ADVERTISEMENT

ಸಾಲದ ಹಣ ಅನ್ಯ ಉದ್ದೇಶಕ್ಕೆ ಬಳಕೆ ಸರಿಯಲ್ಲ: ಕೆಂಚಪ್ಪ  

ಜಗಳೂರು: ಸ್ವಸಹಾಯ ಸಂಘಗಳಿಗೆ ಸಾಲ ಮೇಳ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 17 ಜನವರಿ 2026, 7:23 IST
Last Updated 17 ಜನವರಿ 2026, 7:23 IST
ಜಗಳೂರಿನ ತಾ.ಪಂ. ಕಚೇರಿಯಲ್ಲಿ ಶುಕ್ರವಾರ ಸ್ವಸಹಾಯ ಸಂಘಗಳ ಸಾಲ ಮೇಳ ಕಾರ್ಯಕ್ರಮ ನಡೆಯಿತು. ಇಒ ಕೆಂಚಪ್ಪ, ಚಿನ್ಮಯಿ ಶಾಸ್ತ್ರಿ, ಹಣಮಂತ ಬೈರಗೊಂಡ, ಎನ್. ಮಾರೆಪ್ಪ ಉಪಸ್ಥಿತರಿದ್ದರು
ಜಗಳೂರಿನ ತಾ.ಪಂ. ಕಚೇರಿಯಲ್ಲಿ ಶುಕ್ರವಾರ ಸ್ವಸಹಾಯ ಸಂಘಗಳ ಸಾಲ ಮೇಳ ಕಾರ್ಯಕ್ರಮ ನಡೆಯಿತು. ಇಒ ಕೆಂಚಪ್ಪ, ಚಿನ್ಮಯಿ ಶಾಸ್ತ್ರಿ, ಹಣಮಂತ ಬೈರಗೊಂಡ, ಎನ್. ಮಾರೆಪ್ಪ ಉಪಸ್ಥಿತರಿದ್ದರು   

ಜಗಳೂರು: ಸಾಲ ಪಡೆಯುವ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಅನ್ಯ ಉದ್ದೇಶಕ್ಕೆ ಹಣವನ್ನು ಬಳಸದೇ ಆರ್ಥಿಕ ಶಿಸ್ತನ್ನು ರೂಢಿಸಿಕೊಳ್ಳಬೇಕು ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕೆಂಚಪ್ಪ ಸಲಹೆ ನೀಡಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಶುಕ್ರವಾರ ಲೀಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಂಡಿದ್ದ ಸ್ವಸಹಾಯ ಸಂಘಗಳ ಸಾಲ ಮೇಳ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಬಹುತೇಕ ಸ್ವಸಹಾಯ ಸಂಘದ ಸದಸ್ಯರು ಯಾವ ಉದ್ದೇಶಕ್ಕೆ ಸಾಲ ಪಡೆದಿರುತ್ತಾರೊ ಅದರ ಬದಲಿಗೆ ಆರ್ಥಿಕವಾಗಿ ಲಾಭದಾಯಕವಲ್ಲದ ಬೇರೆ ಉದ್ದೇಶಗಳಿಗೆ ಸಾಲದ ಹಣವನ್ನು ಬಳಸುತ್ತಿರುವ ಬಗ್ಗೆ ವ್ಯಾಪಕ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಇತ್ತೀಚೆಗೆ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದೆ. ಹೈನುಗಾರಿಕೆ, ಕುರಿ ಸಾಕಾಣಿಕೆ ಮತ್ತು ಕೃಷಿಯೇತರ ಲಾಭದಾಯಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಸಂಘಗಳು ಯಶಸ್ವಿಯಾಗಿ ಮುನ್ನಡೆಯಬಲ್ಲವು ಎಂದು ಅಭಿಪ್ರಾಯಪಟ್ಟರು.

ADVERTISEMENT

ಸಂಘದ ಸದಸ್ಯರಿಗೆ ₹3 ಲಕ್ಷದವರೆಗೆ ಸಾಲ ಸೌಲಭ್ಯ ಕಲ್ಪಿಸುವ ಎನ್.ಆರ್.ಎಲ್.ಎಂ ಯೋಜನೆಯಡಿ ಉಳಿತಾಯದ ಹಣವನ್ನು  ನಿರಂತರವಾಗಿ ಬ್ಯಾಂಕ್ ಖಾತೆಗೆ ತುಂಬಬೇಕು. ಪ್ರತಿ ವಹಿವಾಟನ್ನು ಚೆಕ್ ಮೂಲಕ ನಡೆಸಿದಲ್ಲಿ ಪಾರದರ್ಶಕತೆ ಸಾಧ್ಯವಾಗುತ್ತದೆ ಎಂದು ಕೆನರಾ ಬ್ಯಾಂಕ್ ಅಣಬೂರು ಶಾಖೆಯ ವ್ಯವಸ್ಥಾಪಕ ಹಣಮಂತ ಬೈರಗೊಂಡ ಹೇಳಿದರು.

ಸಂಜೀವಿನ ಒಕ್ಕೂಟದಲ್ಲಿ ಸಾಲ ಪಡೆಯುವ ಸ್ವಸಹಾಯ ಸಂಘಗಳ ಸದಸ್ಯರು ಸಮರ್ಪಕವಾಗಿ ಉಳಿತಾಯ ಮಾಡುತ್ತಿಲ್ಲ. ಉಳಿತಾಯದ ಹಣವನ್ನು ಖಾತೆಗಳಿಗೆ ಜಮಾ ಮಾಡುತ್ತಿಲ್ಲ. ಪ್ರತಿ ತಿಂಗಳೂ ಸಂಘದ ಪ್ರತಿಯೊಬ್ಬ ಸದಸ್ಯರನ್ನು ಬ್ಯಾಂಕ್‌ಗೆ ಕಳುಹಿಸಿ ವಹಿವಾಟು ನಡೆಸಿದಲ್ಲಿ ಸಂಘದಲ್ಲಿ ಪಾರದರ್ಶಕತೆ ಕಾಪಾಡಲು ಸಾಧ್ಯವಾಗುತ್ತದೆ ಎಂದು ಕೆನರಾ ಬ್ಯಾಂಕ್ ಜಗಳೂರು ಶಾಖೆಯ ವ್ಯವಸ್ಥಾಪಕ ಎನ್. ಮಾರೆಪ್ಪ ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ತಾಲ್ಲೂಕಿನ 59 ಸ್ವಸಹಾಯ ಸಂಘಗಳಿಂದ ಸಾಲ ಕೋರಿ ಅರ್ಜಿಗಳು ಸಲ್ಲಿಕೆಯಾಗಿದ್ದು, 3 ಸಂಘಗಳಿಗೆ ₹37 ಲಕ್ಷ ಸಾಲವನ್ನು ಮಂಜೂರು ಮಾಡಲಾಯಿತು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ಚಿನ್ಮಯಿ ಶಾಸ್ತ್ರಿ, ಬಿಳಿಚೋಡು ಶಾಖೆ ವ್ಯವಸ್ಥಾಪಕ ಸಂಜಯ್, ಎನ್.ಆರ್.ಎಲ್.ಎಂ. ವಿಭಾಗದ ಜಯರಾಜ್, ಆಕಾಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.