ADVERTISEMENT

ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿ ಜೀವ ಕಳೆದುಕೊಂಡ ಹಾವು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 12:34 IST
Last Updated 11 ಏಪ್ರಿಲ್ 2020, 12:34 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚನ್ನಗಿರಿ: ಸಾಮಾನ್ಯವಾಗಿ ದೃಶ್ಯ ಮಾಧ್ಯಮಗಳಲ್ಲಿ ನಾಗರಹಾವುಗಳ ಕಥಾನಕದ ದೃಶ್ಯಗಳು ಪ್ರತಿ ದಿನ ಪ್ರಸಾರವಾಗುವುದನ್ನು ನೋಡುತ್ತಿದ್ದೇವೆ. ಈ ಧಾರಾವಾಹಿಗಳಲ್ಲಿ ನಾಗರಹಾವು ಸೇಡು ತೀರಿಸಿಕೊಳ್ಳುವ ದೃಶ್ಯ ಸಾಮಾನ್ಯ. ಅದೇ ರೀತಿ ತಾಲ್ಲೂಕಿನ ದಿಗ್ಗೇನಹಳ್ಳಿ ಗ್ರಾಮದ ಬಳಿ ಶುಕ್ರವಾರ ನಾಗರಹಾವೊಂದು ಟ್ರ್ಯಾಕ್ಟರ್ ಚಾಲಕನ ಮೇಲೆ ಸೇಡು ತೀರಿಸಿಕೊಳ್ಳಲು ಪ್ರಯತ್ನಿಸಿ ಕೊನೆಗೆ ತನ್ನ ಜೀವವನ್ನೇ ಕಳೆದುಕೊಂಡಿದೆ.

ತಾಲ್ಲೂಕಿನ ಹೊನ್ನೇಬಾಗಿ ಗ್ರಾಮದ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜಪ್ಪ ಅವರು ದಿಗ್ಗೇನಹಳ್ಳಿ ಗ್ರಾಮದ ಬಳಿಯ ತಮ್ಮ ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಟ್ರ್ಯಾಕ್ಟರ್‌ನಲ್ಲಿ ಮನೆಗೆ ಹೋಗುತ್ತಿದ್ದಾಗ ಟ್ರ್ಯಾಕ್ಟರ್ ಟೈರ್‌ ರಸ್ತೆಯಲ್ಲಿ ಬಂದ ನಾಗರಹಾವಿನ ಬಾಲದ ಮೇಲೆ ಹರಿದಿದೆ. ಇದರಿಂದ ನಾಗರಹಾವು ಗಾಯಗೊಂಡಿತ್ತು.

ಇದರಿಂದ ಸಿಟ್ಟಿಗೆದ್ದ ಹಾವು ಚಲಿಸುತ್ತಿದ್ದ ಟ್ರ್ಯಾಕ್ಟರನ್ನು ಹಿಂಬಾಲಿಸಿಕೊಂಡು ಹೋಗಿದೆ. ಹಾವು ಹಿಂಬಾಲಿಸಿಕೊಂಡು ಬರುವುದನ್ನು ನೋಡಿದ ಚಾಲಕ ಟ್ರ್ಯಾಕ್ಟರ್‌ ನಿಲ್ಲಿಸಿ ಕಾಪಾಡಿ ಎಂದು ಕೂಗುತ್ತಾ ಓಡಿ ಹೋಗಿದ್ದಾರೆ. ಹಿಂಬಾಲಿಸಿಕೊಂಡು ಬಂದಹಾವು ಟ್ರ್ಯಾಕ್ಟರ್ ಚಾಲಕನ ಸೀಟಿನ ಮೇಲೆ 1 ಗಂಟೆ ಕಾಲ ಬುಸುಗುಡುತ್ತಾ ಕುಳಿತಿತ್ತು.

ADVERTISEMENT

ಸುತ್ತಲಿನ ಜನರು ಸ್ಥಳಕ್ಕೆ ಬಂದಾಗ ಹಾವು ಬುಸುಗುಡುತ್ತಿದ್ದುದನ್ನು ಕಂಡು ಇದು ಚಾಲಕನನ್ನು ಕಚ್ಚದೇ ಬಿಡುವುದಿಲ್ಲ ಎಂದುಕೊಂಡು ಹಾವನ್ನು ಹೊಡೆದು ಕೊಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.