ADVERTISEMENT

ಶಿಥಿಲಾವಸ್ಥೆಯ ಕೊಠಡಿಯಿಂದ ಸ್ಥಳಾಂತರಗೊಂಡಿದ್ದ ಮಕ್ಕಳು ಅಪಾಯದಿಂದ ಪಾರು

ಶಾಲಾ ಕಟ್ಟಡದ ಚಾವಣಿ ಕುಸಿತ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 16:42 IST
Last Updated 25 ಜುಲೈ 2024, 16:42 IST
   

ದಾವಣಗೆರೆ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಶಿಥಿಲಗೊಂಡಿದ್ದ ಸರ್ಕಾರಿ ಕಿರಿಯ ಪ್ರಾಥಮಿಕ ಉರ್ದು ಶಾಲೆಯ ಕೊಠಡಿಯೊಂದರ ಚಾವಣಿ ಕುಸಿದು ಬಿದ್ದ ಘಟನೆ ನಗರದ 45ನೇ ವಾರ್ಡ್‌ ವ್ಯಾಪ್ತಿಯ ಕರೂರಿನಲ್ಲಿ ಗುರುವಾರ ನಡೆದಿದೆ. ಮುನ್ನೆಚ್ಚರಿಕೆಯ ಕ್ರಮವಾಗಿ ಮಕ್ಕಳನ್ನು ಬೇರೆಡೆ ಸ್ಥಳಾಂತರಿಸಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ.

1934ರಲ್ಲಿ ನಿರ್ಮಾಣಗೊಂಡಿರುವ ಶಾಲಾ ಕಟ್ಟಡದ ಕೊಠಡಿಯೊಂದು ಸಂಪೂರ್ಣ ಶಿಥಿಲಾವಸ್ಥೆ ತಲುಪಿತ್ತು. ಇದನ್ನು ಮೊದಲೇ ಗಮನಿಸಿದ ಶಿಕ್ಷಕರು ಈ ಕೊಠಡಿಯನ್ನು ಬಳಸುತ್ತಿರಲಿಲ್ಲ. ಉರ್ದು ಶಾಲೆಯ 1ರಿಂದ 5ನೇ ತರಗತಿಯವರೆಗಿನ ಎಲ್ಲ 11 ಮಕ್ಕಳನ್ನು ಪಕ್ಕದ ಕೊಠಡಿಗೆ ಸ್ಥಳಾಂತರಿಸಲಾಗಿತ್ತು. ಗುರುವಾರ ಮಧ್ಯಾಹ್ನ ಊಟದ ವಿರಾಮದ ಸಂದರ್ಭದಲ್ಲಿ ಶಿಥಿಲಗೊಂಡ ಕೊಠಡಿಯ ಚಾವಣಿಯ ಹೆಂಚುಗಳು ಕುಸಿದು ಬಿದ್ದಿವೆ.

‘ಉರ್ದು ಮತ್ತು ಕನ್ನಡ ಮಾಧ್ಯಮ ಸರ್ಕಾರಿ ಶಾಲೆ ಒಂದೇ ಕಟ್ಟಡದಲ್ಲಿದೆ. ತೀರಾ ಹಳೆಯದಾದ ಕಟ್ಟಡ ಕುಸಿಯುವ ಹಂತ ತಲುಪಿದೆ. ಚಾವಣಿ ಹಾಳಾಗಿದ್ದು ಮಳೆ ಬಂದಾಗ ಸೋರುತ್ತಿದೆ. ಈ ಕುರಿತು ಇಲಾಖೆಗೆ ಹಲವು ಬಾರಿ ಪತ್ರ ಬರೆಯಲಾಗಿತ್ತು’ ಎಂದು ಶಿಕ್ಷಕರೊಬ್ಬರು ಬೇಸರ ವ್ಯಕ್ತಪಡಿಸಿದರು.

ADVERTISEMENT

ಘಟನೆ ತಿಳಿಯುತ್ತಿದ್ದಂತೆ ಶಾಲೆಗೆ ಧಾವಿಸಿದ ಪೋಷಕರು, ಶಿಕ್ಷಣ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಮಕ್ಕಳಿಗೆ ತೊಂದರೆ ಆಗಿದ್ದರೆ ಹೊಣೆ ಯಾರು ಎಂದು ಪ್ರಶ್ನಿಸಿದರು. ಶಿಕ್ಷಕರ ಜೊತೆಗೆ ವಾಗ್ವಾದ ನಡೆಸಿದರು.

‘ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ಪೋಷಕರು ಶಾಲೆ ಆರಂಭವಾಗುವ ಮುನ್ನವೇ ಕಳವಳ ವ್ಯಕ್ತಪಡಿಸಿದ್ದರು. ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸಲು ವರ್ಗಾವಣೆ ಪ್ರಮಾಣ ಪತ್ರ ಕೇಳಿದ್ದರು. ಹೊಸ ಕಟ್ಟಡ ನಿರ್ಮಿಸುವ ಆಶ್ವಾಸನೆ ನೀಡಿ ಮಕ್ಕಳನ್ನು ಸರ್ಕಾರಿ ಶಾಲೆಯಲ್ಲಿ ಉಳಿಸಿಕೊಂಡದ್ದೆವು. ಈ ಅವಘಡದಿಂದ ಪೋಷಕರು ಇನ್ನಷ್ಟು ಗಾಬರಿಯಾಗಿದ್ದಾರೆ’ ಎಂದು ಶಿಕ್ಷಕರೊಬ್ಬರು ತಿಳಿಸಿದರು.

ಉತ್ತರ ವಲಯ ವ್ಯಾಪ್ತಿಯ ಕರೂರು ಸರ್ಕಾರಿ ಶಾಲೆಯ ಅಭಿವೃದ್ಧಿಯು ಸ್ಥಳ ವಿವಾದದ ಕಾರಣಕ್ಕೆ ಬಹುದಿನಗಳಿಂದ ನನೆಗುದಿಗೆ ಬಿದ್ದಿದೆ. ಶಾಲೆಗೆ ದಾನ ನೀಡಿದವರು ನ್ಯಾಯಾಲಯದ ಮೊರೆಹೋದ ಪರಿಣಾಮ ಹೊಸ ಕಟ್ಟಡ ನಿರ್ಮಾಣ ಅಸಾಧ್ಯವಾಗಿದೆ. ಶಾಲಾ ಕಟ್ಟಡಕ್ಕೆ ಶಾಸಕರ ನಿಧಿಯಿಂದ ಬಿಡುಗಡೆಯಾಗಿದ್ದ ₹ 27 ಲಕ್ಷ ಅನುದಾನ ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

ಸಮುದಾಯ ಭವನದಲ್ಲಿ ಶಾಲೆ

ಹೊಸ ಕಟ್ಟಡ ನಿರ್ಮಾಣವಾಗುವವರೆಗೂ ಕರೂರಿನ ಸಮುದಾಯ ಭವನದಲ್ಲಿ ಶಾಲೆ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೆ ಮಕ್ಕಳ ಪೋಷಕರು ಸಮ್ಮತಿ ಸೂಚಿಸಿದ್ದಾರೆ.

ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ್‌ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಆತಂಕಗೊಂಡಿದ್ದ ಪೋಷಕರನ್ನು ಸಮಾಧಾನಪಡಿಸಿ ಚರ್ಚಿಸಲಾಯಿತು. ಸಮುದಾಯ ಭವನದಲ್ಲಿ ಶಾಲೆ ನಡೆಸಲು ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.