
ದಾವಣಗೆರೆ: ಹೊಸ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆಗೆ ಮಾರುಕಟ್ಟೆಯಲ್ಲಿ ಬುಧವಾರ ಅಗತ್ಯ ವಸ್ತುಗಳ ಖರೀದಿ ಜೋರಾಗಿತ್ತು.
ನಗರದ ಪ್ರವಾಸಿ ಮಂದಿರ ರಸ್ತೆ, ಹದಡಿ ರಸ್ತೆ, ರಾಮ್ ಆ್ಯಂಡ್ ಕೋ, ಪಿ.ಬಿ.ರಸ್ತೆ, ಶಾಮನೂರು ರಸ್ತೆ ಸೇರಿದಂತೆ ಸೇರಿದಂತೆ ವಿವಿಧೆಡೆ ಹೂವು, ಕಬ್ಬು, ಕುಸುರೆಳ್ಳು, ಬೆಲ್ಲ, ಶೇಂಗಾ ಸೇರಿದಂತೆ ವಿವಿಧ ಸಿಹಿ ತಿನಿಸುಗಳನ್ನು ಜನರು ಖರೀದಿಸಿದರು.
ಕಬ್ಬು ಒಂದು ಕೋಲಿಗೆ ₹70 ರಿಂದ ₹100 ದರ ಇತ್ತು. ಹಬ್ಬದಲ್ಲಿ ಕಬ್ಬಿಗೆ ವಿಶೇಷ ಸ್ಥಾನವಿರುವ ಕಾರಣ ಹೆಚ್ಚಿನ ಬೇಡಿಕೆ ಇರುವುದು ಕಂಡುಬಂತು. ಹಬ್ಬಕ್ಕೆ ಬೇಕಾದ ಸಾಮಗ್ರಿ, ಎಳ್ಳು, ಬೆಲ್ಲ ಹಾಗೂ ಕೊಬ್ಬರಿ ಮಿಶ್ರಣ, ಕುಸುರೆಳ್ಳನ್ನು ಜನರು ವಿತರಣೆಗೆಂದು ಖರೀದಿ ಮಾಡಿದರು.
ನಗರದ ಕೆಲವು ಶಾಲೆ– ಕಾಲೇಜುಗಳು ಸೇರಿದಂತೆ ಕೆಲವೆಡೆ ಬುಧವಾರವೇ ಸಂಕ್ರಾಂತಿ ಹಬ್ಬ ಆಚರಿಸಲಾಯಿತು.
ಕುಟುಂಬ ಸದಸ್ಯರು ಮನೆಯಲ್ಲಿ ವಿವಿಧ ಬಗೆಯ ಖಾದ್ಯ ತಯಾರಿಸಿಕೊಂಡು ಬಂಧುಗಳೊಂದಿಗೆ ಗುರುವಾರ ನಗರದಲ್ಲಿರುವ ಉದ್ಯಾನಗಳಿಗೆ ತೆರಳಿ ಊಟ ಮಾಡಲಿದ್ದಾರೆ. ಗಾಜಿನ ಮನೆ, ದೃಶ್ಯಕಲಾ ಮಹಾವಿದ್ಯಾಲಯದ ಥೀಮ್ ಪಾರ್ಕ್‌ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದಾರೆ.
ಸಂಕ್ರಾಂತಿ ಸಂತೆ:
ನಗರದ ಸಿದ್ಧಗಂಗಾ ಸಿಬಿಎಸ್‌ಇ ಶಾಲೆಯ ಆವರಣದಲ್ಲಿ ವಿದ್ಯಾರ್ಥಿಗಳು ಬುಧವಾರ ಸಂಕ್ರಾಂತಿ ಸಂತೆ ನಡೆಸಿದರು.
ತರಕಾರಿ, ಸೊಪ್ಪು, ಬೇಳೆ ಕಾಳು, ಮಂಡಕ್ಕಿ ಉಸುಳಿ, ವಿವಿಧ ರೀತಿಯ ರೊಟ್ಟಿ ಪಲ್ಯಗಳು, ಮಜ್ಜಿಗೆ, ಎಳನೀರು, ಬಳೆ, ಮಾವಿನ ಸೊಪ್ಪು, ಬಾಳೆಕಂಬ, ಅರಿಶಿಣ ಕುಂಕುಮ, ಹೂ, ಎಲೆ ಅಡಿಕೆ ಹೀಗೆ ಹಬ್ಬಕ್ಕೆ ಬೇಕಾದ ಸಾಮಗ್ರಿಗಳನ್ನು ಮಾರಾಟ ಮಾಡಿದರು.
ವ್ಯಾಪಾರಕ್ಕೆ ಮನೆಯಿಂದಲೇ ಚಿಲ್ಲರೆ ನಾಣ್ಯಗಳನ್ನು ತಂದಿದ್ದರು. ಹಳ್ಳಿಯ ಸೊಗಡು ಬಿಂಬಿಸುವಂತೆ ವಿದ್ಯಾರ್ಥಿಗಳು ಸಮವಸ್ತ್ರದ ಬದಲಾಗಿ ಇಳಕಲ್ ಸೀರೆ, ಧೋತಿ- ಪಂಜೆ, ಅಂಗಿ, ಟವೆಲ್‌ಗಳನ್ನು ಧರಿಸಿದ್ದರು.
ಪಂಚಾಯಿತಿ ಕಟ್ಟೆ, ಧಾನ್ಯದ ರಾಶಿಪೂಜೆ, ಹಳ್ಳಿ ಹೋಟೆಲ್, ಗ್ರಾಮದೇವತೆಯ ಪೂಜೆ ಒಳಗೊಂಡು ಹಳ್ಳಿಯ ವಾತಾವರಣ ಸೃಷ್ಟಿಸಿದ್ದರು. ಬಂದವರಿಗೆ ಆರತಿ ಬೆಳಗಿ ಎಳ್ಳು- ಬೆಲ್ಲ ನೀಡಿ ಅತಿಥಿ ಸತ್ಕಾರವನ್ನೂ ಮಾಡಿದರು.
ಗೋಲಿ, ಬುಗುರಿ, ಚಿನ್ನಿದಾಂಡು ಆಟವಾಡಿದರು. ಗಾಳಿಪಟ ಹಾರಿಸಿ ಸಂಭ್ರಮಿಸಿದರು. ರಾಗಿ ಬೀಸಿ, ಕಣಿ ಹೇಳಿ, ಗಿಣಿ ಶಾಸ್ತ್ರ ನುಡಿದು ರಂಜಿಸಿದರು. ಶಿಕ್ಷಕರು ಮಾರ್ಗದರ್ಶನ ನೀಡಿ, ಸಂಕ್ರಾಂತಿ ಸಂತೆಯನ್ನು ಯಶಸ್ವಿಗೊಳಿಸಿದರು.
ಸಂಗೀತ ಕಾರ್ಯಕ್ರಮ
‘ಮಕರ ಸಂಕ್ರಾಂತಿಯು ಎಳ್ಳು ಬೆಲ್ಲ ಕೊಬ್ಬರಿಯನ್ನು ಹಂಚಿ ಪರಸ್ಪರ ಪ್ರೀತಿ ಮತ್ತು ಸೌಹಾರ್ದತೆಯನ್ನು ಹೆಚ್ಚಿಸುವ ಹೊಸ ವರ್ಷದ ಮೊದಲ ಹಬ್ಬವಾಗಿದೆ’ ಎಂದು ಆದರ್ಶ ಯೋಗ ಪ್ರತಿಷ್ಠಾನದ ಯೋಗ ಗುರು ರಾಘವೇಂದ್ರ ಗುರೂಜಿ ಅಭಿಪ್ರಾಯಪಟ್ಟರು. ನಗರದ ದೇವರಾಜ ಅರಸು ಬಡಾವಣೆಯ ‘ಸಿ’ ಬ್ಲಾಕ್‌ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ ಹಾಗೂ ಯೋಗ ಚಿಕಿತ್ಸಾ ಕೇಂದ್ರದಲ್ಲಿ ಬುಧವಾರ ನಡೆದ ಸಂಕ್ರಾಂತಿ ಸುಗ್ಗಿಯ ಸಂಗೀತ ಕಾರ್ಯಕ್ರಮದಲ್ಲಿ ಮಾತನಾಡಿದರು. ‘ಸಂಕ್ರಾಂತಿಯನ್ನು ದೇವತೆ ಎಂದು ನಂಬಲಾಗಿದೆ. ಸಂಕ್ರಾಂತಿ ದೇವಿಯು ಸಂಕರಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ ದಿನವಾದ್ದರಿಂದ ಸಂಕ್ರಾಂತಿ ಎಂಬ ಹೆಸರು ಪ್ರತೀತಿಯಲ್ಲಿದೆ. ಸಂಕ್ರಾಂತಿಯು ಹೊಸ ಪರ್ವವನ್ನು ಸೂಚಿಸುವ ದಿನವಾಗಿದೆ. ಸೂರ್ಯನು ತನ್ನ ದಿಕ್ಕನ್ನು ಬದಲಾಯಿಸುವ ದಿನವೇ ಮಕರ ಸಂಕ್ರಾಂತಿಯಾಗಿದೆ’ ಎಂದರು. ಗಾಯಕ ನಾಗೇಶ್ ಬಿ.ಎನ್. ಸುಗ್ಗಿ ಹಾಡುಗಳನ್ನು ಹಾಡಿದರು. ಯೋಗ ಶಿಕ್ಷಕ ಲಲಿತ್‌ಕುಮಾರ್ ವಿ. ಜೈನ್ ನಿವೃತ್ತ ತಹಶೀಲ್ದಾರ್ ವಿಶ್ವನಾಥಯ್ಯ ಕೆ.ಎಂ. ಪತ್ರಕರ್ತ ಪ್ರಕಾಶ್ ಎಚ್.ಎನ್. ಸುನೀಲ್ ಅಜಯ್ ಸೋಲಂಕಿ ಪೂಜಾ ಸೋಲಂಕಿ ಅಕ್ಷತಾ ಸೋಲಂಕಿ ಸಂತೋಷ್ ಎಚ್. ಛಾಯಾಗ್ರಾಹಕ ರುಶೀರಾ ಎಚ್. ಭರತ್ ವದೋನಿ ಯೋಗ ಶಿಕ್ಷಕ ಮಹಾಂತೇಶ್ ಹಾಗೂ ಇನ್ನಿತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.