾರಿ ಜಿಲ್ಲೆಯಲ್ಲಿ ಬಹಳ ನಿಧಾನಗತಿಯಿಂದ ನಡೆಯುತ್ತಿದೆ. ನಾಲ್ಕು ಪಥ ಇರುವಾಗ ಮಾಡಿರುವ ಅಂಡರ್‌ಪಾಸ್‌ಗಳಲ್ಲಿ ನೀರು ನಿಲ್ಲುತ್ತಿದೆ. ರೈತರ ಟ್ಯಾಕ್ಟರ್‌ಗಳಿಗೂ ಹೋಗಲು ಆಗದಷ್ಟು ಕಿರಿದಾಗಿವೆ. ಅಗಲ ಮತ್ತು ಎತ್ತರ ಮಾಡಬೇಕು ಎಂದು 2018ರ ಸೆಪ್ಟೆಂಬರ್‌ನಲ್ಲಿಯೇ ತಿಳಿಸಿದ್ದೆ. ಅಧಿಕಾರಿಗಳು ಸರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದರೇ ಹೊರತು ಕೆಲಸ ಮಾಡಲಿಲ್ಲ’ ಎಂದು ಟೀಕಿಸಿದರು.

ADVERTISEMENT

‘ಈ ಸಮಸ್ಯೆ ಸರಿಪಡಿಸದೇ 6 ಪಥ ಕಾಮಗಾರಿ ಮುಗಿಸಲು ಹೊರಟಿದ್ದರು. ಸ್ಥಳೀಯರು ವಿರೋಧಿಸಿದಾಗ ಪೊಲೀಸರನ್ನು ನಿಲ್ಲಿಸಿ ಕಾಮಗಾರಿ ನಡೆಸಲು ಮುಂದಾಗಿದ್ದರು. ಪೊಲೀಸರು ಬಂಧಿಸುವುದಿದ್ದರೆ ನನ್ನನ್ನು ಬಂಧಿಸಲಿ. ಇಲ್ಲದಿದ್ದರೆ ಅಂಡರ್‌ಪಾಸ್‌ ಸರಿ ಮಾಡಲಿ ಎಂದು ನಾನೇ ಹೇಳಿ 6 ಪಥ ಕಾಮಗಾರಿ ನಿಲ್ಲಿಸಿದೆ. ಎಲ್ಲೆಲ್ಲಿ ಅಂಡರ್‌ಪಾಸ್‌ಗಳು ಸರಿಯಾಗಬೇಕೋ ಅಲ್ಲಿ ಎರಡೂ ಕಡೆ 150 ಮೀಟರ್‌ನಷ್ಟು ದೂರ ಕಾಮಗಾರಿ ಮಾಡುವಂತಿಲ್ಲ ಎಂದು ಸ್ಪಷ್ಟ ಸೂಚನೆ ನೀಡಿದ್ದೇನೆ. ಅಂಡರ್‌ಪಾಸ್‌ ಮಾಡಿಯೇ ಹೆದ್ದಾರಿ ಕಾಮಗಾರಿ ಮಾಡಬೇಕು’ ಎಂದು ಸೂಚಿಸಿದರು.

ಈಗಾಗಲೇ ಕೇಂದ್ರದ ಅಧಿಕಾರಿಗಳಲ್ಲಿ, ಸಚಿವರ ಬಳಿ ಮಾತನಾಡಿದ್ದೇನೆ. ಜೂನ್‌ 17ರಂದು ದಿಲ್ಲಿಯಲ್ಲಿ ಮತ್ತೆ ಭೇಟಿಯಾಗಿ ಚರ್ಚಿಸುತ್ತೇನೆ. ಇಲ್ಲಿನ ಅಧಿಕಾರಿಗಳು ಈಗಾಗಲೇ ಪತ್ರ ಬರೆದಿದ್ದಾರೆ ಎಂದು ತಿಳಿಸಿದರು.

ಟೋಲ್‌ ಸಂಗ್ರಹ ಮಾಡುವಂತಿಲ್ಲ: 6 ಪಥ ಕಾಮಗಾರಿ ಆಗುವವರೆಗೆ ಅದರ ಟೋಲ್‌ ಸಂಗ್ರಹ ಮಾಡುವಂತಿಲ್ಲ. ಈಗ ನಾಲ್ಕು ಪಥಕ್ಕೆ ಎಷ್ಟಿದೆಯೋ ಅಷ್ಟೇ ಸಂಗ್ರಹಿಸಬೇಕು ಎಂದು ತಿಳಿಸಿದರು.

‘ಅಂಡರ್‌ಪಾಸ್‌, ಸೇವಾ ರಸ್ತೆಗಳನ್ನು ಸರಿಪಡಿಸಲು ಶೇ 10 ಹೆಚ್ಚುವರಿ ಅನುದಾನಕ್ಕೆ ಕೇಳಿದ್ದೇವೆ. ಅದು ಅನುಮೋದನೆಗೊಂಡ ಕೂಡಲೇ ಆರಂಭಿಸಲಾಗುದು’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್ ತಿಳಿಸಿದರು.

ಕುಂದವಾಡದಲ್ಲಿ ಅಂಡರ್‌ಪಾಸ್‌ ಜನ, ಜಾನುವಾರು ಹೋಗದಂತೆ ಎತ್ತರ ಮಾಡಿದ್ದಾರೆ. ಯಾವ ಎಂಜಿನಿಯರ್‌ ಆದರೂ ಆ ರೀತಿ ಮಾಡುತ್ತಾರಾ ಎಂದು ಸಂಸದರು ಪ್ರಶ್ನಿಸಿದರು. ಅದು ಹಿಂದೆ ಆಗಿದ್ದು ಎಂದು ಎಂಜಿನಿಯರ್‌ಗಳು ಜಾರಿಕೊಂಡರು.

ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶ ಮಾಡುವಲ್ಲಿ ಸುಂದರವಾಗಿ ಮಾಡಬೇಕು ಎಂದು ಸಂಸದರು ಸೂಚಿಸಿದರು. ಶೇ 10 ಹೆಚ್ಚುವರಿ ಅನುದಾನದಲ್ಲಿ ಈಗ ಮಾಡಬೇಕಿರುವ ಕೆಲಸಗಳೇ ಜಾಸ್ತಿ ಇರುವುದರಿಂದ ಈಗ ಬೇಡ ಎಂದು ತಾಂತ್ರಿಕ ವ್ಯವಸ್ಥಾಪಕ ಮಲ್ಲಿಕಾರ್ಜುನ್ ಸಲಹೆ ನೀಡಿದರು.

ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಹುಣಸೆಕಟ್ಟೆ, ಕೊಗ್ಗನೂರು. ಮಲ್ಲಶೆಟ್ಟಿಹಳ್ಳಿ, ಹೊನ್ನೂರು ಗೊಲ್ಲರಹಟ್ಟಿ, ಕಲಪನಹಳ್ಳಿಯ ಹಾಲೇಶಪ್ಪ, ಮಲ್ಲೇಶಪ್ಪ, ರುದ್ರೇಶಪ್ಪ, ಸುರೇಶ್‌ ಗೌಡರು, ರೇವಣ್ಣ, ಬಸವರಾಜು, ರುದ್ರಮಣಿ, ರೇವಣ್ಣ ಸಿದ್ದಪ್ಪ, ಯತೀಶ್‌, ಕಲ್ಲೇಶ್‌, ಕೆ.ಎಂ. ಕಲ್ಲೇಶ ಅವರೂ ಇದ್ದರು.

‘ನೀವು ರೊಕ್ಕ ತಗೊಂಡು ಕೆಲಸ ಮಾಡಲ್ಲ’

‘ನಾನು ಯಾರಿಂದಲೂ ರೊಕ್ಕ ತಗೊಳ್ಳಲ್ಲ. ನಾಲ್ಕು ಬಾರಿ ಸಂಸದನಾದರೂ ರಾಷ್ಟ್ರೀಯ ಹೆದ್ದಾರಿ ಸರಿಪಡಿಸಲು ಆಗಿಲ್ಲ ಎಂದು ಜನ ದೂರುತ್ತಾರೆ. ರೊಕ್ಕ ತಗೊಳ್ಳುವವರು ನೀವು. ಕೆಲಸ ಮಾಡದೇ ಸುಮ್ಮನಿರುತ್ತೀರಿ. ನಿಮ್ಮನ್ನು ಯಾರೂ ಕೇಳುವುದಿಲ್ಲ’ ಎಂದು ಅಧಿಕಾರಿ ವಿರುದ್ಧ ಹರಿಹಾಯ್ದರು.

‘ಧರಣಿ ಕುಳಿತುಕೊಳ್ಳುತ್ತೇನೆ ಎಂದು ಹಿಂದೆ ಎಂದೂ ಹೇಳಿಲ್ಲ. ಜನರ ಕೆಲಸ ಮಾಡಲಾಗುವುದಿಲ್ಲ ಎಂದಾದರೆ ನಾವ್ಯಾಕೆ ಆ ಸ್ಥಾನದಲ್ಲಿರಬೇಕು? ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಸುಮ್ಮನಿರಬಹುದು. ಆದರೆ ಎಲ್ಲ ಕೆಲಸ ಮುಗಿಸಿಯೇ ರಾಜಕೀಯದಿಂದ ನಿವೃತ್ತನಾಗುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.