ಹರಿಹರ: ‘ವಿವಾಹವೂ ಸೇರಿ ಇತರೆ ಶುಭ ಸಮಾರಂಭಗಳನ್ನು ಸರಳವಾಗಿ ಆಚರಿಸುವುದರಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದು ಮೌಲಾನಾ ಖಾಜಿ ಸೈಯದ್ ಶಂಷುದ್ದೀನ್ ಬರ್ಕಾತಿ ಹೇಳಿದರು.
ನಗರದ ಬೆಂಕಿನಗರದಲ್ಲಿ ಗೌಸಿಯಾ ವೃತ್ತದ ನೌಜವಾನ್ ಗ್ರೂಪ್‌ನಿಂದ ಬುಧವಾರ ಆಯೋಜಿಸಿದ್ದ ಮುಸ್ಲಿಂ ಸಮುದಾಯದ ಸಾಮೂಹಿಕ ವಿವಾಹ ಮಹೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಪ್ರವಾದಿ ಮೊಹಮ್ಮದ್ ಅವರು ಕೂಡ ತಮ್ಮ ಕುಟುಂಬದ ಸದಸ್ಯರ ವಿವಾಹಗಳನ್ನು ಅತ್ಯಂತ ಸರಳವಾಗಿ ಆಚರಿಸಿ ನಮಗೆಲ್ಲ ಮಾದರಿಯಾಗಿದ್ದಾರೆ. ಮೊಹಮ್ಮದ ಅವರನ್ನು ಅತಿಯಾಗಿ ಪ್ರೀತಿಸುವ ನಾವು ಅವರ ಆದರ್ಶಗಳನ್ನು ಬದುಕಿನಲ್ಲಿ ಏಕೆ ಅಳವಡಿಸಿಕೊಲ್ಳುವುದಿಲ್ಲ’ ಎಂದು ಪ್ರಶ್ನಿಸಿದರು.
‘ಮಧ್ಯಮ, ಬಡ ವರ್ಗದವರು ಮಕ್ಕಳ ಮದುವೆಗಾಗಿಯೇ ಲಕ್ಷಾಂತರ ಹಣ ಸಾಲ ಮಾಡಿ ಅದನ್ನು ತೀರಿಸಲು ವರ್ಷಗಟ್ಟಲೆ ಜೀತದಂತೆ ದುಡಿಯುತ್ತಾರೆ. ಶ್ರೀಮಂತರೂ ತಮ್ಮ ಕುಟುಂಬದವರ ಮದುವೆ ಇತರೆ ಸಮಾರಂಭಗಳನ್ನು ಸರಳವಾಗಿ ಆಚರಿಸಿ ಸಮುದಾಯಕ್ಕೆ ಮಾದರಿಯಾಗಬೇಕು’ ಎಂದು ಹೇಳಿದರು.
ಮದುವೆಗೆ ಬಂದಿದ್ದ ವಧು ಮತ್ತು ವರನ ಕಡೆಯವರಿಗೆ ಭೋಜನ ವ್ಯವಸ್ಥೆ ಮಾಡಲಾಗಿತ್ತು. ಅಂಜುಮನ್ ಸಂಸ್ಥೆ ನಿರ್ದೇಶಕ ಗೌಸ್, ನಗರಸಭಾ ಸದಸ್ಯರಾದ ಎಂ.ಎಸ್.ಬಾಬುಲಾಲ್, ಬಿ.ಅಲ್ತಾಫ್, ಮುಖಂಡರಾದ ಕೇಟ್ಲಿ ರೆಹಮಾನ್, ಸೈಯದ್ ಸನಾವುಲ್ಲಾ, ಆಸಿಫ್ ಅಲಿ ಪೈಲ್ವಾನ್, ದಾದಾಪೀರ್ ಭಾನುವಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.