ADVERTISEMENT

ದಾವಣಗೆರೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಶಾಂತಕುಮಾರಿ ಆಯ್ಕೆ

​ಪ್ರಜಾವಾಣಿ ವಾರ್ತೆ
Published 23 ಡಿಸೆಂಬರ್ 2020, 12:13 IST
Last Updated 23 ಡಿಸೆಂಬರ್ 2020, 12:13 IST
ಕೆ.ವಿ. ಶಾಂತಕುಮಾರಿ
ಕೆ.ವಿ. ಶಾಂತಕುಮಾರಿ   

ದಾವಣಗೆರೆ: ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಜಗಳೂರು ತಾಲ್ಲೂಕು ದೊಣೆಹಳ್ಳಿ ಕ್ಷೇತ್ರದ ಸದಸ್ಯೆ ಕೆ.ವಿ. ಶಾಂತಕುಮಾರಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಬೆಂಗಳೂರು ಪ್ರಾದೇಶಿಕ ಆಯುಕ್ತ ನವೀನ್‌ರಾಜ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು.

ಶಾಂತಕುಮಾರಿ ಒಬ್ಬರೇ 2 ನಾಮಪತ್ರ ಸಲ್ಲಿಸಿದ್ದರು. ಮಂಜುಳಾ ಟಿ.ವಿ. ರಾಜು ಮತ್ತು ಹೇಮಾವತಿ ಭೀಮಣ್ಣ ಸೂಚಕರಾಗಿದ್ದರು. ಒಟ್ಟು 29 ಸದಸ್ಯರಲ್ಲಿ 19 ಮಂದಿ ಭಾಗವಹಿಸಿದ್ದರು. ಸಾಮಾನ್ಯ ಮಹಿಳೆ ವರ್ಗಕ್ಕೆ ಅಧ್ಯಕ್ಷ ಸ್ಥಾನ ಮೀಸಲಾಗಿತ್ತು.

ADVERTISEMENT

ಕುಡಿಯುವ ನೀರು, ಆರೋಗ್ಯ, ಶಿಕ್ಷಣ, ಅಭಿವೃದ್ಧಿಗೆ ಆದ್ಯತೆ

ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬಹಳ ಇದೆ. ಅವುಗಳ ಪರಿಹಾರಕ್ಕೆ ಆದ್ಯತೆ ನೀಡಲಾಗುವುದು. ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಸಿಗುವಂತಾಗಬೇಕು. ಕೊರೊನಾ ಬಂದಿರುವ ಈ ಕಾಲದಲ್ಲಿ ಆರೋಗ್ಯ ಕಾಪಾಡಿಕೊಳ್ಳಲು ಜಾಗೃತಿ ಮೂಡಿಸಲಾಗುವುದು’ ಎಂದು ನೂತನ ಅಧ್ಯಕ್ಷೆ ಶಾಂತಕುಮಾರಿ ಪ್ರತಿಕ್ರಿಯಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿದ್ದ ದೀಪಾ ಜಗದೀಶ ಅವರು ರಾಜೀನಾಮೆ ಸಲ್ಲಿಸಿದ ಕಾರಣ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್‌ ಪ್ರಭಾರ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.

ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ‍ಪೂಜಾರ ವೀರಮಲ್ಲಪ್ಪ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ್‌ ಅವರೂ ಇದ್ದರು.

ರಾಜಕೀಯ ಹಿನ್ನೆಲೆ

ಶಾಂತಕುಮಾರಿ ಅವರು ಮೊದಲ ಬಾರಿಗೆ ಚುನಾವಣೆಗೆ ಸ್ಪರ್ಧಿಸಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರೂ ಅವರ ಕುಟುಂಬ ಮಾತ್ರ ರಾಜಕೀಯ ಹಿನ್ನೆಲೆಯನ್ನು ಹೊಂದಿದೆ. ತಾಯಿ ಮನೆ ಹೊಳಲ್ಕೆರೆಯಾಗಿದ್ದು, ಅಲ್ಲಿ ಶಾಸಕರಾಗಿದ್ದ ಸಿದ್ದರಾಮಪ್ಪ ಮತ್ತು ಉಮಾಪತಿ ಇದೇ ಕುಟುಂಬದವರು. ಅತ್ತೆ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು. ಪತಿ ಶಶಿಧರ್‌ ಜಿ.ಆರ್‌. ಅವರು ಬೀಜ ನಿಗಮದಲ್ಲಿ ಸಹಾಯಕ ನಿರ್ದೇಶಕರಾಗಿದ್ದಾರೆ. ಇಬ್ಬರು ಹೆಣ್ಣುಮಕ್ಕಳು ಎಂಜಿನಿಯರಿಂಗ್‌ ಮುಗಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.