ADVERTISEMENT

ದಾವಣಗೆರೆ: ತವರಿಗೆ ಮರಳಿದ ಮಾಜಿ ಯೋಧರಿಗೆ ಭವ್ಯ ಸ್ವಾಗತ

ಸೇನೆಯಲ್ಲಿ 17 ವರ್ಷ ಸೇವೆ ಸಲ್ಲಿಸಿ ನಿವೃತ್ತರಾದ ಪರಮೇಶ್‌, ಪುಟ್ಟಸ್ವಾಮಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2022, 16:02 IST
Last Updated 1 ಏಪ್ರಿಲ್ 2022, 16:02 IST
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತವರು ಜಿಲ್ಲೆ ದಾವಣಗೆರೆಗೆ ಆಗಮಿಸಿದ ಯೋಧರಾದ ಪರಮೇಶ್ ಕೆ. ಮತ್ತು ಪುಟ್ಟಸ್ವಾಮಿ ಪಿ.ಕೆ. ಅವರನ್ನು ರೈಲು ನಿಲ್ದಾಣದಲ್ಲಿ ಶುಕ್ರವಾರ ಸ್ವಾಗತಿಸಲಾಯಿತು. ಶಾಸಕ ಪ್ರೊ.ಲಿಂಗಣ್ಣ, ಮೇಯರ್ ಜಯಮ್ಮ ಗೋಪಿನಾಯ್ಕ್, ಉಪಮೇಯರ್ ಗಾಯಾತ್ರಿಬಾಯಿ ಕಂಡೋಜಿರಾವ್, ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ ವೀರೇಶ್, ಧೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಯಶವಂತ್‌ರಾವ್ ಜಾಧವ್ ಇದ್ದಾರೆ –ಪ್ರಜಾವಾಣಿ ಚಿತ್ರ
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತವರು ಜಿಲ್ಲೆ ದಾವಣಗೆರೆಗೆ ಆಗಮಿಸಿದ ಯೋಧರಾದ ಪರಮೇಶ್ ಕೆ. ಮತ್ತು ಪುಟ್ಟಸ್ವಾಮಿ ಪಿ.ಕೆ. ಅವರನ್ನು ರೈಲು ನಿಲ್ದಾಣದಲ್ಲಿ ಶುಕ್ರವಾರ ಸ್ವಾಗತಿಸಲಾಯಿತು. ಶಾಸಕ ಪ್ರೊ.ಲಿಂಗಣ್ಣ, ಮೇಯರ್ ಜಯಮ್ಮ ಗೋಪಿನಾಯ್ಕ್, ಉಪಮೇಯರ್ ಗಾಯಾತ್ರಿಬಾಯಿ ಕಂಡೋಜಿರಾವ್, ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಮಾಜಿ ಮೇಯರ್ ಎಸ್.ಟಿ ವೀರೇಶ್, ಧೂಡಾ ಮಾಜಿ ಅಧ್ಯಕ್ಷರಾದ ರಾಜನಹಳ್ಳಿ ಶಿವಕುಮಾರ್, ಯಶವಂತ್‌ರಾವ್ ಜಾಧವ್ ಇದ್ದಾರೆ –ಪ್ರಜಾವಾಣಿ ಚಿತ್ರ   

ದಾವಣಗೆರೆ: ಭಾರತೀಯ ಸೇನೆಯಲ್ಲಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ಶುಕ್ರವಾರ ತವರು ಜಿಲ್ಲೆಗೆ ಮರಳಿದ ಮಾಜಿ ಯೋಧರಾದ ಪರಮೇಶ್‌ ಕೆ. ಹಾಗೂ ಪುಟ್ಟಸ್ವಾಮಿ ಪಿ.ಕೆ. ಅವರಿಗೆ ನಗರದಲ್ಲಿ ಭವ್ಯ ಸ್ವಾಗತ ಕೋರಲಾಯಿತು.

ದಾವಣಗೆರೆ ರೈಲು ನಿಲ್ದಾಣಕ್ಕೆ ಮಧ್ಯಾಹ್ನ ಬಂದ ಪರಮೇಶ್‌ ಹಾಗೂ ಪುಟ್ಟಸ್ವಾಮಿ ಅವರನ್ನು ಶಾಸಕ ಪ್ರೊ. ಎನ್‌. ಲಿಂಗಣ್ಣ, ಮೇಯರ್‌ ಜಯಮ್ಮ ಗೋಪಿನಾಯ್ಕ ಸೇರಿ ಹಲವು ಮುಖಂಡರು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದರು. ಇಬ್ಬರು ಯೋಧರನ್ನೂ ಸತ್ಕರಿಸಿ ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಿದರು. ಉಪಮೇಯರ್ ಗಾಯಾತ್ರಿಬಾಯಿ ಕಂಡೋಜಿರಾವ್, ಮಾಜಿ ಮೇಯರ್‌ ಎಸ್‌.ಟಿ. ವೀರೇಶ್‌, ಧೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್‌, ಮಾಜಿ ಅಧ್ಯಕ್ಷರಾದ ಯಶವಂತರಾವ್‌ ಜಾಧವ್‌, ರಾಜನಹಳ್ಳಿ ಶಿವಕುಮಾರ್‌, ಮುಖಂಡರಾದ ಎನ್‌. ರಾಜಶೇಖರ್‌ ಸೇರಿ ಹಲವರು ಯೋಧರನ್ನು ಆತ್ಮೀಯವಾಗಿ ಸ್ವಾಗತಿಸಿದರು.

ಹರಿಹರ ತಾಲ್ಲೂಕಿನ ಕೊಂಡಜ್ಜಿ ಮೂಲದವರಾದ ಪರಮೇಶ್‌ ಅವರು ರಾಜಸ್ಥಾನದ ಜಸಮೇರ್‌ನ ‘75 ಆರ್ಮ್ಡ್‌ ರೆಜಿಮೆಂಟ್‌’ನಲ್ಲಿ ಸಿಪಾಯಿಯಾಗಿ ಕಾರ್ಯನಿರ್ವಹಿಸಿದ್ದರು. ಜಮ್ಮು–ಕಾಶ್ಮೀರ, ರಾಜಸ್ಥಾನ, ಮಹಾರಾಷ್ಟ್ರ, ದೆಹಲಿಯಲ್ಲಿ ಅವರು ಸೇವೆ ಸಲ್ಲಿಸಿದ್ದರು. ಪಿಯುಸಿ ಮುಗಿದ ಬಳಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ಕುಮಟಾದಲ್ಲಿ ನಡೆದ ಸೇನಾ ಭರ್ತಿ ರ‍್ಯಾಲಿಯಲ್ಲಿ ಪಾಲ್ಗೊಂಡು ಸೇನೆಗೆ ನೇಮಕಗೊಂಡಿದ್ದರು.

ADVERTISEMENT

‘ನಮ್ಮ ಭಾಗದಲ್ಲಿ ಇಂದಿಗೂ ಯುವಕರು ಸೇನೆಗೆ ಸೇರಲು ಹಿಂಜರಿಯುತ್ತಿದ್ದಾರೆ. ಸೇನೆಯಲ್ಲಿ ರಿಸ್ಕ್‌ ಇಲ್ಲದ ಹಲವು ವಿಭಾಗಗಳಲ್ಲೂ ಉದ್ಯೋಗಾವಕಾಶಗಳಿವೆ. ಪಿಯುಸಿ ಬಳಿಕ ಹಣಕಾಸಿನ ತೊಂದರೆಯಿಂದ ಓದು ಮುಂದುವರಿಸಲಾಗದವರು ಸೇನೆಗೆ ಸೇರಿಕೊಂಡು ಬದುಕು ಕಟ್ಟಿಕೊಳ್ಳಬಹುದು’ ಎಂದು ಪರಮೇಶ್‌ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಮುಂದೆ ಕೆಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುತ್ತೇನೆ. ಈಗಾಗಲೇ ಪಿಎಸ್‌ಐ ಪರೀಕ್ಷೆಯನ್ನು ಒಮ್ಮೆ ಬರೆದಿದ್ದು, ಮತ್ತೊಮ್ಮೆ ತೆಗೆದುಕೊಳ್ಳುತ್ತೇನೆ’ ಎಂದು ಅವರು ತಿಳಿಸಿದರು.

ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಸಮೀಪದ ಪರಶುರಾಂಪುರ ಗ್ರಾಮದ ಪುಟ್ಟಸ್ವಾಮಿ ಅವರು ಪಠಾಣಕೋಟದಲ್ಲಿರುವ ‘16 ಲೈಟ್‌ ಕೆಲವರಿ’ ರೆಜಿಮೆಂಟ್‌ನಲ್ಲಿ ಯೋಧರಾಗಿ 17 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.