ADVERTISEMENT

ಕಳ್ಳತನ ಅಪರಾಧಿಗೆ 4 ವರ್ಷ ಸಾದಾ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 4:25 IST
Last Updated 26 ಜನವರಿ 2021, 4:25 IST

ದಾವಣಗೆರೆ: ವಿವಿಧೆಡೆ ಕಳ್ಳತನ ಮಾಡಿದ್ದ ಅಪರಾಧಿಗೆ ಇಲ್ಲಿನ 3ನೇ ಹೆಚ್ಚುವರಿ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಎರಡು ಪ್ರಕರಣಗಳಲ್ಲಿ ನಾಲ್ಕು ವರ್ಷ ಶಿಕ್ಷೆ ಹಾಗೂ ₹10 ಸಾವಿರ ದಂಡ ವಿಧಿಸಿದೆ.

ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕೂಡಸಿದ್ದನ ಪಾಳ್ಯದ ಕಲ್ಕೆರೆ ಮಂಜ ಅಲಿಯಾಸ್ ಮಂಜುನಾಥ (27) ಶಿಕ್ಷೆಗೆ ಗುರಿಯಾದ ಅಪರಾಧಿ.

ಈತ 2011ರಲ್ಲಿ ಆಂಜನೇಯ ಬಡಾವಣೆಯ ಅಣ್ಣಯ್ಯ ಅವರ ಮನೆಯಲ್ಲಿ ಮನೆಯ ಬಾಗಿಲಿನ ಇಂಟರ್‌ಲಾಕ್ ಮುರಿದು ಬಂಗಾರದ ಆಭರಣಗಳನ್ನು ಕಳ್ಳತನ ಮಾಡಿದ್ದ. ಸಿಪಿಐ ಎಂ.ಸಿ. ದಶರಥಮೂರ್ತಿ ಅವರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.

ADVERTISEMENT

ವಿಚಾರಣೆ ನಡೆಸಿದ ನ್ಯಾಯಾಧೀಶ ಪ್ರವೀಣ್ ಎಂ.ನಾಯಕ್, ಅಪರಾಧಿಗೆ ಕಲಂ 454 ಐಪಿಸಿ ಅಡಿ 2 ವರ್ಷ ಸಾದಾ ಶಿಕ್ಷೆ, ₹5 ಸಾವಿರ ದಂಡ. ಕಲಂ 380ರ ಅಡಿ 2 ವರ್ಷ ಸಾದಾ ಶಿಕ್ಷೆ ಹಾಗೂ ₹5 ಸಾವಿರ ದಂಡ ವಿಧಿಸಿದ್ದಾರೆ. ದಂಡ ಪಾವತಿಸಲು ತಪ್ಪಿದ್ದಲ್ಲಿ 3 ತಿಂಗಳ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಚಿತ್ರಶೇಖರಪ್ಪ ಬಿ.ಡಿ ಹಾಗೂ ಬಸವರಾಜು ಎ.ಎಂ. ವಾದ ಮಂಡಿಸಿದ್ದರು. ಅಪರಾಧಿಗೆ ಶಿಕ್ಷೆಯಾಗಲು ವಿದ್ಯಾನಗರ ಪಿಎಸ್ಐ ಹಾಗೂ ಸಿಬ್ಬಂದಿ ಸಹಕರಿಸಿದ್ದಾರೆ ಎಂದು ಅಭಿಯೋಜಕರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.