
ಕತ್ತಿಗೆ (ಹೊನ್ನಾಳಿ): ತಾಲ್ಲೂಕಿನ ಕತ್ತಿಗೆ ಗ್ರಾಮದಲ್ಲಿ ಬುಧವಾರ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಸಿದ್ದರಾಮೇಶ್ವರರ ಭಾವಚಿತ್ರಕ್ಕೆ ಗ್ರಾಮಸ್ಥರು ಹಾಗೂ ಮಹಿಳೆಯರು ಪುಷ್ಪನಮನ ಸಲ್ಲಿಸಿದರು. ಯುವಕರು ಸಿದ್ಧರಾಮೇಶ್ವರರ ಭಾವಚಿತ್ರವನ್ನು ಎತ್ತಿನ ಬಂಡಿಯಲ್ಲಿಟ್ಟು ಬಲೂನ್ ಹಾಗೂ ಹೂವುಗಳಿಂದ ಶೃಂಗರಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿದರು.
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಸಿ. ಜಯಪ್ಪ ಮಾತನಾಡಿ, ‘ಬಸವಣ್ಣನವರ ಸಮಕಾಲೀನರಾದ ಸಿದ್ದರಾಮೇಶ್ವರರು ಅನುಭವ ಮಂಟಪದ ಪ್ರಮುಖ ಶರಣರಲ್ಲಿ ಒಬ್ಬರಾಗಿದ್ದು, ಸಮಾಜ ಸೇವೆಯೇ ನಿಜವಾದ ಭಕ್ತಿ ಎಂದು ನಂಬಿದ್ದರು’ ಎಂದು ಹೇಳಿದರು.
‘ಜನರಿಗಾಗಿ ಕೆರೆಗಳನ್ನು ಕಟ್ಟಿಸುವ ಮೂಲಕ ನೀರಿನ ಸಮಸ್ಯೆಗೆ ಪರಿಹಾರ ನೀಡಿದ್ದರು. ಕಾಯಕವೇ ಕೈಲಾಸ ಎಂಬ ತತ್ವವನ್ನು ಪಾಲಿಸುವ ಮೂಲಕ ಅನೇಕ ವಚನಗಳನ್ನು ರಚಿಸಿದ್ದಾರೆ. ಅವರ ಆದರ್ಶಗಳನ್ನು ನಾವೆಲ್ಲರೂ ಅನುಸರಿಸೋಣ’ ಎಂದರು.
ಆರೋಗ್ಯ ಉಚಿತ ಶಿಬಿರ: ಶ್ರೀ ಶಿವಯೋಗಿ ಸಿದ್ದರಾಮೇಶ್ವರ ಸಮಿತಿ ವತಿಯಿಂದ ಶಿವಮೊಗ್ಗದ ಸುಬ್ಬಯ್ಯ ವೈದ್ಯಕೀಯ ಬೋಧನಾ ಆಸ್ಪತ್ರೆಯ ವೈದ್ಯರಿಂದ ಆರೋಗ್ಯ ತಪಾಸಣಾ ಉಚಿತ ಶಿಬಿರವನ್ನು ಏರ್ಪಡಿಸಲಾಗಿತ್ತು.
ಶಿಬಿರದಲ್ಲಿ ಗ್ರಾಮದ ನೂರಾರು ಜನರು ಮಧುಮೇಹ, ರಕ್ತದೊತ್ತಡ, ಹೃದ್ರೋಗ, ಕಣ್ಣು, ಕಿವಿ, ಮೂಗು, ಗಂಟಲು, ಚರ್ಮರೋಗ ಸೇರಿದಂತೆ ಅನೇಕ ರೋಗಗಳಿಗೆ ಉಚಿತ ಪರೀಕ್ಷೆಗೆ ಒಳಗಾದರು.
ಸುಬ್ಬಯ್ಯ ಆಸ್ಪತ್ರೆಯ ಮೂಳೆ ತಜ್ಞ ಡಾ. ಸುರೇಶ್, ಜನರಲ್ ವಿಭಾಗದ ವೈದ್ಯರಾದ ಗಗನ್, ಸ್ತ್ರೀ ರೋಗ ತಜ್ಞೆ ಅನುಶ್ರೀ, ದಂತ ವಿಭಾಗದ ವೈದ್ಯ ಐಶ್ವರ್ಯ ಸೇರಿದಂತೆ ಅನೇಕ ವೈದ್ಯರು ತಪಾಸಣೆ ಮಾಡಿದರು.
ಕತ್ತಿಗೆ ಮಠದ ಚನ್ನೇಶ್ವರ ಸ್ವಾಮೀಜಿ, ‘ಪ್ರಜಾವಾಣಿ’ ಪತ್ರಿಕೆಯ ವಿತರಕ ರುದ್ರಪ್ಪ, ಕತ್ತಿಗೆ ಸರ್ಕಾರಿ ಪ್ರೌಢಶಾಲೆಯ ಮುಖ್ಯಶಿಕ್ಷಕ ಬಿ.ಕೆ. ರವಿ, ಶಿಕ್ಷಕ ಹನುಮಂತಪ್ಪ, ಸಮಿತಿಯ ಖಜಾಂಚಿ ಕೆ. ಬಸವರಾಜ್, ಕಾರ್ಯದರ್ಶಿ ಕೆ. ಯುವರಾಜ್, ಎಸ್. ಬಸವರಾಜಪ್ಪ, ಬಸವನಗೌಡ, ಗ್ರಾ.ಪಂ. ಸದಸ್ಯರಾದ ಮಮತಾ, ಹಾಲು ಸೊಸೈಟಿಯ ಉಪಾಧ್ಯಕ್ಷೆ ರಂಜಿತಾ ಭಾಗಿಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.