ADVERTISEMENT

ಉಪಬೆಳೆಯಾಗಿ ಸೇವಂತಿ ತಂದುಕೊಟ್ಟ ಲಾಭ

ಸಂತೇಬೆನ್ನೂರು ಸಮೀಪದ ಗೊಲ್ಲರಹಳ್ಳಿ ಗ್ರಾಮದ ತಿಮ್ಮಣ್ಣ

ಕೆ.ಎಸ್.ವೀರೇಶ್ ಪ್ರಸಾದ್
Published 25 ಆಗಸ್ಟ್ 2021, 9:09 IST
Last Updated 25 ಆಗಸ್ಟ್ 2021, 9:09 IST
ಸಂತೇಬೆನ್ನೂರು ಬಳಿಯ ಚಿಕ್ಕಬೆನ್ನೂರು ಜಮೀನೊಂದರಲ್ಲಿ ರೈತ ತಿಮ್ಮಣ್ಣ ಬೆಳೆದ ಸೇವಂತಿ ಹೂವು
ಸಂತೇಬೆನ್ನೂರು ಬಳಿಯ ಚಿಕ್ಕಬೆನ್ನೂರು ಜಮೀನೊಂದರಲ್ಲಿ ರೈತ ತಿಮ್ಮಣ್ಣ ಬೆಳೆದ ಸೇವಂತಿ ಹೂವು   

ಸಂತೇಬೆನ್ನೂರು: ಅಡಿಕೆ ಗಿಡಗಳ ನಡುವೆ ಸೇವಂತಿ ಹೂವನ್ನು ಉಪಬೆಳೆಯಾಗಿ ಬೆಳೆದು ಕೈ ತುಂಬಾ ಲಾಭ ಗಳಿಸುತ್ತಿದ್ದಾರೆ ಸಮೀಪದ ಗೊಲ್ಲರಹಳ್ಳಿ ಗ್ರಾಮದ ತಿಮ್ಮಣ್ಣ.

ಕಾಯಕ ನಿಷ್ಠ ರೈತನ ಬೆವರಿನ ಪ್ರತಿ ಹನಿಗೂ ಪ್ರತಿಫಲ ದಕ್ಕಿದರೆ ದಣಿವಳಿದು ಸಂತಸ ಹೊಮ್ಮುತ್ತದೆ. ತಿಮ್ಮಣ್ಣ ಅವರು ಕುಟುಂಬದ ಸದಸ್ಯರ ನೆರವಿನೊಂದಿಗೆ ಸೇವಂತಿ ಬೆಳೆದು, ತಾವೇ ನೇರ ಮಾರಾಟ ಮಾಡುವ ಮೂಲಕ ಉತ್ತಮ ಲಾಭ ಗಳಿಸುತ್ತಿದ್ದಾರೆ.

ಸುಮಾರು 30 ಗುಂಟೆ ಜಮೀನಿನಲ್ಲಿ ತಿಮ್ಮಣ್ಣ ಅವರು ಸೇವಂತಿಯೇ ಅಲ್ಲದೆ ಸುಗಂಧರಾಜ ಹೂವಿನ ಕೃಷಿಯನ್ನೂ ಮಾಡುತ್ತಿದ್ದಾರೆ. ಮಡದಿ, ಮಕ್ಕಳೂ ಪುಷ್ಪ ಕೃಷಿಯಲ್ಲಿ ಪಾಲ್ಗೊಂಡಿದ್ದಾರೆ. ನಿತ್ಯ ಸುಮಾರು 30 ಕೆ.ಜಿ. ಸೇವಂತಿ ಹೂವು ಬಿಡಿಸುತ್ತಾರೆ. 2 ಕೆ.ಜಿ.ಯಷ್ಟು ಸುಗಂಧರಾಜ ಸಿಗುತ್ತದೆ. ನಂತರ ಹೂವನ್ನು ಹಟ್ಟಿ ರಸ್ತೆ ಬದಿ ನಿಂತು ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಸುಮಾರು 10 ಸಾವಿರ ಸೇವಂತಿ ಸಸಿಗಳನ್ನು ಮೂರು ತಿಂಗಳುಗಳ ಹಿಂದೆ ನಾಟಿ ಮಾಡಲಾಗಿತ್ತು. ಅಡಿಕೆ ಬೆಳೆಯ ಹನಿ ನೀರಾವರಿ ತನುವಿನಲ್ಲಿಯೇ ಸೇವಂತಿ ಸಸಿಗಳು ಚಿಗುರೊಡೆದು ಹೂ ನೀಡುತ್ತಿವೆ. ಮೂರು ತಿಂಗಳ ನಂತರ ಸತತ ಒಂದು ತಿಂಗಳವರೆಗೂ ಭರ್ಜರಿ ಹೂವು ಅರಳುತ್ತವೆ

ಹೊಲದ ಬಳಿಯೇ ಮಾರಾಟ: ಕಟ್ಟಿದ ಸೇವಂತಿ ಹೂವನ್ನು ಕೃಷಿ ಭೂಮಿಯ ಬಳಿ ಹಾದು ಹೋಗಿರುವ ರಾಜ್ಯ ಹೆದ್ದಾರಿಯಲ್ಲಿ ಮಾರಾಟ ಮಾಡುತ್ತೇನೆ. ನಿತ್ಯ 100ರಿಂದ 150 ಮಾರು ಸೇವಂತಿ ಹೂವು ಮಾರಾಟವಾಗುತ್ತಿದೆ. ₹ 35ರಿಂದ ₹ 50ರ ವರೆಗೂ ಪ್ರತಿ ಮಾರು ಸೇವಂತಿಗೆ ಬಿಕರಿಯಾಗುತ್ತಿದೆ. ಸುಗಂಧರಾಜ ಪ್ರತಿ ಕೆ.ಜಿ.ಗೆ ₹ 80 ರಂತೆ ಮಾರಾಟವಾಗುತ್ತಿವೆ ಎನ್ನುತ್ತಾರೆ ರೈತ ತಿಮ್ಮಣ್ಣ.

ಹಬ್ಬಗಳಿಂದ ಬೇಡಿಕೆ ಹೆಚ್ಚು: ಶ್ರಾವಣದ ಸಂಭ್ರಮದ ಜತೆ ಸಾಲು ಸಾಲು ಹಬ್ಬಗಳಿಂದ ಬೇಡಿಕೆ ಹೆಚ್ಚಿದೆ. ವರಮಹಾಲಕ್ಷ್ಮೀ ಹಬ್ಬದ ಸಂದರ್ಭದಲ್ಲಿ ಹೂವಿಗೆ ಉತ್ತಮ ಧಾರಣೆ ಸಿಗುತ್ತದೆ. ಗೌರಿ, ಗಣೇಶ ಹಬ್ಬ, ದಸರಾ, ದೀಪಾವಳಿ ಹಬ್ಬಗಳಲ್ಲಿ ಸೇವಂತಿ ಹೂವಿಗೆ ಭಾರಿ ಬೇಡಿಕೆ ಇದೆ. ಆದ್ದರಿಂದ ಉತ್ತಮ ಲಾಭ ಗಳಿಸುವ ನಿರೀಕ್ಷೆ ಇದೆ. ಮನೆಯವರೆಲ್ಲಾ ಪುಷ್ಪ ಕೃಷಿಯಲ್ಲಿ ಪಾಲ್ಗೊಳ್ಳುವುದರಿಂದ ಉಳುಮೆ ಖರ್ಚೂ ಕಡಿಮೆ ಎನ್ನುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.