ಸಾಸ್ವೆಹಳ್ಳಿ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ಸಾಸ್ವೆಹಳ್ಳಿ ಗ್ರಾಮ ಪಂಚಾಯಿತಿಯಿಂದ ನಡೆಯುತ್ತಿರುವ ಚರಂಡಿ ನಿರ್ಮಾಣ ಕಾಮಗಾರಿ ಕಳಪೆಯಿಂದ ಕೂಡಿದ್ದು, ನಿರ್ಮಾಣದ ಹಂತದಲ್ಲೂ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
‘ಚರಂಡಿ ನಿರ್ಮಾಣಕ್ಕೂ ಮುನ್ನ ರಸ್ತೆಯನ್ನು ಸಮರ್ಪಕವಾಗಿ ಅಳತೆ ಮಾಡಿಲ್ಲ. ರಾಂಪುರ ರಸ್ತೆಯು 60 ಅಡಿ ಅಗಲವಿದ್ದು, ಚರಂಡಿ ನಿರ್ಮಿಸುವಾಗ ಅಧಿಕಾರಿಗಳು, ಗುತ್ತಿಗೆದಾರರು ರಸ್ತೆ ಅಳತೆ ಮಾಡದೆ, ಹಳೆಯ ಚರಂಡಿಯನ್ನು ರಸ್ತೆ ಕಡೆ ಒತ್ತಿ ಚರಂಡಿ ನಿರ್ಮಾಣ ಮಾಡಿ, ಇರುವ ರಸ್ತೆಯನ್ನು ಕಿರಿದಾಗಿಸಿದ್ದಾರೆ’ ಎಂದು ಗ್ರಾಮದ ತಿಪ್ಪೇಶಪ್ಪ ಆರೋಪಿಸಿದ್ದಾರೆ.
‘ಇದರಿಂದ ರಸ್ತೆಯ ಅಗಲ ಏಕರೂಪವಾಗಿಲ್ಲ. ಹೇಗೆ ಬೇಕೋ ಹಾಗೆ ಚರಂಡಿ ನಿರ್ಮಾಣ ಮಾಡಲಾಗಿದೆ. ಈಗ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಎಲ್ಲೆಂದರಲ್ಲಿ ಗುಂಡಿ ತೋಡಿ, ತಮ್ಮಿಷ್ಟದಂತೆ ಚರಂಡಿ ನಿರ್ಮಾಣ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.
‘ಇದಲ್ಲದೆ, ಈ ಯೋಜನೆಯ ನಿಯಮಗಳ ಪ್ರಕಾರ ಕೂಲಿ ಕಾರ್ಮಿಕರನ್ನು ಬಳಸಬೇಕು. ಇಲ್ಲಿ ಯಂತ್ರಗಳನ್ನು ಬಳಸಿ ಕೂಲಿ ಕಾರ್ಮಿಕರ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಇದರಿಂದ ಸ್ಥಳೀಯ ಕೂಲಿ ಕಾರ್ಮಿಕರಿಗೆ ಕೆಲಸ ಸಿಗುತ್ತಿಲ್ಲ’ ಎಂದು ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ಈ ಕಾಮಗಾರಿಯಲ್ಲಿ ಕಳಪೆಮಟ್ಟದ ವಸ್ತುಗಳನ್ನು ಬಳಸಲಾಗಿದೆ. ಸ್ಥಳೀಯವಾಗಿ ಸಿಗುವ ಮರಳನ್ನು ಬಳಸದೆ ಎಂಸ್ಯಾಂಡ್ ಬಳಸಿದ್ದಾರೆ. ಇಲ್ಲಿ ಎಷ್ಟು ಪ್ರಮಾಣದಲ್ಲಿ ಸಿಮೆಂಟ್ ಮಿಶ್ರ ಮಾಡಿದ್ದಾರೆ ಎಂದು ತಿಳಿಯುವುದಿಲ್ಲ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ಸುದೀಪ್, ಮಲ್ಲಿಕಾರ್ಜುನ್, ಯಶವಂತ, ರಾಜಣ್ಣ, ಲಿಂಗಾಚಾರಿ, ಗೋಪಾಲ್, ಪರಮೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.