ADVERTISEMENT

ಮಗನ ಸೋಲಿಗೆ ಶಾಮನೂರು ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2019, 11:21 IST
Last Updated 13 ಆಗಸ್ಟ್ 2019, 11:21 IST
ಶಾಮನೂರು ಶಿವಶಂಕರಪ್ಪ
ಶಾಮನೂರು ಶಿವಶಂಕರಪ್ಪ   

ದಾವಣಗೆರೆ: ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ತಮ್ಮ ಮಗ ಎಸ್‌.ಎಸ್‌. ಮಲ್ಲಿಕಾರ್ಜುನ ಅವರನ್ನು ಸೋಲಿಸಿದ್ದಕ್ಕೆ ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸ್ವಕುಳಸಾಳಿ ಸಮಾಜದಿಂದ ಮಂಗಳವಾರ ಆಯೋಜಿಸಿದ್ದ ಭಗವಾನ್ ಜಿಹ್ವೇಶ್ವರ ಜಯಂತ್ಯುತ್ಸವಕ್ಕೆ ಬಂದಿದ್ದ ಅವರು ಸಮುದಾಯದವರ ಮುಂದೆ ಈ ರೀತಿ ಹೇಳಿದರು.

ಎಸ್‌.ಎಸ್‌. ಮಲ್ಲಿಕಾರ್ಜುನ ಅವರ ಅವಧಿಯಲ್ಲಿ ಸಾಕಷ್ಟು ಕೆಲಸ ಮಾಡಿಸಿದರು. ಕುಡಿಯುವ ನೀರಿಗೆ ಆದ್ಯತೆ ನೀಡಿದರು. ಕಾಂಗ್ರೆಸ್‌ ಸರ್ಕಾರದ ನಿರ್ಧಾರದಂತೆ ಆಶ್ರಯ ಮನೆ ಯೋಜನೆಯಡಿ ಎಲ್ಲರಿಗೂ ಉಚಿತವಾಗಿ ಮನೆ ನೀಡಿದರು. ನಿಮ್ಮ ಸಮಾಜವೂ ಸೇರಿದಂತೆ 17 ಸಮಾಜದವರಿಗೆ ಕೈಗೆಟುವ ದರದಲ್ಲಿ ಕೆಲವರಿಗೆ ಉಚಿತವಾಗಿ ನಿವೇಶನ ನೀಡಿದರು. ಆದರೆ ಈ ರೀತಿ ಸಹಾಯ ಮಾಡಿದವರಿಗೆ ಏನು ಗತಿಯಾಯಿತು ಎಂದು ಪ್ರಶ್ನಿಸಿದರು.

ADVERTISEMENT

‘ಮಲ್ಲಿಕಾರ್ಜುನ ಅವರ ಗತಿ ಏನಾಯಿತು ಎಂದರೆ 3,500 ಸಾವಿರ ಓಟಿನ ಅಂತರದಲ್ಲಿ ಅವರು ಸೋತು ಮನೆಯಲ್ಲಿ ಕೂರುವಂತಾಯಿತು. ನಿಮ್ಮಲ್ಲಿ ಎಷ್ಟು ಜನ ಓಟು ಹಾಕಿದ್ದೀರಿ? ಅರ್ಧಕ್ಕಿಂತ ಹೆಚ್ಚು ಜನ ಅವರಿಗೆ ಮತ ನೀಡಿಲ್ಲ. ಯಾರು ಸಹಾಯ ಮಾಡಿದ್ದಾರೋ ಆ ಸಹಾಯಕ್ಕೆ ಋಣ ತೀರಿಸುವ ಕೆಲಸ ಮಾಡಬೇಕು’ ಎಂದು ಹೇಳಿದರು.

‘ಮುಂದಿನ ದಿನಗಳಲ್ಲಿ ನಿಮ್ಮ ಸಮಾಜದ ಕೆಲಸಗಳಿಗೆ ಸಹಾಯ ಮಾಡಲು ನಾವು ಸಿದ್ಧರಿದ್ದೇವೆ. ನೀವು ನಮ್ಮವರಾಗಿರಬೇಕೆ ಹೊರತು ಬೇರೆಯವರಾಗಬಾರದು ಎಂಬುದು ನಮ್ಮ ಇಚ್ಛೆ. ನಾವು ನಿಮ್ಮ ಹತ್ತಿರ ಹಣ ಕೇಳುತ್ತೀವಾ? ಅವರ ಅವಧಿಯಲ್ಲಿ 14ಸಾವಿರ ಆಶ್ರಯ ಮನೆಗಳು ಅಲ್ಲದೇ ನಿವೇಶನ ನೀಡಿದರು. ಆದರೂ ಚುನಾವಣೆಯಲ್ಲಿ ಸೋಲಿಸಿದರು. ಮುಂದಿನ ದಿನಗಳಲ್ಲಿ ಅದು ಆಗಬಾರದು’ ಎಂದು ಹೇಳಿದರು.

‘ನಗರದಲ್ಲಿ 5 ಕಡೆ ಕಲ್ಯಾಣ ಮಂಟಪ ಕಟ್ಟಿಸಬೇಕು ಎಂಬ ಉದ್ದೇಶವಿತ್ತು. ಅದರಲ್ಲಿ ಒಂದನ್ನು ಕಟ್ಟಿದ್ದು, ಉಚಿತವಾಗಿ ನೀಡುತ್ತಿದ್ದೇವೆ. ಇನ್ನೊಂದು ಸಿದ್ಧವಿದೆ. ಇನ್ನೆರಡು ಕಲ್ಯಾಣ ಮಂಟಪಗಳನ್ನು ನಿರ್ಮಿಸಲು ಸಿದ್ಧತೆ ನಡೆಸಿದ್ದೆವು. ಆದರೆ ಅದನ್ನು ನಿಲ್ಲಿಸಿದ್ದೇವೆ. ಜನರಿಗೆ ಉಪಕಾರ ಮಾಡಿದರೆ ಪ್ರಯೋಜನವಿಲ್ಲ. ಮಾಡಿದ ಕೆಲಸಕ್ಕೆ ಉಪಕಾರ ಮಾಡದಿದ್ದರೆ ನಾವು ಏಕೆ ಮಾಡಬೇಕು’ ಎಂದು ಪ್ರಶ್ನಿಸಿದರು.

ಜನರು ಯೋಚನೆ ಮಾಡಬೇಕು. ನೀವು ಬಡವರಿದ್ದೀರಿ, ಶ್ರೀಮಂತರಾಗುವುದನ್ನು ನೋಡಿ, ಕೆಲಸ ಮಾಡಿ ಕೊಟ್ಟವರಿಗೆ ಋಣಿಯಾಗಿರಿ ಎಂದು ಸಲಹೆ ನೀಡಿದರು.

ಸ್ಮಾರ್ಟ್‌ ಸಿಟಿ ಯೋಜನೆಯಡಿ ಉತ್ತಮ ಕೆಲಸಗಳು ಆಗುತ್ತಿವೆ. ‘ಜಲಸಿರಿ’ ಯೋಜನೆಯಡಿ ನಗರಕ್ಕೆ 24 ಗಂಟೆಯೂ ನೀರು ಪೂರೈಕೆ ಮಾಡುವ ಉದ್ದೇಶದಿಂದ ಈಗಾಗಲೇ 1,100 ಕಿಮೀ ಪೈಪ್‌ಲೈನ್ ಅಳವಡಿಕೆ ಕಾರ್ಯ ನಡೆಯುತ್ತಿದೆ. ಇದು ಎಷ್ಟಿದೆ ಎಂದರೆ ಪೂನಾಕ್ಕೆ ಹೋಗಿ ಬರುವಷ್ಟು ದೂರ ಆಗುತ್ತದೆ. ಇದು ಎರಡು ವರ್ಷಗಳಲ್ಲಿ ಪೂರ್ಣಗೊಳ್ಳಲಿದ್ದು, ಆಗ ದಿನದ 24 ಗಂಟೆಯೂ ನೀರು ಪೂರೈಕೆಯಾಗುತ್ತದೆ. ಯರಗುಂಟೆ ಸೇರಿ ಇನ್ನೂ ಕೆಲವು ಮಾರ್ಗಗಳ ಕಾಮಗಾರಿ 3 ತಿಂಗಳಲ್ಲೇ ಪೂರ್ಣಗೊಳ್ಳಲಿದೆ’ ಎಂದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.