ADVERTISEMENT

ಸಸಿಗಳನ್ನೇ ಮಕ್ಕಳಂತೆ ಬೆಳೆಸಿದೆ

ಪರಿಸರ ಉತ್ಸವ ಕಾರ್ಯಕ್ರಮದಲ್ಲಿ ಸಾಲುಮರದ ತಿಮ್ಮಕ್ಕ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 15:02 IST
Last Updated 6 ಫೆಬ್ರುವರಿ 2019, 15:02 IST
ದಾವಣಗೆರೆಯಲ್ಲಿ ಬುಧವಾರ ನಡೆದ ಪರಿಸರ ಉತ್ಸವದಲ್ಲಿ ಸಾಲುಮರದ ತಿಮ್ಮಕ್ಕ ಮಾತನಾಡಿದರು
ದಾವಣಗೆರೆಯಲ್ಲಿ ಬುಧವಾರ ನಡೆದ ಪರಿಸರ ಉತ್ಸವದಲ್ಲಿ ಸಾಲುಮರದ ತಿಮ್ಮಕ್ಕ ಮಾತನಾಡಿದರು   

ದಾವಣಗೆರೆ: ‘ಮದುವೆಯಾಗಿ 20 ವರ್ಷ ಕಳೆದರೂ ಮಕ್ಕಳಾಗಲಿಲ್ಲ. ಅದಕ್ಕೆ ನಾನು ಮತ್ತು ಪತಿ ರಸ್ತೆ ಬದಿಯಲ್ಲಿ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಬೆಳೆಸಿದೆವು’ ಎಂದು ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಹೇಳಿದರು.

ಮಾಲಿನ್ಯ ನಿಯಂತ್ರಣ ಮಂಡಳಿ, ಪರಿಸರ ಸಂರಕ್ಷಣಾ ವೇದಿಕೆ, ರಾಜ್ಯ ವಿಜ್ಞಾನ ಪರಿಷತ್ತು, ಜೆ.ಎಚ್‌. ಪಟೇಲ್‌ ಕಾಲೇಜು, ಮಾನವ ಬಂಧುತ್ವ ವೇದಿಕೆ, ಅಮೃತ ಯುವಕ ಸಂಘದ ಆಶ್ರಯದಲ್ಲಿ ಬುಧವಾರ ಕುವೆಂಪು ಕನ್ನಡ ಭವನದಲ್ಲಿ ನಡೆದ ಪರಿಸರ ಉತ್ಸವ ಹಾಗೂ ಪರಿಸರ ಮಿತ್ರ ಶಾಲಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಬೆಳಿಗ್ಗೆ ಕೆಲಸಕ್ಕೆ ಹೋಗುವ ಮೊದಲು ಎಲ್ಲ ಗಿಡಗಳಿಗೆ ನೀರು ಎರೆಯುತ್ತಿದ್ದೆವು. ಸಣ್ಣವರಿರಲಿ, ದೊಡ್ಡವರಿರಲಿ ಪ್ರತಿಯೊಬ್ಬರೂ ಸಸಿಗಳನ್ನು ನೆಡಬೇಕು. ಮನೆ ಮುಂದೆ ಜಾಗ ಇಲ್ಲದೇ ಇದ್ದರೆ ರಸ್ತೆ ಬದಿಯಲ್ಲಿ ನೆಟ್ಟು ಬೆಳೆಸಿ’ ಎಂದು ಸಲಹೆ ನೀಡಿದರು.

ADVERTISEMENT

ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ, ‘ವಾಟ್ಸ್‌ಆ್ಯಪ್‌, ಫೇಸ್‌ಬುಕ್‌, ಟ್ವಿಟ್ಟರ್‌, ಯುಟ್ಯೂಬ್‌ಗಳಲ್ಲಿ ಪ್ರಚಾರ ಮಾಡುವುದಕ್ಕಾಗಿ ತಿಮ್ಮಕ್ಕ ಗಿಡ ನೆಟ್ಟಿದ್ದಲ್ಲ. ಪ್ರಚಾರದ ಬಗ್ಗೆ ಚಿಂತನೆಯೇ ಮಾಡದೆ, ಕರ್ತವ್ಯ ಎಂಬಂತೆ ಗಿಡಗಳನ್ನು ನೆಟ್ಟು, ಸಾಕಿ, ಬೆಳೆಸಿದರು. ಅವರ ನೆರವಿಗೆ ಬರುವುದು ಸರ್ಕಾರದ ಜವಾಬ್ದಾರಿ. ತಿಮ್ಮಕ್ಕ ಅವರನ್ನು ನೋಡಿಕೊಳ್ಳಲು ಆಗುವುದಿಲ್ಲ ಎಂದು ಸರ್ಕಾರ ತಿಳಿಸಿದರೆ ನಾವೇ ಅವರ ಬದುಕಿಗೆ ಬೇಕಾದ ಎಲ್ಲ ನೆರವು ನೀಡುತ್ತೇವೆ’ ಎಂದು ಹೇಳಿದರು.

ಪರಿಸರ ಧರ್ಮ ಉಳಿದರಷ್ಟೇ ರಾಷ್ಟ್ರಧರ್ಮ, ನಮ್ಮನಮ್ಮ ಧರ್ಮಗಳು ಉಳಿಯುತ್ತವೆ. ಅದಕ್ಕಾಗಿ ಎಲ್ಲರೂ ತಿಮ್ಮಕ್ಕನಂತೆ ಗಿಡಗಳನ್ನು ಮಕ್ಕಳಿಗಿಂತ ಹೆಚ್ಚಿನ ಪ್ರೀತಿಯಿಂದ ಬೆಳೆಸಬೇಕು ಎಂದು ಸಲಹೆ ನೀಡಿದರು.

ಬರುಡೇಕಟ್ಟೆ ಮಂಜಪ್ಪ ಬರೆದಿರುವ ‘ಮಿಟ್ಲಕಟ್ಟೆ ಸಾಲುಮರದ ವೀರಾಚಾರಿ ಸಾಧನೆ’ ಕೃತಿ ಬಿಡುಗಡೆ ಮಾಡಲಾಯಿತು. ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ಎಸ್‌. ದೇವರಮನೆ ಅಧ್ಯಕ್ಷತೆ ವಹಿಸಿದ್ದರು. ಸಾಲುಮರದ ವೀರಾಚಾರಿ, ಜನಪದ ಪರಿಷತ್ತಿನ ಅಧ್ಯಕ್ಷ ಡಾ. ಎಚ್‌. ವಿಶ್ವನಾಥ್‌, ಬಾಪೂಜಿ ತಾಂತ್ರಿಕ ವಿದ್ಯಾಲಯದ ನಿರ್ದೇಶಕ ಪ್ರೊ. ವೃಷಭೇಂದ್ರಪ್ಪ, ಜಿಲ್ಲಾ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌, ಉಪ ಪರಿಸರ ಅಧಿಕಾರಿ ಸುರೇಶ್‌, ಸಮಾಜ ಸೇವಕಿ ಜಯಮ್ಮ, ಎಂ. ಗುರುಸಿದ್ಧಸ್ವಾಮಿ ಉಪಸ್ಥಿತರಿದ್ದರು.

ಗೋಷ್ಠಿ: ಅಂತರ್ಜಲ ಹಾಗೂ ಮಳೆನೀರು ಕೊಯ್ಲು ಬಗ್ಗೆ ಡಾ. ಎಂ.ಜೆ. ದೇವರಾಜ ರೆಡ್ಡಿ, ಯುವಜನ ಮತ್ತು ಪರಿಸರ ಬಗ್ಗೆ ಡಾ. ರಾಜಾ ಸಮರಸೇನ್‌ ಮೋದಿ ವಿಷಯ ಮಂಡನೆ ಮಾಡಿದರು.

ಮೆರವಣಿಗೆ: ಸಾಲುಮರದ ತಿಮ್ಮಕ್ಕ ಹಾಗೂ ಸಾಲುಮರದ ಕೆ.ವೀರಾಚಾರಿ ಅವರನ್ನು ಸಾರೋಟುನಲ್ಲಿ ಕೂರಿಸಿ ವಿವಿಧ ಕಲಾ ತಂಡಗಳೊಂದಿಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.

‘ಸತ್ತ ಮೇಲಿನ ಸ್ಮಾರಕಕ್ಕಿಂತ ಬದುಕಿರುವಾಗ ನೆರವು ಅಗತ್ಯ’

ಸಮಾಜಕ್ಕೆ ಮಹತ್ವದ ಕೊಡುಗೆ ನೀಡಿದವರು ಬದುಕಿರುವಾಗ ನೆರವಾಗದೇ, ಅವರು ಸತ್ತ ಮೇಲೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಸ್ಮಾರಕ ನಿರ್ಮಾಣ ಮಾಡುವುದಕ್ಕೆ ಅರ್ಥವಿಲ್ಲ. ನೆಮ್ಮದಿಯ ಬದುಕಿಗಾಗಿ ಸರ್ಕಾರ ನೆರವು ನೀಡಬೇಕು ಎಂದು ಪರಿಸರ ರಾಷ್ಟ್ರಪ್ರಶಸ್ತಿ ವಿಜೇತ ಬಳ್ಳೂರು ಉಮೇಶ್‌ ಹೇಳಿದರು.

ಸಾಲುಮರದ ತಿಮ್ಮಕ್ಕ ಅವರ ದೈಹಿಕ ಮತ್ತು ಆರ್ಥಿಕ ಸ್ಥಿತಿ ಗಂಭೀರವಾಗಿರುವಾಗ ಜಿ. ಪರಮೇಶ್ವರ್‌ ಅವರು ವೈಯಕ್ತಿಕವಾಗಿ ನೆರವು ನೀಡಿದ್ದರಿಂದ ಬೀದಿಗೆ ಬೀಳುವುದು ತಪ್ಪಿತು. ತಿಮ್ಮಕ್ಕ ಅವರ ಬಗ್ಗೆ ಪಠ್ಯ, ಹಾಡು, ಅವರಿಗೆ ಪ್ರಶಸ್ತಿಗಳು ಬಂದವು. ಆದರೆ ಆರ್ಥಿಕವಾಗಿ ಅವರು ಸಂಕಷ್ಟದಲ್ಲೇ ಉಳಿದಿದ್ದಾರೆ. ಸರ್ಕಾರ ನೀಡುವ ₹ 500 ವೃದ್ಧಾಪ್ಯ ವೇತನದಲ್ಲಿಯೇ ಬದುಕುವಂತಾಗಿದೆ ಎಂದು ತಿಳಿಸಿದರು.

ಇದು ತಿಮ್ಮಕ್ಕ ಅವರ ಒಬ್ಬರ ವಿಚಾರ ಅಲ್ಲ. ಎಲ್ಲ ಸಾಧಕರ ನೆಮ್ಮದಿಯ ಬದುಕಿಗೆ ಬೆಂಬಲವಾಗಿ ಸರ್ಕಾರ ನಿಲ್ಲಬೇಕು ಎಂದು ಆಗ್ರಹಿಸಿದರು.

ಜಿಲ್ಲಾ ಹಸಿರು ಶಾಲಾ ಪ್ರಶಸ್ತಿ: ಹದಡಿ ಮಾರುತಿ ಪ್ರೌಢಶಾಲೆ, ಹರೋನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಲಕ್ಕಶೆಟ್ಟಿಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮತೀರ್ಥ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಿಕ್ಕಬಿದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಯರಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನಿಚ್ಚಾಪುರ ಪರ್ಲ್‌ ಪಬ್ಲಿಕ್‌ ಸ್ಕೂಲ್‌, ನಜೀರ್‌ನಗರ ಶಾಂತಿನಿಕೇತನ ಪ್ರೌಢಶಾಲೆ, ಜಗಳೂರು ಜೆ.ಇಮಾಂ ಮೆಮೋರಿಯಲ್‌ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನಿಟುವಳ್ಳಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ.

ಜಿಲ್ಲಾ ಹಳದಿ ಶಾಲಾ ಪ್ರಶಸ್ತಿ:ಕಬ್ಬೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದಾವಣಗೆರೆ ಡಿಆರ್‌ಆರ್‌ ಪ್ರೌಢಶಾಲೆ, ನಿಟುವಳ್ಳಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ, ಅಂಬರಘಟ್ಟ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಂಚಿಕೊಪ್ಪ ಸರ್ಕಾರಿ ಪ್ರೌಢಶಾಲೆ, ದೊಗ್ಗಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರೇಣುಕಾಪುರ ಕ್ಯಾಂಪ್‌ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ತ್ಯಾವಣಗಿ ಬಾಲಕರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ದ್ಯಾಮವ್ವನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಆನಗೋಡು ಮರುಳಸಿದ್ಧೇಶ್ವರ ಪ್ರೌಢಶಾಲೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.