
ಕುಟುಂಬದ ಸದಸ್ಯರೊಂದಿಗೆ ಶಾಮನೂರು ಶಿವಶಂಕರಪ್ಪ
ದಾವಣಗೆರೆ: ಮಧ್ಯಮ ವರ್ಗದ, ವ್ಯಾಪಾರಿ ಕುಟುಂಬದಲ್ಲಿ ಜನಿಸಿದ ಶಾಮನೂರು ಶಿವಶಂಕರಪ್ಪ ಮುಂದೊಂದು ದಿನ ಇಡೀ ರಾಷ್ಟ್ರವೇ ತಿರುಗಿ ನೋಡುವ ರೀತಿಯಲ್ಲಿ ಬೆಳೆದು ನಿಂತ ಪರಿ ನಿಜಕ್ಕೂ ಅಚ್ಚರಿಯದ್ದು.
ಶಾಮನೂರು ಕಲ್ಲಪ್ಪ– ಸಾವಿತ್ರಮ್ಮ ದಂಪತಿಗೆ ಐವರು ಮಕ್ಕಳು. ಅವರಲ್ಲಿ ಮೊದಲನೆಯವರು ಬಸವರಾಜಪ್ಪ, ಎರಡನೆಯವರೇ ಶಾಮನೂರು ಶಿವಶಂಕರಪ್ಪ. ಶರಣಪ್ಪ, ತಿಪ್ಪಮ್ಮ, ಪಾರ್ವತಮ್ಮ ಕಿರಿಯ ಸಹೋದರ– ಸಹೋದರಿಯರು.
ಶಿವಶಂಕರಪ್ಪ ಅವರು ದಾವಣಗೆರೆಯ ಓಲ್ಡ್ ಮಿಡ್ಲ್ ಸ್ಕೂಲ್‌ನಲ್ಲಿ ಪ್ರಾಥಮಿಕ ವಿದ್ಯಾಭ್ಯಾಸ ಹಾಗೂ ಸರ್ಕಾರಿ ಹೈಸ್ಕೂಲ್‌ನಲ್ಲಿ ಇಂಟರ್ ಮೀಡಿಯೆಟ್ ಓದಿದರು. ಬಳಿಕ ವಿದ್ಯಾಭ್ಯಾಸಕ್ಕೆ ಪೂರ್ಣ ವಿರಾಮ ನೀಡಿದ ಅವರು ಕುಟುಂಬದ ಮೂಲ ವೃತ್ತಿಯಾದ ವ್ಯಾಪಾರ ಕ್ಷೇತ್ರಕ್ಕೆ ಧುಮುಕಿ ಹೊಸ ಇತಿಹಾಸವನ್ನೇ ಸೃಷ್ಟಿಸಿದರು.
ತಂದೆ ಕಲ್ಲಪ್ಪ ಹಾಗೂ ಸಹೋದರ ಬಸವರಾಜಪ್ಪ ಅವರೊಂದಿಗೆ ಕೈಜೋಡಿಸಿದ ಶಿವಶಂಕರಪ್ಪ, ಅನೇಕ ಪ್ರಯೋಗದೊಂದಿಗೆ ವ್ಯಾಪಾರಿ ಕ್ಷೇತ್ರದಲ್ಲಿ ಯಶಕಂಡರು. ಶುರುವಿನಲ್ಲಿ ರಾಗಿ ಹಾಗೂ ಅಕ್ಕಿ ವ್ಯಾಪಾರ ಶುರು ಮಾಡಿದ್ದ ಅವರು, ಹಳ್ಳಿಹಳ್ಳಿ ಸುತ್ತಾಡಿ ರಾಗಿ ಖರೀದಿಸುತ್ತಿದ್ದರು. ನಿಧಾನವಾಗಿ ವ್ಯಾಪಾರಿ ಕ್ಷೇತ್ರವನ್ನು ವಿಸ್ತರಿಸಿಕೊಂಡು, ಮೈಸೂರು, ಬೆಂಗಳೂರು, ಆಗ್ರಾ, ಕಾನ್ಪುರ ಸೇರಿ ದೊಡ್ಡದೊಡ್ಡ ನಗರಗಳನ್ನೂ ಸುತ್ತಾಡಿದರು. ಆ ಅನುಭವವನ್ನು ಬಳಸಿಕೊಂಡು ದಾವಣಗೆರೆಯಲ್ಲಿಯೇ ‘ಆಲದ ಮರ’ದ ರೀತಿಯಲ್ಲಿ ಬೆಳೆದುನಿಂತರು.
ಶಾಮನೂರು ಶಿವಶಂಕರಪ್ಪ ಅವರು ಆರಂಭದಿಂದಲೂ ವ್ಯಾಪಾರ– ವಹಿವಾಟಿನಲ್ಲಿ ದೊಡ್ಡದೊಡ್ಡ ಕನಸುಗಳನ್ನು ಕಂಡವರು. ಅದಕ್ಕಾಗಿ ಹಗಲು–ರಾತ್ರಿ ಶ್ರಮ ವಹಿಸಿದರು. ಅದಕ್ಕೆ ಪ್ರತಿಫಲವಾಗಿ ದೊಡ್ಡ ಮಟ್ಟದಲ್ಲಿ ಬೆಳೆದು ನಿಂತರು ಎಂದು ಅವರನ್ನು ಹತ್ತಿರದಿಂದ ಕಂಡವರು ನೆನಪಿಸಿಕೊಳ್ಳುತ್ತಾರೆ.
‘ಕಡ್ಲೆಬೇಳೆ, ತೊಗರಿಬೇಳೆ ವ್ಯವಹಾರ ಆರಂಭಿಸಿದೆ. ತೊಗರಿಬೇಳೆ ವ್ಯಾಪಾರದಲ್ಲಿ ಆ ಕಾಲದಲ್ಲಿ ₹ 1 ಲಕ್ಷ ಕಳೆದುಕೊಂಡೆ. ಮಂಡ್ಯ, ಮೈಸೂರಿನಿಂದ ಅಕ್ಕಿ ತರಿಸಿ ವ್ಯಾಪಾರ ಮಾಡಿದೆ. ಅದು ಕೈ ಹಿಡಿಯಿತು. ಜತೆಗೆ ಕಲ್ಲುಸಕ್ಕರೆ, ಸಕ್ಕರೆ ವ್ಯಾಪಾರ ಮಾಡುವ ಮೂಲಕ ಆ ನಷ್ಟವನ್ನು ತುಂಬಿಕೊಂಡೆ. 1962ರ ಸಮಯದಲ್ಲಿ ನಾಡಿಗೆ ಬರಗಾಲ ಬಂದಿತ್ತು. ಸರ್ಕಾರ ಸೋಜಿ, ಮೈದಾ ಎಲ್ಲ ಕೊಡುತ್ತಿತ್ತು. ಈ ಸಂದರ್ಭದಲ್ಲಿ ಶಾಮನೂರು ಸಂಗಪ್ಪ ಮತ್ತು ನಾನು ಒಟ್ಟಿಗೆ ವ್ಯವಹಾರ ಮಾಡಿದ್ದೆವು. ಮುಂದೆ ನಾವಿಬ್ಬರೂ ಪಾಲುದಾರಿಕೆಯಲ್ಲಿ ಅಕ್ಕಿ ಮಿಲ್ ಆರಂಭಿಸಿದೆವು. ಇಬ್ಬರೂ ತಲಾ ಐದೈದು ಸಾವಿರ ರೂಪಾಯಿ ಹಾಕುವುದು ಎಂದು ಒಪ್ಪಂದ ಮಾಡಿಕೊಂಡಿದ್ದೆವು. ಅದರಂತೆ ಪ್ರತಿ ಬಾರಿ ತಲಾ ₹ 5 ಸಾವಿರ ಹಾಕಿದ್ದೇ ತಲಾ ₹ 95 ಸಾವಿರ ಆಗಿತ್ತು. ಮುಂದೆ ಪಾಲುದಾರಿಕೆ ಬೇಡ ಎಂದು ನಿರ್ಧರಿಸಿದಾಗ ಇಬ್ಬರೂ ಮಿಲ್ ಬೇಕು ಎಂದು ಆಸಕ್ತಿ ವಹಿಸಿದ್ದೆವು. ಹಾಗಾಗಿ ಹರಾಜು ಕೂಗುವುದು ಅನಿವಾರ್ಯವಾಯಿತು. ಭಾರಿ ಬೆಲೆಗೆ ಅಂದರೆ ₹ 25 ಲಕ್ಷ ಕೂಗಿ ಹರಾಜಲ್ಲಿ ಪಡೆದುಕೊಂಡೆ’ ಎಂದು ಆರಂಭದ ವ್ಯವಹಾರದ ಬಗ್ಗೆ ‘ಪ್ರಜಾವಾಣಿ’ಗೆ ನೀಡಿದ್ದ ಸಂದರ್ಶನವೊಂದರಲ್ಲಿ ಶಾಮನೂರು ಶಿವಶಂಕರಪ್ಪ ಹೇಳಿಕೊಂಡಿದ್ದರು.
ಹಳೇ ದಾವಣಗೆರೆಯ ಕಾಳಿಕಾದೇವಿ ರಸ್ತೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಮೂಲ ಮನೆ ಇದೆ. ಅಲ್ಲಿಯೇ ಅವರ ಇಡೀ ಕುಟುಂಬ ಬದುಕು ಕಟ್ಟಿಕೊಂಡಿತ್ತು. ಚೌಕಿಪೇಟೆಯ ಬಕ್ಕೇಶ್ವರ ದೇವಸ್ಥಾನದ ಬಳಿ ಅವರ ‘ಕಲ್ಲೇಶ್ವರ ಟ್ರೇಡರ್ಸ್’ ಅಂಗಡಿ ಇದೆ. ಅದನ್ನು ‘ಅದೃಷ್ಟದ ಅಂಗಡಿ’ ಎಂದೇ ಶಾಮನೂರು ಶಿವಶಂಕರಪ್ಪ ಅವರು ಭಾವನಾತ್ಮಕ ಬೆಸುಗೆ ಹೊಂದಿದ್ದರು. ದಾವಣಗೆರೆಯಲ್ಲಿ ಅವರು ಇದ್ದಾರೆಂದರೆ ನಿತ್ಯವೂ ಅಂಗಡಿಗೆ ಹೋಗಿ ಲೆಕ್ಕಪತ್ರಗಳನ್ನು ಪರಿಶೀಲಿಸುವುದನ್ನು ತಪ್ಪಿಸುತ್ತಿರಲಿಲ್ಲ. 1973ರಲ್ಲಿ ನಗರಸಭೆ ಅಧ್ಯಕ್ಷರಾದ ಬಳಿಕ ಹಳೇ ಮನೆಯಿಂದ ವಾಟರ್ ಟ್ಯಾಂಕ್ ಪಾರ್ಕ್ ಬಳಿ ಇರುವ (ಗುಂಡಿ ಸರ್ಕಲ್) ಹೊಸ ಮನೆಗೆ ಸ್ಥಳಾಂತರಗೊಂಡಿದ್ದರು.
ಜನತಾ ಬಜಾರ್ ನಿರ್ದೇಶಕರಾಗುವ ಮೂಲಕ ಮೊದಲ ಬಾರಿ ರಾಜಕೀಯ ಕ್ಷೇತ್ರದ ಬಗ್ಗೆ ಶಾಮನೂರು ಶಿವಶಂಕರಪ್ಪ ಆಸಕ್ತಿ ವಹಿಸಿದರು. ಬಳಿಕ ಅರ್ಬನ್ ಕೋ ಆಪರೇಟಿವ್ ಸೊಸೈಟಿ ನಿರ್ದೇಶಕರಾದರು. ಚಿಕ್ಕಪ್ಪ ಶಾಮನೂರು ಶಿವಣ್ಣ ಅವರ ಒತ್ತಾಯದಿಂದಾಗಿ 1969ರಲ್ಲಿ ನಗರಸಭೆ ಸದಸ್ಯರಾದರು. 1971ರಿಂದ 73ರ ವರೆಗೆ ನಗರಸಭೆ ಅಧ್ಯಕ್ಷರಾದರು.
1994ರಲ್ಲಿ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಶಾಮನೂರು ಶಿವಶಂಕರಪ್ಪ, ಬಳಿಕ ಹಿಂದೆ ತಿರುಗಿ ನೋಡುವಂತಹ ಪ್ರಸಂಗವೇ ಉದ್ಭವಿಸಲಿಲ್ಲ. ದಾವಣಗೆರೆ ದಕ್ಷಿಣ ಕೇತ್ರದಿಂದ ಮತ್ತೆಮತ್ತೆ ಆಯ್ಕೆಯಾಗುತ್ತಲೇ ಬಂದರು.
‘ವ್ಯಾಪಾರ ವಹಿವಾಟು ನನ್ನ ಇಷ್ಟದ ಕ್ಷೇತ್ರ. ರಾಜಕೀಯಕ್ಕೆ ಆಕಸ್ಮಿಕವಾಗಿ ಬಂದೆ. ನನ್ನ ಕಾಕನ (ಚಿಕ್ಕಪ್ಪ) ಒತ್ತಾಯವೇ ಇದಕ್ಕೆ ಕಾರಣ. ರಾಜಕೀಯಕ್ಕೆ ಬಂದ ಬಳಿಕವೂ ಶಾಸಕ, ಸಂಸದ ಆಗಬೇಕು ಎಂಬ ಕನಸನ್ನೇನೂ ಇಟ್ಟುಕೊಂಡವನಲ್ಲ. ನಗರಸಭೆ ವ್ಯಾಪ್ತಿಯ ರಾಜಕಾರಣ ಸಾಕು ಎಂದು ಯೋಚನೆ ಮಾಡುತ್ತಿದ್ದೆ. ಆದರೂ ಸಂಸದನಾದೆ, ಶಾಸಕನಾದೆ, ಸಚಿವನಾದೆ...’ ಎಂದು ಸಂದರ್ಶನದಲ್ಲಿ ಹೇಳಿಕೊಂಡಿದ್ದರು.
ಮದುವೆ ವಿಚಾರಕ್ಕೆ ಬೈದಿದ್ದ ಕಾಕಾ..
‘1956ರಲ್ಲಿ ಹುಡುಗಿ ನೋಡಲು ಎಂದು ಚನ್ನಗಿರಿಯ ವಡ್ನಾಳ್‌ಗೆ ಹೋದೆವು. ಹುಡುಗಿ ನೋಡಿ ಒಪ್ಪಿದೆ. ಬಳಿಕ ನಿಶ್ಚಯವಾಯಿತು. ಹುಡುಗಿ ಕಡ್ಡಿಯಂತೆ ತೆಳ್ಳಗೆ ಇದ್ದಳು. ಆಮೇಲೆ ಹುಡುಗಿ ಬೇಡ ಎಂದೆ. ಏನು ಹುಡುಗಾಟ ಆಡ್ತೀಯಾ ಎಂದು ಕಾಕ (ಚಿಕ್ಕಪ್ಪ) ಶಾಮನೂರು ಶಿವಣ್ಣ ಅವರು ಬೈದರು. ಕೊನೆಗೆ ಒಪ್ಪಿದೆ. ಆಗ ಚೌಟ್ರಿಯಲ್ಲಿ ಮದುವೆಯಾಗುವುದು ಅಂದರೆ ಅದಕ್ಕೆ ಗೌರವ ಕಡಿಮೆ. ಮನೆಯಲ್ಲೇ ಚಪ್ಪರ ಹಾಕಿ ಮದುವೆಯಾಗಬೇಕು. ಮೆರವಣಿಗೆ ಮಾಡಬೇಕು ಎಂಬುದೆಲ್ಲ ಆಗಿನ ರಿವಾಜುಗಳಾಗಿದ್ದವು. ಮೆರವಣಿಗೆ ವೈಭವದಿಂದ ನಡೆದಿತ್ತು. ಮದುವೆ ಮಾತ್ರ ಆರ್.ಎಚ್. ಚೌಟ್ರಿಯಲ್ಲಿ ನಡೆದಿತ್ತು’ ಎಂದು ಪಾರ್ವತಮ್ಮ ಅವರನ್ನು ಮದುವೆಯಾದ ಸಂದರ್ಭವನ್ನು ಶಿವಶಂಕರಪ್ಪ ಅವರು ಹೇಳಿದ್ದರು.
ತುಂಬು ಕುಟುಂಬ
ಶಾಮನೂರು ಶಿವಶಂಕರಪ್ಪ – ಪಾರ್ವತಮ್ಮ ದಂಪತಿಯದ್ದು ತುಂಬು ಕುಟುಂಬ. ಈ ದಂಪತಿಗೆ ಮೂವರು ಪುತ್ರರು ಹಾಗೂ ನಾಲ್ವರು ಪುತ್ರಿಯರು. ಮೂವರು ಪುತ್ರರ ಪೈಕಿ ಹಿರಿಯರಾದ ಎಸ್.ಎಸ್. ಬಕ್ಕೇಶ್ ಹಾಗೂ ಎಸ್.ಗಣೇಶ್ ಅವರು ವ್ಯಾಪಾರ ಉದ್ದಿಮೆಯಲ್ಲಿ ತೊಡಗಿದ್ದಾರೆ. ಕಿರಿಯರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಉದ್ಯಮದ ಜೊತೆಗೆ ರಾಜಕೀಯದಲ್ಲೂ ಛಾಪು ಮೂಡಿಸುತ್ತಿದ್ದಾರೆ. ಡಾ.ಮಂಜುಳಾ ಶಿವಶಂಕರ್ ಡಾ.ಶೈಲಾ ಭಟ್ಟಾಚಾರ್ಯ ಸುಧಾ ರಾಜೇಂದ್ರ ಪಾಟೀಲ್ ಮೀನಾ ಶರಣ ಪಾಟೀಲ್ ಇವರ ಹೆಣ್ಣು ಮಕ್ಕಳು. ಪ್ರೀತಿ ಬಕ್ಕೇಶ್ ರೇಖಾ ಗಣೇಶ್ ಡಾ.ಪ್ರಭಾ ಮಲ್ಲಿಕಾರ್ಜುನ್ ಸೊಸೆಯಂದಿರು. ಕಿರಿಯ ಸೊಸೆ ಡಾ.ಪ್ರಭಾ ದಾವಣಗೆರೆ ಕ್ಷೇತ್ರದ ಸಂಸದೆ.
ಯೌವ್ವನದ ದಿನಗಳಲ್ಲಿ ಶಾಮನೂರು ಶಿವಶಂಕರಪ್ಪ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.