
ನ್ಯಾಮತಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಯ ರುದ್ರಭೂಮಿ ಜಾಗವನ್ನು ಗುರುತಿಸುವಂತೆ ತಹಶೀಲ್ದಾರ್ ಎಂ.ಪಿ.ಕವಿರಾಜ ಅವರಿಗೆ ಸಾರ್ವಜನಿಕರು ಬುಧವಾರ ಮನವಿ ಮಾಡಿದರು.
10,000 ಜನಸಂಖ್ಯೆ ಇರುವ ಪಟ್ಟಣದ ಎಲ್ಲಾ ಸಮುದಾಯದವರು ಇದೇ ರುದ್ರಭೂಮಿಯನ್ನು ಬಳಸುತ್ತಾರೆ. ಆದರೆ ಈಗ ಕೆಲವರು ರುದ್ರಭೂಮಿ ಜಾಗ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ರುದ್ರಭೂಮಿಯಲ್ಲಿ ಗಿಡಗಂಟಿ ಬೆಳೆದು ಅಂತ್ಯಸಂಸ್ಕಾರ ಮಾಡಲು ಜನತೆ ಕಷ್ಟವಾಗಿದೆ. ಈ ಬಗ್ಗೆ ಗಮನಹರಿಸಿ, ಸ್ವಚ್ಛತೆ ಮಾಡಿಸುವಂತೆ ಮುಖಂಡರಾದ ಎಚ್.ಎನ್.ವಿರೂಪಾಕ್ಷಪ್ಪ, ಹವಳದ ಲಿಂಗರಾಜ, ಜೋಗದ ಕಾಂತರಾಜ, ವಿಜಯಕುಮಾರ, ಅಕ್ಕಸಾಲಿ ರಾಜು, ಎಂ.ಎಸ್.ಜಗದೀಶ ಮನವಿ ಮಾಡಿದರು.
ಮನವಿಗೆ ಸ್ಪಂದಿಸಿದ ತಹಶೀಲ್ದಾರ್ ಕವಿರಾಜ ಅವರು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಪಿ.ಗಣೇಶರಾವ್ ಅವರ ಜೊತೆಗೂಡಿ ಸ್ಥಳ ಪರಿಶೀಲನೆ ನಡೆಸಿದರು.
ರುದ್ರಭೂಮಿ ಜಾಗ ಒತ್ತುವರಿ ಮಾಡಿ ಮನೆ ನಿರ್ಮಾಣ ಮಾಡಿರುವುದು ಕಂಡು ಬಂದಿದ್ದರಿಂದ, ಕೂಡಲೇ ಜಾಗವನ್ನು ಅಳತೆ ಮಾಡಿ ಹದ್ದುಬಸ್ತು ಮಾಡುವಂತೆ ಮುಖ್ಯಾಧಿಕಾರಿಗೆ ಸೂಚಿಸಿದರು. ಅಳತೆ ನಂತರ ಒತ್ತುವರಿ ಮಾಡಿರುವುದು ಕಂಡು ಬಂದರೆ ತೆರವುಗೊಳಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.