ADVERTISEMENT

ವಿದ್ಯಾರ್ಥಿಗಳ ಹೆದರಿಸಿ ಸುಲಿಗೆ:ಆರೋಪಿಗಳ ಬಂಧನ

ಪೊಲೀಸರ ಸೋಗಿನಲ್ಲಿ ಬೆದರಿಕೆ ಹಾಕಿದ ದುಷ್ಕರ್ಮಿಗಳು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 12:45 IST
Last Updated 15 ಫೆಬ್ರುವರಿ 2019, 12:45 IST

ದಾವಣಗೆರೆ: ದೇವರಬೆಳಕೆರೆ ಪಿಕ್‌ಅಪ್‌ ಜಲಾಶಯದ ಬಳಿ ವಿದ್ಯಾರ್ಥಿಗಳನ್ನು ಹೆದರಿಸಿ ಸುಲಿಗೆ ಮಾಡಿದ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹರಿಹರ ತಾಲ್ಲೂಕು ಮಲೇಬೆನ್ನೂರಿನ ಅರಳಹಳ್ಳಿ ರಸ್ತೆ ನಿವಾಸಿ ವಜೀರ್ ಬಾಷಾ (34), ಮಲೆಬೆನ್ನೂರಿನ ವಾಲ್ಮೀಕಿ ನಗರದ ಅಬ್ದುಲ್ ಕರೀಂ (32) ಬಂಧಿತ ಆರೋಪಿಗಳು.

ಪ್ರಕರಣದ ಹಿನ್ನೆಲೆ:ದಾವಣಗೆರೆಯ ಕಾಲೇಜೊಂದರಲ್ಲಿ ದ್ವಿತೀಯ ಪಿಯು ಓದುತ್ತಿದ್ದ ಮೂವರು ವಿದ್ಯಾರ್ಥಿಗಳು ಇದೇ 10ರಂದು ದೇವರಬೆಳಕೆರೆಗೆ ತೆರಳಿದ್ದರು. ವಿದ್ಯಾರ್ಥಿಗಳ ವಿಡಿಯೊವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಂಡ ಆರೋಪಿಗಳು, ‘ನಾವು ಪೊಲೀಸರು. ವಿಡಿಯೊವನ್ನು ಮೇಲಧಿಕಾರಿಗಳಿಗೆ ಹಾಗೂ ನಿಮ್ಮ ಪೋಷಕರಿಗೆ ಕಳುಹಿಸುತ್ತೇವೆ’ ಎಂದು ಬೆದರಿಸಿ, ₹ 400, ವಾಚ್‌ ಕಿತ್ತುಕೊಂಡಿದ್ದಾರೆ. ವಿಡಿಯೊ ಡಿಲಿಟ್‌ ಮಾಡಬೇಕೆಂದರೆ ₹ 10 ಸಾವಿರ ಕೊಡಲೇಬೇಕು ಎಂದು ಒತ್ತಾಯಿಸಿದ್ದಾರೆ.

ADVERTISEMENT

ಇದರಿಂದ ಹೆದರಿದ ವಿದ್ಯಾರ್ಥಿಗಳು ಸ್ನೇಹಿತರಿಗೆ ಕರೆ ಮಾಡಿ, ಹಣ ತರುವಂತೆ ತಿಳಿಸಿದ್ದಾರೆ. ಅವರ ಸ್ನೇಹಿತೆಯೊಬ್ಬಳು ತಂದೆ ಜತೆಗೆ ಸ್ಥಳಕ್ಕೆ ಬರುತ್ತಿರುವುದನ್ನು ದೂರದಿಂದಲೇ ಗಮನಿಸಿದ ಆರೋಪಿಗಳು ಪರಾರಿಯಾಗಿದ್ದಾರೆ. ಗಾಭರಿಗೊಂಡಿದ್ದ ದುಷ್ಕರ್ಮಿಗಳು ಓಡಿಹೋಗುವಾಗ ಮೊಬೈಲ್‌ ಬೀಳಿಸಿಕೊಂಡಿದ್ದು, ಅದನ್ನು ಪೊಲೀಸ್‌ ಠಾಣೆಗೆ ನೀಡಿದ ವಿದ್ಯಾರ್ಥಿಗಳು ದೂರು ದಾಖಲಿಸಿದ್ದರು.

ಡಿಸಿಐಬಿ ಇನ್‌ಸ್ಪೆಕ್ಟರ್‌ ಲಕ್ಷ್ಮಣ ನಾಯಕ ನೇತೃತ್ವದಲ್ಲಿ ತನಿಖೆ ನಡೆಸಿದ ವಿಶೇಷ ತಂಡ ಬುಧವಾರ ರಾತ್ರಿ ಆರೋಪಿಗಳನ್ನು ಬಂಧಿಸಿದೆ. ಹೆಡ್‌ ಕಾನ್‌ಸ್ಟೆಬಲ್‌ ರಸೂಲ್ ಸಾಬ್, ಸಿಬ್ಬಂದಿಯಾದ ಅಶೋಕ, ಸಿದ್ದೇಶ, ಶಾಂತರಾಜ್ ಹಾಗೂ ಚಾಲಕ ನಾಗರಾಜ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.