ADVERTISEMENT

ಕನ್ನಡ ಸಾಹಿತ್ಯದಲ್ಲಿ ರಂಗನಾಥ್‌ ಚಿರಸ್ಥಾಯಿ: ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ

ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2024, 13:37 IST
Last Updated 5 ಸೆಪ್ಟೆಂಬರ್ 2024, 13:37 IST
ದಾವಣಗೆರೆಯ ಶಾಮನೂರು ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಪ್ರೊ.ರಂಗನಾಥ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ
ದಾವಣಗೆರೆಯ ಶಾಮನೂರು ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಪ್ರೊ.ರಂಗನಾಥ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು –ಪ್ರಜಾವಾಣಿ ಚಿತ್ರ   

ದಾವಣಗೆರೆ: ಕೃತಿ ರಚನೆ, ಅನುವಾದ, ಕನ್ನಡಪರ ಚಟುವಟಿಕೆಯಲ್ಲಿ ಅವಿರತವಾಗಿ ತೊಡಗಿಕೊಂಡಿದ್ದ ಪ್ರೊ.ಎಸ್.ಬಿ.ರಂಗನಾಥ್, ಕನ್ನಡ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿ ಉಳಿಯಬೇಕಿದೆ. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಗಮನ ಹರಿಸುವ ಅಗತ್ಯವಿದೆ ಎಂದು ಸಿರಿಗೆರೆಯ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಲಹೆ ನೀಡಿದರು.

ಇಲ್ಲಿನ ಹದಡಿ ರಸ್ತೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಪ್ರೊ.ಎಸ್.ಬಿ.ರಂಗನಾಥ್ ಅವರಿಗೆ ಗುರುವಾರ ಏರ್ಪಡಿಸಿದ್ದ ‘ನುಡಿ ನಮನ’ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ರಂಗನಾಥ್ ಸಲ್ಲಿಸಿದ ಸೇವೆ ಅನನ್ಯ. ಕನ್ನಡ ಭವನ ನಿರ್ಮಾಣದಲ್ಲಿ ಅವರ ಶ್ರಮವಿದೆ. ನಾಡು–ನುಡಿಯ ಸೇವೆಗೆ ಸಂಪೂರ್ಣವಾಗಿ ಅರ್ಪಿಸಿಕೊಂಡಿದ್ದರು. ಅವರ ಹೆಸರು ಕಾಯಂ ಆಗಿ ಉಳಿಸುವ ಕೆಲಸ ಆಗಬೇಕಿದೆ’ ಎಂದು ಹೇಳಿದರು.

ADVERTISEMENT

‘ಶಿಕ್ಷಕರಾಗಿ ವೃತ್ತಿ ಬದುಕು ಆರಂಭಿಸಿದ ರಂಗನಾಥ್‌, ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಏರಿದರು. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಜೊತೆಗೆ ಉತ್ತಮ ಒಡನಾಟ ಇಟ್ಟುಕೊಂಡಿದ್ದರು. ಕೈಗೆತ್ತಿಕೊಂಡ ಕಾರ್ಯವನ್ನು ಪಟ್ಟುಬಿಡದೇ ಮುಗಿಸುತ್ತಿದ್ದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ತರಳಬಾಳು ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಚ್.ವಿ.ವಾಮದೇವಪ್ಪ, ‘ಎಸ್.ಬಿ.ರಂಗನಾಥ್ 60 ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸರಳ ಜೀವಿ, ಮಿತ ಭಾಷಿಕರಾಗಿದ್ದರು. ಬಡತನದಲ್ಲಿ ಶಿಕ್ಷಣ ಪೂರೈಸಿದರು. ಮನೆ ಪಾಠ ಮಾಡಿ ದುಡಿಯುತ್ತಾ ಕಾಲೇಜು ಶಿಕ್ಷಣ ಪಡೆದರು’ ಎಂದು ನೆನಪಿಸಿಕೊಂಡರು.

‘ಗ್ರಾಮೀಣ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆ ಕಟ್ಟುವಲ್ಲಿ ರಂಗನಾಥ್ ಪಾತ್ರ ಪ್ರಮುಖವಾಗಿತ್ತು. ಬಹುಮುಖ ವ್ಯಕ್ತಿತ್ವ ಹೊಂದಿದ್ದ ಅವರು, ಕ್ರೀಡಾಪಟು, ಪತ್ರಕರ್ತ, ಸಾಹಿತಿಯಾಗಿ ಸೇವೆ ಸಲ್ಲಿಸಿದರು. ‘ಪ್ರಜಾವಾಣಿ’ ಸೇರಿ ಅನೇಕ ಪತ್ರಿಕೆಯಲ್ಲಿ ಇವರ ಲೇಖನ ಪ್ರಕಟವಾಗಿವೆ. ಅವಿಭಜಿತ ಚಿತ್ರದುರ್ಗ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು’ ಎಂದು ಹೇಳಿದರು.

ನಿವೃತ್ತ ಪ್ರಾಂಶುಪಾಲ ನಾ.ಲೋಕೇಶ್ ಒಡೆಯರ್, ‘ತಾಳ್ಮೆ, ಶಿಸ್ತು ಹಾಗೂ ದೃಢ ನಿರ್ಧಾರಕ್ಕೆ ಹೆಸರಾಗಿದ್ದವರು ರಂಗನಾಥ್. ಶಶಿ ತರೂರ್ ಅವರ ಕೃತಿಯ ಅನುವಾದ ‘ಕಗ್ಗತ್ತಲೆಯ ಕಾಲ’ವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಿಸಿದೆ. ಧಾರ್ಮಿಕ, ಶೈಕ್ಷಣಿಕ ಸಂಸ್ಥೆ ಯಲ್ಲಿ ಅಗತ್ಯವಾಗಿ ಬೇಕಾದ ಸಮರ್ಪಣಾ ಮನೋಭಾವ ಅವರಲ್ಲಿತ್ತು’ ಎಂದು ಸ್ಮರಿಸಿದರು.

Quote - ರಂಗನಾಥ್ ಆದರ್ಶ ಶಿಕ್ಷಕರಾಗಿದ್ದರು. ಹಲವು ಇಂಗ್ಲಿಷ್ ಕೃತಿಗಳನ್ನು ಅನುವಾದ ಮಾಡಿದ್ದಾರೆ. ಕನ್ನಡ ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅನನ್ಯ. ಬಿ.ರಾಜಶೇಖರಪ್ಪ ಇತಿಹಾಸ ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.