
ದಾವಣಗೆರೆ: ಶಾಮನೂರು ಶಿವಶಂಕರಪ್ಪ ಅವರು ತಮ್ಮ ಜೊತೆಗೆ ಎಲ್ಲ ಸಮುದಾಯಗಳನ್ನು ಬೆಳೆಸಿದರು. ಸಾವಿರಾರು ಜನರಿಗೆ ಉದ್ಯೋಗ ನೀಡಿ ಬದುಕು ಕಟ್ಟಿಕೊಳ್ಳಲು ನೆರವಾದರು ಎಂದು ಪದ್ಮಸಾಲಿ ಮಹಾಸಂಸ್ಥಾನ ಪೀಠದ ಪ್ರಭುಲಿಂಗ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿನ ತೊಗಟವೀರ ಕಲ್ಯಾಣ ಮಂಟಪದಲ್ಲಿ ಜಿಲ್ಲಾ ನೇಕಾರ ಸಮುದಾಯಗಳ ಒಕ್ಕೂಟ, ಜಿಲ್ಲಾ ನೇಕಾರ ವೇದಿಕೆ ಹಾಗೂ ನೇಕಾರ ಒಕ್ಕೂಟದ ಮಹಿಳಾ ವಿಭಾಗದ ವತಿಯಿಂದ ಶಾಮನೂರು ಶಿವಶಂಕರಪ್ಪ ಅವರಿಗೆ ಭಾನುವಾರ ಹಮ್ಮಿಕೊಂಡಿದ್ದ ನುಡಿ ನಮನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ಶಾಮನೂರು ಶಿವಶಂಕರಪ್ಪ ಅವರು ಸರ್ವ ಜನಾಂಗವನ್ನು ಪ್ರೀತಿಸುತ್ತಿದ್ದರು. ಎಲ್ಲರನ್ನೂ ಗೌರವದಿಂದ ಕಾಣುತ್ತಿದ್ದರು. ನೇಕಾರ ಸಮುದಾಯ ಜಾಗೃತಗೊಳ್ಳಲು, ಸಂಘಟಿತರಾಗಲು ಅವರ ಕೊಡುಗೆ ಅಪಾರ. ದಾವಣಗೆರೆ ಅಭಿವೃದ್ಧಿಯಲ್ಲಿ ಅವರ ಪಾತ್ರ ದೊಡ್ಡದು’ ಎಂದು ಕೊಂಡಾಡಿದರು.
‘ಪಾಲಕರು ಮಕ್ಕಳಿಗೆ ವಿದ್ಯೆಯ ಜೊತೆಗೆ ಸಂಸ್ಕಾರವನ್ನು ಕಲಿಸಬೇಕು. ಆಗ ಮಕ್ಕಳು ದೇಶದ ಆಸ್ತಿಯಾಗುತ್ತಾರೆ. ಶಿಕ್ಷಣಕ್ಕೆ ಶಾಮನೂರು ಶಿವಶಂಕರಪ್ಪ ಒತ್ತು ನೀಡಿದ್ದರು. ಅವರೊಂದಿಗೆ 45 ವರ್ಷಗಳಿಂದ ಒಡನಾಟವಿತ್ತು’ ಎಂದು ನೆನಪಿಸಿಕೊಂಡರು.
‘ಶಿವಶಂಕರಪ್ಪ ಅವರು ಅಪಾರ ದೈವಭಕ್ತರಾಗಿದ್ದರು. ನಿತ್ಯ ದೇಗುಲ ದರ್ಶನ ಪಡೆಯುವುದನ್ನು ಅವರು ಮರೆಯುತ್ತಿರಲಿಲ್ಲ. ದೈವ ಭಕ್ತಿ ಹಾಗೂ ಸರಳ ಜೀವನದಿಂದಾಗಿ ಅವರು 95 ವರ್ಷ ಬದುಕಲು ಸಾಧ್ಯವಾಯಿತು’ ಎಂದು ಕುರುಹಿನ ಶೆಟ್ಟಿ ಸಮಾಜದ ಮುಖಂಡ ಆರ್.ಎಚ್.ನಾಗಭೂಷಣ್ ಅಭಿಪ್ರಾಯಪಟ್ಟರು.
ತೊಗಟವೀರ ಸಮಾಜದ ಮಾಜಿ ಅಧ್ಯಕ್ಷ ಡಿ. ಬಸವರಾಜ್, ‘ಧೂಡಾ’ ಆಯುಕ್ತ ಹುಲ್ಮನಿ ತಿಮ್ಮಣ್ಣ , ಜಿಲ್ಲಾ ನೇಕಾರ ಒಕ್ಕೂಟದ ಅಧ್ಯಕ್ಷ ಶ್ರೀಕಾಂತ್ ಕಾಕಿ, ಜಿಲ್ಲಾ ನೇಕಾರ ವೇದಿಕೆ ಅಧ್ಯಕ್ಷ ಸತ್ಯನಾರಾಯಣ, ಬಡಾವಣೆ ಠಾಣೆಯ ಸಿಪಿಐ ಗಾಯತ್ರಿ, ಮಹಿಳಾ ಒಕ್ಕೂಟದ ಅಧ್ಯಕ್ಷೆ ಸಾಕಮ್ಮ, ಸ್ವಕುಳ ಸಾಲಿ ರಾಜ್ಯ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಧರ್ಮರಾಜ್ ಏಕಬೋಟೆ, ಪದ್ಮಸಾಲಿ ಸಮಾಜದ ಬೊಮ್ಮ ತಿಪ್ಪೇಸ್ವಾಮಿ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.