ADVERTISEMENT

ದಾವಣಗೆರೆ | ‘ಪರಮ ವೈಭವ’ ಸೃಷ್ಟಿಸುವ ಗುರಿ: ಅರುಣಕುಮಾರ್

ಆರ್‌ಎಸ್‌ಎಸ್‌ನ ಉತ್ತರ ಮತ್ತು ದಕ್ಷಿಣ ಪ್ರಾಂತದ ಪ್ರಚಾರ ಪ್ರಮುಖ್ ಅರುಣಕುಮಾರ್ ಅಭಿಮತ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:51 IST
Last Updated 16 ನವೆಂಬರ್ 2025, 5:51 IST
   

ದಾವಣಗೆರೆ: ‘ದೇಶವನ್ನು ಎಲ್ಲಾ ರೀತಿಯಲ್ಲೂ ಸದೃಢವಾಗಿಸುವ, ಮುಂಚೂಣಿಗೆ ತಂದು ನಿಲ್ಲಿಸುವಂತಹ ಪರಮ ವೈಭವವನ್ನು ಸೃಷ್ಟಿಸುವುದೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್‌) ಗುರಿಯಾಗಿದೆ. ಇದು ಒಬ್ಬರು ಅಥವಾ ಇಬ್ಬರಿಂದ ಸಾಧ್ಯವಿಲ್ಲ. ಇಡೀ ಹಿಂದೂ ಸಮುದಾಯವೇ ಒಗ್ಗೂಡಿ ಶ್ರಮಿಸಬೇಕು’ ಎಂದು ಆರ್‌ಎಸ್‌ಎಸ್‌ನ ಉತ್ತರ ಮತ್ತು ದಕ್ಷಿಣ ಪ್ರಾಂತದ ಪ್ರಚಾರ ಪ್ರಮುಖ್ ಅರುಣಕುಮಾರ್ ಹೇಳಿದರು. 

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ‘ವರ್ತಮಾನ’ (ಫೋರಂ ಫಾರ್ ಇಂಟಲೆಕ್ಚುಯಲ್ ಡಿಬೆಟ್ಸ್‌) ವತಿಯಿಂದ ಶನಿವಾರ ನಡೆದ ‘ಸಂಘದ ಶತಾಬ್ದಿ ಸಂಭ್ರಮ’ ಕಾರ್ಯಕ್ರಮದಲ್ಲಿ ‘ಶತಮಾನದ ಅವಲೋಕನ ಮತ್ತು ಭವಿಷ್ಯದ ಜವಾಬ್ದಾರಿಗಳು’ ವಿಷಯದ ಕುರಿತು ಮಾತನಾಡಿದರು. 

‘ಸ್ವಯಂಸೇವಕ ಸಂಘದ ಸಂಘದ ಶಾಖೆಗೆ ಬರುವ ಕಾರ್ಯಕರ್ತರು ಉತ್ತಮ ಆರೋಗ್ಯ, ಸಂಸ್ಕಾರ ಪಡೆಯುತ್ತಾರೆ’ ಎಂದರು. 

ADVERTISEMENT

‘ಇಡೀ ವಿಶ್ವವೇ ಭಾರತದ ವಿರುದ್ಧ ನಿಂತರೂ, ಗೆಲ್ಲುವ ವಿಶ್ವಾಸದಿಂದ ಹೋರಾಡುವ ಮನೋಭಾವ ಬೆಳೆಸಿಕೊಳ್ಳಬೇಕು. ಎದುರಾಳಿಗಳು ನಮ್ಮ ಶಕ್ತಿ, ಅಹಂಕಾರಕ್ಕೆ ತಲೆಬಾಗುವುದಲ್ಲ. ನಮ್ಮ ಶೀಲ, ಉತ್ತಮ ನಡವಳಿಕೆಗೆ ಶರಣಾಗಬೇಕು. ಗುಣಸಂಪನ್ನ ಬೆಳೆಸಿಕೊಳ್ಳಲು ಪ್ರಾರ್ಥಿಸಬೇಕು’ ಎಂದು ಹೇಳಿದರು. 

‘ಪರಮ ವೈಭವ ಸೃಷ್ಟಿಗೆ ಸಂಘದ ಕಾರ್ಯಕರ್ತರ ಪಡೆ ಹೆಚ್ಚಾಗಬೇಕು. ಉತ್ತಮ ವ್ಯಕ್ತಿತ್ವವೂ ನಿರ್ಮಾಣವಾಗಬೇಕು. 1925ರ ವಿಜಯದಶಮಿಯಂದು ಸಂಘದ ಚಟುವಟಿಕೆ ಆರಂಭಗೊಂಡವು. ಅಂದು ಬಿತ್ತಿದ ಬೀಜ ಇಂದು ಹೆಮ್ಮೆರವಾಗಿದೆ. 100 ವರ್ಷ ಪೂರೈಸಿದ ಆರ್‌ಎಸ್‌ಎಸ್‌ ಅನೇಕ ಏಳುಬೀಳುಗಳನ್ನು ಕಂಡಿದೆ’ ಎಂದು ತಿಳಿಸಿದರು. 

‘ಸಂಘವು ದೇಶದ ಅತ್ಯಂತ ದೊಡ್ಡ ಕುಟುಂಬವಾಗಿದೆ. 50 ಸಂಘಟನೆಗಳಿಗೆ ಮಾತೃ ಸ್ಥಾನದಲ್ಲಿದೆ. ವಿಶಿಷ್ಠ ಹಾಗೂ ಕುತೂಹಲಕಾರಿಯಾದ ಸಂಘಟನೆಯು ದೇಶ ಹಾಗೂ ಸಮಾಜದ ನೇತೃತ್ವವನ್ನು ವಹಿಸಿಕೊಂಡಿದೆ. 100 ವರ್ಷಗಳಿಂದ ಮೌನವಾಗಿಯೇ ಸಮಾಜಮುಖಿ ಕಾರ್ಯದಲ್ಲಿ ತೊಡಗಿದೆ’ ಎಂದು ವರ್ತಮಾನದ ಸದಸ್ಯ ಬಿ.ಕೆ.ತಿಪ್ಪೇಸ್ವಾಮಿ ಹೇಳಿದರು. 

ಸಂಘದ ಹಿರಿಯ ಮುಖಂಡ ಎಸ್‌.ಆರ್.ಹೆಗಡೆ, ವರ್ತಮಾನದ ಸದಸ್ಯ ಪಂಚಾಕ್ಷರಿ ಉಪಸ್ಥಿತರಿದ್ದರು.

ಮಹೇಶ್ವರಿ ಟಿ.ಎಚ್‌.ಎಂ. ಪ್ರಾರ್ಥಿಸಿ, ಪ್ರದೀಪ್ ಕಾರಂತ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.