ADVERTISEMENT

ದಾವಣಗೆರೆ: ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿಯ ಲೋಕಾರ್ಪಣೆ

ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 6:48 IST
Last Updated 11 ಜನವರಿ 2026, 6:48 IST
ದಾವಣಗೆರೆಯಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯಲ್ಲಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಪುಸ್ತಕವನ್ನು ಗಣ್ಯರು ಬಿಡುಗಡೆಗೊಳಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ‘ಇಂದು ದೇಶದಲ್ಲಿ ಸೌಹಾರ್ದತೆಯನ್ನು ನಾಶಗೊಳಿಸುವುದೇ ರಾಷ್ಟ್ರಪ್ರೇಮ ಎಂದು ಬಿಂಬಿಸುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿ’ ಎಂದು ಮಾನವ ಬಂಧುತ್ವ ವೇದಿಕೆಯ ಎ.ಬಿ. ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು. 

ನಗರದ ಪಿ.ಜೆ. ಬಡಾವಣೆಯ ಪ್ರವಾಸಿ ಮಂದಿರದಲ್ಲಿ ಮಾನವ ಬಂಧುತ್ವ ವೇದಿಕೆ- ಕರ್ನಾಟಕ ಹಾಗೂ ಬಂಡಾಯ ಸಾಹಿತ್ಯ ಸಂಘಟನೆಯ ವತಿಯಿಂದ ಶನಿವಾರ ಆಯೋಜಿಸಿದ್ದ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ‘ಸೌಹಾರ್ದ ಭಾರತ’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. 

‘ಮತೀಯ ಸಂಘಟನೆಗಳು, ಕೋಮುವಾದಿ ಸಂಘಟನೆಗಳು, ರಾಷ್ಟ್ರಪ್ರೇಮದ ಹೆಸರಿನಲ್ಲಿ ಜಾತಿ ಬೀಜಗಳನ್ನು ಬಿತ್ತುವ ಈ ಕಾಲಘಟ್ಟದಲ್ಲಿ ದೇಶದಲ್ಲಿ ಸೌಹಾರ್ದ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ಈ ಪುಸ್ತಕ ಮಹತ್ವದ ಸಂದೇಶವನ್ನು ಸಾರುತ್ತದೆ. ಹಾಗೆ ದೇಶದಲ್ಲಿನ ಧರ್ಮಗಳ ಭ್ರಾತೃತ್ವದ ಮೌಲ್ಯವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಬರಗೂರು ಅವರ ಸಾಹಿತ್ಯ ಪ್ರಮುಖವಾದದ್ದು. ದೇಶದ ಸೌಹಾರ್ದತೆಯನ್ನು ಒಡೆದು ಹಾಕುವ ನಿಟ್ಟಿನಲ್ಲಿ ಸಾಂಸ್ಕೃತಿಕ ರಾಯಭಾರಿಗಳ ಹೆಸರಿನಲ್ಲಿ ಒಂದು ಯುವ ಪಡೆಯೇ ಹುಟ್ಟಿಕೊಳ್ಳುತ್ತಿರುವುದು ವಿಷಾದ’ ಎಂದು ಹೇಳಿದರು. 

ADVERTISEMENT

ಪ್ರಾಸ್ತಾವಿಕವಾಗಿ ಮಾತನಾಡಿದ ವಕೀಲ ಅನಿಸ್ ಪಾಷಾ, ‘ದ್ವೇಷ ಭಾಷಣಕ್ಕೂ ಒಂದು ಕಾನೂನು ರೂಪಿಸುವ ಹಂತಕ್ಕೆ ನಾವು ತಲುಪಿದ್ದೇವೆ ಎಂದರೆ, ಮನುಷ್ಯರು ಮನುಷ್ಯತ್ವದಿಂದ ದೂರ ಸರಿಯುತ್ತಿದ್ದಾರೆ ಎಂದರ್ಥ. ಇಂತಹ ಕಾಲಘಟ್ಟದಲ್ಲಿ ನಾಗರಿಕರು ಸೌಹಾರ್ದತೆಯಿಂದ ಬದುಕುವುದು ಅನಿವಾರ್ಯವಾಗಿದೆ. ಬರಗೂರು ರಾಮಚಂದ್ರಪ್ಪ ಅವರ ಈ ಪುಸ್ತಕವು ಕರ್ನಾಟಕದ 23 ಕಡೆಗಳಲ್ಲಿ ಏಕಕಾಲಕ್ಕೆ ಲೋಕಾರ್ಪಣೆಯಾಗುತ್ತಿರುವುದು ಸಾಹಿತ್ಯ ಲೋಕದಲ್ಲಿ ಒಂದು ದಾಖಲೆ’ ಎಂದರು.  

ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್, ‘ಪ್ರಸ್ತುತ ರಾಜಕೀಯ ವ್ಯವಸ್ಥೆಯಲ್ಲಿ ಹಣದೊಂದಿಗೆ ಧರ್ಮ ಮತ್ತು ಜಾತಿಗಳೇ ಬಂಡವಾಳವಾಗುತ್ತಿವೆ. ಯುವ ಸಮೂಹವನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳ ಮೂಲಕ ಸೌಹಾರ್ದತೆಯನ್ನು ಒಡೆಯುವ ಕೃತಕ ಮೌಲ್ಯಗಳನ್ನು ಬಿತ್ತಲಾಗುತ್ತಿದೆ. ಅಧಿಕಾರಕ್ಕಾಗಿ ಸನಾತನ ಧರ್ಮ ಸ್ಥಾಪನೆಯ ಹೆಸರಿನಲ್ಲಿ ಸೌಹಾರ್ದತೆಯನ್ನು ಕೆಡಿಸುವುದೇ ಮೂಲ ಉದ್ದೇಶವಾಗಿದೆ’ ಎಂದು ಆತಂಕ ವ್ಯಕ್ತಪಡಿಸಿದರು.  

ಪ್ರಮುಖರಾದ ಡಾ. ಮಂಜಣ್ಣ, ಡಾ. ವೈ. ರಾಮಪ್ಪ, ಆವರಗೆರೆ ರುದ್ರಮುನಿ, ರವಿ ನಾರಾಯಣ್, ಶಿವಕುಮಾರ್, ಬಸವಲಿಂಗಪ್ಪ, ತಿಪ್ಪಣ್ಣ, ಹನುಮಂತಪ್ಪ, ಉಮೇಶ್, ಮಲ್ಲೇಶಪ್ಪ, ಪಾಪುಗುರು, ಸನಾವುಲ್ಲ ನವಿಲೇಹಾಳ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. 

‘ಇಂದು ದೇಶದಲ್ಲಿ ಸೌಹಾರ್ದತೆಯನ್ನು ನಾಶಗೊಳಿಸುವುದೇ ರಾಷ್ಟ್ರಪ್ರೇಮ ಎಂದು ಬಿಂಬಿಸುತ್ತಿರುವುದು ಅತ್ಯಂತ ದುರಾದೃಷ್ಟಕರ ಸಂಗತಿ’ ಎಂದು ಮಾನವ ಬಂಧುತ್ವ ವೇದಿಕೆಯ ಎ.ಬಿ. ರಾಮಚಂದ್ರಪ್ಪ ವಿಷಾದ ವ್ಯಕ್ತಪಡಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.