ADVERTISEMENT

ದುಡಿಮೆಯ ಮಹತ್ವ ಸಾರಿದವರು ಶರಣರು: ಸಿ.ಸೋಮಶೇಖರ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 17:22 IST
Last Updated 20 ಜನವರಿ 2026, 17:22 IST
   

ದಾವಣಗೆರೆ: ಮೂಢನಂಬಿಕೆಗಳನ್ನು ವಿರೋಧಿಸಿದ ಶಿವಶರಣರು, ಸಮಾನತೆಯನ್ನು ಪ್ರತಿಪಾದಿಸಿದರು. ಸಮಾಜದ ಕೆಳಸ್ತರದ ಜನರಿಗೆ ಆತ್ಮವಿಶ್ವಾಸ ತುಂಬಿ, ಮಹಿಳಾ ಸ್ವಾತಂತ್ರ್ಯ ಪ್ರತಿಪಾದಿಸಿದರು. ಕಾಯಕ ಸಿದ್ಧಾಂತದ ಮೂಲಕ ದುಡಿಮೆಯ ಮಹತ್ವ ಸಾರಿದರು ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಸಿ. ಸೋಮಶೇಖರ ಅಭಿಪ್ರಾಯಪಟ್ಟರು.

ಇಲ್ಲಿನ ಹದಡಿ ರಸ್ತೆಯ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಜಿಲ್ಲಾ ಕದಳಿ ಮಹಿಳಾ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಕದಳಿ ಮಹಿಳಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಶರಣರು ಜಾತ್ಯತೀತ ಪರಿಕಲ್ಪನೆಯನ್ನು ಸಮಾಜದ ಮುಂದಿಟ್ಟರು. ಅವರ ಚಿಂತನೆಗಳು ಅಲೌಕಿಕವಾಗಿದ್ದವು. ವಿಚಾರಗಳನ್ನು ಬಿತ್ತುವ ಮೂಲಕ ಜನರ ಬದುಕಿನಲ್ಲಿ ಬದಲಾವಣೆ ತಂದರು. ಸಮಾಜದಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡಿದರು’ ಎಂದು ಹೇಳಿದರು.

ADVERTISEMENT

ಜಿಲ್ಲಾ ಕದಳಿ ಮಹಿಳಾ ವೇದಿಕೆ ಅಧ್ಯಕ್ಷೆ ಮಮತಾ ನಾಗರಾಜ್, ರಾಜ್ಯ ಉಪ ಸಂಚಾಲಕಿ ಪ್ರಮೀಳಾ ನಟರಾಜ್ ಮಾತನಾಡಿದರು. ನಿವೃತ್ತ ಪ್ರಾಂಶುಪಾಲೆ ಪ್ರೊ.ಟಿ. ನೀಲಾಂಬಿಕೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಶರಣ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಕೆ.ಎಂ. ವೀರೇಶ್, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಕದಳಿ ಮಹಿಳಾ ವೇದಿಕೆ ಗೌರವ ಸಲಹೆಗಾರರಾದ ಯಶಾ ದಿನೇಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಬಿ. ಪರಮೇಶ್ವರಪ್ಪ ಹಾಜರಿದ್ದರು.

ಶಿವಶರಣರು ಸಮಾನತೆ, ಕಾಯಕ ತತ್ವಗಳಂತಹ ಉನ್ನತ ವಿಚಾರಗಳನ್ನು ಬೋಧಿಸಿದರು. ಜಾತಿ, ಧರ್ಮ, ವರ್ಗ, ಲಿಂಗ ಭೇದವಿಲ್ಲದ ಸಮಾಜ ನಿರ್ಮಿಸಲು ಪ್ರಯತ್ನಿಸಿದರು.
-ಡಾ.ಪ್ರಭಾ ಮಲ್ಲಿಕಾರ್ಜುನ್‌, ಸಂಸದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.