
ಜಗಳೂರು: ‘ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಪಟ್ಟಣದ ಮಧ್ಯಭಾಗದ ಮುಖ್ಯ ರಸ್ತೆ ವಿಸ್ತರಣೆ ಕಾರ್ಯ ಯಾವುದೇ ಅಡೆತಡೆ ಇಲ್ಲದೇ ಮುಂದುವರಿಯಲಿದೆ’ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.
ಪಟ್ಟಣದ ಹೃದಯಭಾಗದಲ್ಲಿ ಹಾಯ್ದು ಹೋಗಿರುವ ಮಲ್ಪೆ– ಮೊಳಕಾಲ್ಮುರು ರಾಜ್ಯಹೆದ್ದಾರಿ ಇಕ್ಕೆಲಗಳಲ್ಲಿ ಒತ್ತುವರಿ ಕಟ್ಟಡಗಳ ತೆರವು ಕಾರ್ಯಾಚರಣೆಯನ್ನು ಗುರುವಾರ ಪರಿಶೀಲಿಸಿ ಮಾತನಾಡಿದರು.
‘ಸಮರ್ಪಕ ದಾಖಲೆ ಹೊಂದಿರುವ ಕಟ್ಟಡಗಳ ಮಾಲೀಕರಿಗೆ ಪರಿಹಾರ ನೀಡಲು ₹ 100 ಕೋಟಿ ಅನುದಾನ ಮಂಜೂರು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಶೀಘ್ರವೇ ರಸ್ತೆ ಮಧ್ಯ ಭಾಗದಿಂದ 69 ಅಡಿ ವಿಶಾಲ ರಸ್ತೆ ನಿರ್ಮಿಸುವುದು ಶತಸಿದ್ಧ’ ಎಂದು ಅವರು ಖಡಕ್ ಆಗಿ ತಿಳಿಸಿದರು.
‘ಸರ್ಕಾರಿ ಜಾಗವನ್ನು ಖಾಸಗಿ ಅಂಗಡಿ ಮಾಲೀಕರು ಅತಿಕ್ರಮಿಸಿ ಅಲ್ಲಲ್ಲಿ ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಅಂತಹ ಕಟ್ಟಡಗಳನ್ನು ಹೈಕೋರ್ಟ್ ನಿರ್ದೇಶನದಂತೆ ರಾಜ್ಯ ಹೆದ್ದಾರಿ ಪ್ರಾಧಿಕಾರದ ನಿಯಮಾನುಸಾರ ಅಧಿಕಾರಿಗಳ ತಂಡ ತೆರವುಗೊಳಿಸುತ್ತಿದೆ. ಕೆಲವರು ಸ್ವಯಂಪ್ರೇರಿತವಾಗಿ ಕಟ್ಟಡ ತೆರವುಗೊಳಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಿರಾಶ್ರಿತ ಬಡ ವ್ಯಾಪಾರಿಗಳಿಗೆ ಬೇರೆಡೆ ಪುನರ್ವಸತಿ ಕಲ್ಪಿಸಲಾಗುವುದು. ಸುಂದರ ಹಾಗೂ ವಿಶಾಲವಾದ ರಸ್ತೆ ನಿರ್ಮಾಣವಾಗಲಿದ್ದು, ಪಟ್ಟಣದಲ್ಲಿ ವ್ಯಾಪಾರ ವಹಿವಾಟು ಹೆಚ್ಚಾಗಲಿದೆ’ ಎಂದು ಭರವಸೆ ವ್ಯಕ್ತಪಡಿಸಿದರು.
‘ಮುಖ್ಯ ರಸ್ತೆಯ ಎರಡೂ ಬದಿಯಲ್ಲಿ 24 ಅಡಿ ಕಾಂಕ್ರೀಟ್ ರಸ್ತೆ ಕಾಮಗಾರಿ ಭರದಿಂದ ನಡೆಯುತ್ತಿದೆ. ಫುಟ್‌ಪಾತ್, ಚರಂಡಿ ನಿರ್ಮಿಸಲಾಗುವುದು. ಹಂತ ಹಂತವಾಗಿ ರಸ್ತೆ ವಿಸ್ತರಣೆ ಕಾಮಗಾರಿ ಕೈಗೊಳ್ಳಲಾಗುವುದು. ಇದರಿಂದ ಕೆಲವರಿಗೆ ತೊಂದರೆಯಾಗಬಹುದು. ಆದರೆ ಹತ್ತಾರು ಸಾವಿರ ಜನರ ಸುರಕ್ಷಿತ ಸಂಚಾರಕ್ಕೆ ಅನುಕೂಲವಾಗಲಿದೆ’ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್, ಸದಸ್ಯರಾದ ಶಕೀಲ್ ಅಹಮ್ಮದ್, ಮಂಜುನಾಥ್, ಮಹಮ್ಮದ್ ಅಲಿ, ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ತಹಶೀಲ್ದಾರ್ ಸೈಯದ್ ಕಲೀಂಉಲ್ಲಾ, ಲೋಕೋಪಯೋಗಿ ಇಲಾಖೆ ಎಇಇ ನಾಗರಾಜ್, ಸಿಪಿಐ ಸಿದ್ರಾಮಯ್ಯ, ಜಿ.ಪಂ. ಮಾಜಿ ಸದಸ್ಯ ಕೆ.ಪಿ. ಪಾಲಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಮುಖಂಡರಾದ ಬಿ. ಮಹೇಶ್ವರಪ್ಪ, ಪಿ. ಚಿತ್ತಪ್ಪ, ಶೇಖರಪ್ಪ, ಅಜ್ಜಪ್ಪ, ಚಂದ್ರಣ್ಣ, ಹಟ್ಟಿ ತಿಪ್ಪೇಸ್ವಾಮಿ, ಬಿ. ತಿರುಮಲೇಶ್, ಕಾಂತರಾಜ್, ಮಹಮ್ಮದ್ ಗೌಸ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.