ADVERTISEMENT

ಡಿಸಿಸಿ ಬ್ಯಾಂಕ್‌ ಅಧ್ಯಕ್ಷರಾಗಿ ಷಣ್ಮುಖಪ್ಪ ಅವಿರೋಧ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2018, 15:42 IST
Last Updated 6 ಡಿಸೆಂಬರ್ 2018, 15:42 IST
ಜೆ.ಆರ್‌. ಶಣ್ಮುಖಪ್ಪ
ಜೆ.ಆರ್‌. ಶಣ್ಮುಖಪ್ಪ   

ದಾವಣಗೆರೆ: ಇಲ್ಲಿನ ಜಿಲ್ಲಾ ಕೇಂದ್ರ ಸಹಕಾರ (ಡಿ.ಸಿ.ಸಿ) ಬ್ಯಾಂಕ್‌ನ ನೂತನ ಅಧ್ಯಕ್ಷರಾಗಿ ಜೆ.ಆರ್‌. ಷಣ್ಮುಖಪ್ಪ ಹಾಗೂ ಉಪಾಧ್ಯಕ್ಷರಾಗಿ ಬಿ.ಕೆ. ಪ್ರಕಾಶ್‌ ಅವರು ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಂಡರು.

ಬ್ಯಾಂಕಿನ ಸಭಾಂಗಣದಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿಬೆಳಿಗ್ಗೆ 11ಕ್ಕೆ ನಾಮಪತ್ರ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿತು.

‘ಬಿ’ ವರ್ಗವಾದ ಟಿ.ಎ.ಪಿ.ಎಂ.ಎಸ್‌. ಕ್ಷೇತ್ರದಿಂದ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಜೆ.ಆರ್‌. ಷಣ್ಮುಖಪ್ಪ ಹಾಗೂ ‘ಎ’ ವರ್ಗದ ಜಗಳೂರು ತಾಲ್ಲೂಕು ಕ್ಷೇತ್ರದಿಂದ ಆಯ್ಕೆಯಾಗಿದ್ದ ಜೆ.ಎಸ್‌. ವೇಣುಗೋಪಾಲ ರೆಡ್ಡಿ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು. ‘ಎ’ ವರ್ಗದ ಹರಪನಹಳ್ಳಿ ತಾಲ್ಲೂಕು ಕ್ಷೇತ್ರದಿಂದ ಆಯ್ಕೆಯಾಗಿದ್ದ ಬಿ.ಕೆ. ಪ್ರಕಾಶ್‌ ಅವರೊಬ್ಬರೇ ಉಪಾಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.

ADVERTISEMENT

ಚುನಾವಣಾಧಿಕಾರಿಯಾಗಿದ್ದ ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ ಚುನಾವಣಾ ಸಭೆ ಆರಂಭಗೊಳ್ಳುತ್ತಿದ್ದಂತೆ ವೇಣುಗೋಪಾಲ ರೆಡ್ಡಿ ತಮ್ಮ ಉಮೇದುವಾರಿಕೆಯನ್ನು ಹಿಂದಕ್ಕೆ ಪಡೆದರು. ಹೀಗಾಗಿ ಷಣ್ಮುಖಪ್ಪ ಹಾಗೂ ಪ್ರಕಾಶ್‌ ಅವರು ಕ್ರಮವಾಗಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಾಗಿ ಆಯ್ಕೆಗೊಂಡರು ಎಂದು ಕುಮಾರಸ್ವಾಮಿ ಘೋಷಿಸಿದರು.

ಮುಂದಿನ ಐದು ವರ್ಷಗಳ ಅವಧಿಗೆ ನೂತನ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಿತು. ಸಭೆಯಲ್ಲಿ ಹತ್ತು ನಿರ್ದೇಶಕರು ಹಾಗೂ ಸಹಕಾರ ಸೊಸೈಟಿಗಳ ಜಿಲ್ಲಾ ನೋಂದಣಾಧಿಕಾರಿ (ಡಿ.ಆರ್‌.ಸಿ.ಎಸ್‌), ಅಪೆಕ್ಸ್‌ ಬ್ಯಾಂಕ್‌ನಿಂದ ನಾಮನಿರ್ದೇಶಿತ ಸದಸ್ಯ ಹಾಗೂ ಸರ್ಕಾರದಿಂದ ನಾಮನಿರ್ದೇಶನಗೊಂಡ ನಿರ್ದೇಶಕರು ಸೇರಿ ಒಟ್ಟು 13 ಮತದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.