ADVERTISEMENT

ಕೆಡಿಪಿ ಸಭೆಯಲ್ಲಿ ಪ್ರತಿಧ್ವನಿಸಿದ ಹೊನ್ನಾಳಿ ಮರಳು ಗುದ್ದಾಟ

​ಪ್ರಜಾವಾಣಿ ವಾರ್ತೆ
Published 25 ಜನವರಿ 2019, 13:38 IST
Last Updated 25 ಜನವರಿ 2019, 13:38 IST

ದಾವಣಗೆರೆ: ಹೊನ್ನಾಳಿ ತಾಲ್ಲೂಕಿನಲ್ಲಿ ಕೆಲವು ದಿನಗಳಿಂದ ಶಾಸಕ ಎಂ.ಪಿ. ರೇಣುಕಾಚಾರ್ಯ ಹಾಗೂ ಅಧಿಕಾರಿಗಳ ನಡುವೆ ನಡೆಯುತ್ತಿರುವ ‘ಮರಳು ಗುದ್ದಾಟ’ ವಿಷಯ ಶುಕ್ರವಾರ ಜಿಲ್ಲಾ ಪಂಚಾಯಿತಿಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲೂ ಪ್ರತಿಧ್ವನಿಸಿತು.

ಜಿಲ್ಲಾ ಪಂಚಾಯಿತಿಯ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಆರ್‌. ಮಹೇಶ್‌, ‘ಹೊನ್ನಾಳಿ ತಾಲ್ಲೂಕಿನ ಬೇಲಿಮಲ್ಲೂರು, ನರಸನಹಳ್ಳಿಯಲ್ಲಿ ರೈತರು ಮನೆ ಕಟ್ಟಲು ಎತ್ತಿನಗಾಡಿಯಲ್ಲಿ ತೆಗೆದುಕೊಂಡು ಹೋಗಿ ತೋಟದಲ್ಲಿ ದಾಸ್ತಾನು ಮಾಡಿದ್ದ ಮರಳನ್ನು ಅಧಿಕಾರಿಗಳು ಜಪ್ತಿ ಮಾಡಿ, ಪ್ರಕರಣ ದಾಖಲಿಸಿದ್ದಾರೆ. ಪರ್ಮಿಟ್‌ ಪಡೆದು ಮರಳು ತಂದಿದ್ದರೂ ತನಿಖೆ ನಡೆಸದೇ ಏಕಾಏಕಿ ಮರಳು ವಶಪಡಿಸಿಕೊಂಡು ಹೋಗಿದ್ದಾರೆ’ ಎಂದು ದೂರಿದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌, ‘ಮರಳು ನೀತಿ ಬದಲಾಯಿಸಿದ್ದರಿಂದ ಕಾನೂನು ಬಿಗಿಗೊಂಡಿದೆ. ಮರಳು ನೀತಿಯನ್ನು ಇನ್ನಷ್ಟು ಸರಳಗೊಳಿಸಲು ವಿಧಾನಸಭೆಯಲ್ಲಿ ಕಾಯ್ದೆ ಬದಲಾಯಿಸಬೇಕಾಗಿದೆ. ಮನೆ ಕಟ್ಟಲು, ಸರ್ಕಾರಿ ಯೋಜನೆಗೆ ಅಗತ್ಯ ಮರಳು ಪೂರೈಸುವ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ, ಶಾಸಕರ ಸಭೆ ನಡೆಸಿ’ ಎಂದು ತಿಳಿಸಿದರು.

ADVERTISEMENT

ಶಾಸಕ ಎಸ್‌.ಎ. ರವೀಂದ್ರನಾಥ್‌, ‘ಮನೆ ನಿರ್ಮಿಸಬೇಕು ಎಂದುಕೊಂಡವರು ಮರಳು, ಕಲ್ಲುಗಳನ್ನು ಮೂರ್ನಾಲ್ಕು ತಿಂಗಳು ಮೊದಲೇ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ದಾಖಲೆ ಇದ್ದವರನ್ನೂ ಬಂಧಿಸುವುದು ಸರಿಯಲ್ಲ. ಮರಳು ವಿತರಣೆಯಲ್ಲಿ ಸರ್ಕಾರ ಸ್ವಲ್ಪ ಉದಾರತೆ ತೋರಬೇಕು’ ಎಂದು ಮನವಿ ಮಾಡಿದರು.

ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಬಗಾದಿ ಗೌತಮ್‌, ‘ಹೊನ್ನಾಳಿಯಲ್ಲಿ ಒಟ್ಟು 978 ಮೆಟ್ರಿಕ್‌ ಟನ್‌ ಮರಳು ದಾಸ್ತಾನು ಮಾಡಲಾಗಿತ್ತು. ಮನೆ ಕಟ್ಟಲು ಇಷ್ಟೊಂದು ಪ್ರಮಾಣದಲ್ಲಿ ಮರಳು ಅಗತ್ಯವಿಲ್ಲ. ಅಕ್ರಮ ಸಾಗಾಣಿಕೆ ಮಾಡುವ ಉದ್ದೇಶದಿಂದಲೇ ದಾಸ್ತಾನು ಮಾಡಿದ್ದರಿಂದ ಜಪ್ತಿ ಮಾಡಲಾಗಿದೆ. ಸರ್ಕಾರಿ ಯೋಜನೆಯಡಿ ಮನೆ ನಿರ್ಮಿಸುವವರು ದಾಖಲೆ ನೀಡಿದರೆ 48 ಗಂಟೆಯೊಳಗೆ ಲೋಕೋಪಯೋಗಿ ಇಲಾಖೆ ನಿಗದಿಪಡಿಸಿದ ದರದಲ್ಲಿ ಮರಳು ವಿತರಿಸಲಾಗುವುದು. ಸರ್ಕಾರಿ ಯೋಜನೆಗಳಿಗಾಗಿಯೇ ಪ್ರತಿ ಮರಳು ಬ್ಲಾಕ್‌ನಲ್ಲಿ ಶೇ 25ರಷ್ಟು ಮರಳು ಮೀಸಲಿಡಲಾಗಿದೆ’ ಎಂದು ಸ್ಪಷ್ಟಪಡಿಸಿದರು.

ಅಂತಿಮವಾಗಿ ಸಚಿವರು, ‘ಘಟನೆಯ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸಿ. ಮನೆ ನಿರ್ಮಿಸಲು ಮರಳು ದಾಸ್ತಾನು ಮಾಡಿದ್ದರೆ ವಾಪಸ್‌ ಕೊಡಿ. ಅಕ್ರಮ ಸಾಗಾಣಿಕೆ ಮಾಡುವ ಉದ್ದೇಶವಿದ್ದರೆ ಕಾನೂನು ಕ್ರಮ ಕೈಗೊಳ್ಳಿ’ ಎಂದು ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.