ಚಿನ್ನ, ಬೆಳ್ಳಿ
ದಾವಣಗೆರೆ: ಚಿನ್ನಾಭರಣ ಅಡವಿಟ್ಟು ಪಡೆದಿದ್ದ ಸಾಲವನ್ನು ಮರುಪಾವತಿಸುವಂತೆ ನ್ಯಾಮತಿ ಪಟ್ಟಣದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಗ್ರಾಹಕರಿಗೆ ನೋಟಿಸ್ ಜಾರಿ ಮಾಡಿದೆ. ಬ್ಯಾಂಕಿನಿಂದ ಕಳುವಾಗಿದ್ದ ಚಿನ್ನಾಭರಣ ಹಸ್ತಾಂತರ ಪ್ರಕ್ರಿಯೆ ಶುರುವಾಗುವ ಮುನ್ನವೇ ಸಾಲ ಮರುಪಾವತಿಸಬೇಕೇ ಎಂಬ ಪ್ರಶ್ನೆ ಗ್ರಾಹಕರನ್ನು ಕಾಡತೊಡದಿದೆ.
‘ಚಿನ್ನ ಮತ್ತು ಕಾಗದ ಭದ್ರತೆಯ ಸಾಲ ಹೊರತುಪಡಿಸಿ’ ಎಂಬ ಉಲ್ಲೇಖ ಹೊಂದಿರುವ ಈ ನೋಟಿಸ್, ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿರುವವರಲ್ಲಿ ಅಂದಾಜು 200 ಗ್ರಾಹಕರ ಮನೆ ತಲುಪಿದೆ. ಚಿನ್ನದ ಸಾಲಕ್ಕೆ ಸಂಬಂಧಿಸಿದ ನೋಟಿಸ್ ಅಲ್ಲವೆಂದು ಆರಂಭದಲ್ಲಿ ಉಪೇಕ್ಷೆ ಮಾಡಿದ್ದ ಗ್ರಾಹಕರು ಈಗ ಆತಂಕಗೊಂಡಿದ್ದಾರೆ.
ನ್ಯಾಮತಿಯಲ್ಲಿನ ಎಸ್‌ಬಿಐ ಶಾಖೆಯಲ್ಲಿ 2024ರ ಅಕ್ಟೋಬರ್ 26ರಂದು ದರೋಡೆ ನಡೆದಿತ್ತು. 509 ಗ್ರಾಹಕರಿಗೆ ಸೇರಿದ್ದ 17 ಕೆ.ಜಿ 705 ಗ್ರಾಂ ಚಿನ್ನಾಭರಣವನ್ನು ದುಷ್ಕರ್ಮಿಗಳು ಹೊತ್ತೊಯ್ದಿದ್ದರು. ಪ್ರಕರಣ ಭೇದಿಸಿದ್ದ ಪೊಲೀಸರು, ಮಾರ್ಚ್ 27ರಂದು 6 ಜನರನ್ನು ಬಂಧಿಸಿ 17 ಕೆ.ಜಿ 100 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆದಿದ್ದರು. ಈ ಚಿನ್ನಾಭರಣವನ್ನು ಗ್ರಾಹಕರಿಗೆ ಹಸ್ತಾಂತರಿಸುವ ಪ್ರಕ್ರಿಯೆ ಆರಂಭವಾಗುವುದಕ್ಕೂ ಮುನ್ನವೇ ಸಾಲ ಮರುಪಾವತಿಸುವಂತೆ ನೋಟಿಸ್ ನೀಡಿರುವುದು ಗ್ರಾಹಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
‘90 ಗ್ರಾಂ ಚಿನ್ನಾಭರಣ ಅಡವಿಟ್ಟು ಪತ್ನಿಯ ಹೆಸರಿನಲ್ಲಿ ₹ 3 ಲಕ್ಷ ಸಾಲ ಪಡೆದಿದ್ದೆ. ಕಳುವಾಗಿರುವ ಚಿನ್ನಾಭರಣ ಮರಳಿ ಸಿಗುವುದಾದರೆ ಸಾಲ ಮರುಪಾವತಿಸಲು ಸಿದ್ಧ ಎಂದು ಈ ಮೊದಲೇ ಬ್ಯಾಂಕಿಗೆ ತಿಳಿಸಿದ್ದೆ. ಗ್ರಾಹಕರಿಗೆ ತೊಂದರೆ ಆಗದ ರೀತಿಯಲ್ಲಿ ನೋಡಿಕೊಳ್ಳುವ ಆಶ್ವಾಸನೆ ನೀಡಿದ್ದ ಬ್ಯಾಂಕ್, ಏಕಾಏಕಿ ನೋಟಿಸ್ ನೀಡಿದೆ. ಚಿನ್ನದ ಸಾಲಕ್ಕೆ ಸಂಬಂಧಿಸಿದ ಖಾತೆ ಸಂಖ್ಯೆ, ಸಾಲದ ಮೊತ್ತವನ್ನು ಉಲ್ಲೇಖಿಸಿ ಬೆದರಿಸಿದೆ. ಚಿನ್ನಾಭರಣ ಮರಳಿ ಸಿಗುವ ಖಾತರಿ ಇಲ್ಲದೇ ಸಾಲ ಮರುಪಾವತಿಸುದು ಹೇಗೆ’ ಎಂದು ಪ್ರಶ್ನಿಸುತ್ತಾರೆ ಯರಗನಾಳ ಗ್ರಾಮದ ಎಚ್.ಮಂಜಪ್ಪ.
ಬ್ಯಾಂಕಿನಲ್ಲಿ ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದ ಗ್ರಾಹಕರಲ್ಲಿ ಅನೇಕರಿಗೆ ಇಂತಹ ನೋಟಿಸ್ ತಲುಪಿದೆ. ಬ್ಯಾಂಕ್ ಹೆಸರಿನಲ್ಲಿ ಬರುತ್ತಿರುವ ಫೋನ್ ಕರೆಗಳೂ ಸಾಲ ಮರುಪಾವತಿಸುವಂತೆ ತಾಕೀತು ಮಾಡುತ್ತಿವೆ. ಸಾಲ ಮರುಪಾವತಿ ಮಾಡದೇ ಇದ್ದರೆ ಬ್ಯಾಂಕ್ ಖಾತೆ ನಿಷ್ಕ್ರಿಯಗೊಳಿಸುವ ಹಾಗೂ ‘ಸಿಬಿಲ್’ ಸ್ಕೋರ್ ಕಳೆದುಕೊಳ್ಳುವ ಎಚ್ಚರಿಕೆಯನ್ನೂ ನೋಟಿಸ್‌ನಲ್ಲಿ ನೀಡಲಾಗಿದೆ. ‘ಸಾಲ ವಸೂಲಾತಿಗೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳಲಾಗುವುದು’ ಎಂಬ ಉಲ್ಲೇಖ ಗ್ರಾಹಕರನ್ನು ಕೆರಳಿಸಿದೆ.
‘2024ರ ಫೆಬ್ರುವರಿಯಲ್ಲಿ 2 ಚಿನ್ನದ ಉಂಗುರ ಅಡವಿಟ್ಟು ₹ 40 ಸಾವಿರ ಸಾಲ ಪಡೆದಿದ್ದೆ. ಬ್ಯಾಂಕ್ ಸೂಚನೆಯ ಮೇರೆಗೆ ಬಡ್ಡಿ ಸಹಿತ ₹ 45 ಸಾವಿರ ಸಾಲ ಮರುಪಾವತಿ ಮಾಡಿದ್ದೇನೆ. ಮುಂಗಾರು ಹಂಗಾಮು ಬಿತ್ತನೆಗೆ ಇಟ್ಟುಕೊಂಡಿದ್ದ ಹಣವನ್ನು ಬ್ಯಾಂಕಿಗೆ ಪಾವತಿಸಿದರೂ ಚಿನ್ನಾಭರಣ ಸಿಕ್ಕಿಲ್ಲ’ ಎಂದು ಬೇಸರ ತೋಡಿಕೊಂಡರು ನ್ಯಾಮತಿ ತಾಲ್ಲೂಕಿನ ಯರಗನಾಳ ಗ್ರಾಮದ ಎಚ್.ಎಸ್.ಪ್ರಕಾಶ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.