ADVERTISEMENT

ಸಂಗೀತ ಕಲಿಕೆ ಸಾಹಿತ್ಯ ಕೃಷಿಗೆ ಪೂರಕ: ಸಂಗೀತ ಶಿಕ್ಷಕ ಅಜಯ್‌ ನಾರಾಯಣ್‌

‘ನಿನಾದ’ ಗಾಯನ ತರಬೇತಿ ಶಿಬಿರ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2019, 9:29 IST
Last Updated 7 ಏಪ್ರಿಲ್ 2019, 9:29 IST
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಏಳು ದಿನಗಳ ಗಾಯನ ತರಬೇತಿ ಶಿಬಿರ ‘ನಿನಾದ–7’ ಅನ್ನು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಶಿಕ್ಷಕ ಅಜಯ್‌ ನಾರಾಯಣ್‌ ಉದ್ಘಾಟಿಸಿದರು.
ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಏಳು ದಿನಗಳ ಗಾಯನ ತರಬೇತಿ ಶಿಬಿರ ‘ನಿನಾದ–7’ ಅನ್ನು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಶಿಕ್ಷಕ ಅಜಯ್‌ ನಾರಾಯಣ್‌ ಉದ್ಘಾಟಿಸಿದರು.   

ದಾವಣಗೆರೆ: ಜಿಲ್ಲೆಯ ಸಾಹಿತಿಗಳ ಉತ್ತಮ ಕವಿತೆಗಳಿಗೆ ರಾಗ ಸಂಯೋಜಿಸಿ ಮಕ್ಕಳಿಗೆ ಕಲಿಸಿದರೆ ಸ್ಥಳೀಯವಾಗಿ ಸಾಹಿತ್ಯ ಕೃಷಿ ಕೆಲಸ ಇನ್ನಷ್ಟು ಬೆಳೆಯಲು ಅನುಕೂಲವಾಗಲಿದೆ ಎಂದು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಶಿಕ್ಷಕ ಅಜಯ್‌ ನಾರಾಯಣ್‌ ಹೇಳಿದರು.

ಸುಶ್ರಾವ್ಯ ಸಂಗೀತ ವಿದ್ಯಾಲಯ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕವಿ ಡಾ. ಎನ್‌.ಎಸ್‌. ಲಕ್ಷ್ಮೀನಾರಾಯಣ ಭಟ್ಟ ಅವರ ಗೀತೆಗಳ ಗಾಯನ ತರಬೇತಿ ಶಿಬಿರ ‘ನಿನಾದ–7’ ಅನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕನ್ನಡ ಸಾಹಿತ್ಯ ಪರಿಷತ್ತಿನೊಂದಿಗೆ ಗುರುತಿಸಿಕೊಂಡಿರುವ ಹಲವರು ಕವಿತೆಗಳನ್ನು ರಚಿಸಿದ್ದಾರೆ. ಅವುಗಳ ಪೈಕಿ ಉತ್ತಮವಾಗಿರುವುದನ್ನು ಆಯ್ಕೆ ಮಾಡಿಕೊಂಡು ಹಾಡಲು ಮಕ್ಕಳಿಗೆ ಕಲಿಸಿಕೊಡಬೇಕು ಎಂದು ಸಲಹೆ ನೀಡಿದರು.

ADVERTISEMENT

ಗರಿಗಳು ಒಣಗಿ ಬೀಳುವಾಗ ತೆಂಗಿನ ಮರದಲ್ಲಿ ಕಲೆ ಉಳಿಯುತ್ತದೆ. ಅದು ಮರ ಜೀವಂತವಾಗಿ ಇರುವವರೆಗೂ ಉಳಿಯುತ್ತದೆ. ಅದರಂತೆ ಪ್ರತಿಯೊಬ್ಬರೂ ಬದುಕಿನಲ್ಲಿ ನೆನಪುಳಿಯುವಂತಹ ಕೆಲಸಗಳನ್ನು ಮಾಡಬೇಕು ಎಂದು ಅವರು ಹೇಳಿದರು.

ಇದು ದಿಗ್ಗಜರ ಕವಿಗಳ ಕವನಗಳನ್ನು ಕಲಿಸುವ ಶಿಬಿರವಾಗಿದೆ. ಇಲ್ಲಿ ಭಾಗವಹಿಸಿದ ಮಕ್ಕಳ ಮುಂದಿನ ಸಂಗೀತದ ಜೀವನ ಉಜ್ವಲವಾಗಿ ಬೆಳೆಯಲಿ ಎಂದು ಅವರು ಹಾರೈಸಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಾ. ಎಚ್.ಎಸ್. ಮಂಜುನಾಥ ಕುರ್ಕಿ, ಯಾಂತ್ರಿಕ ಜೀವನ, ಹಣ ಗಳಿಸುವುದು, ಅನ್ವೇಷಣೆಗೆ ಸಂಬಂಧಿಸಿದ ಪಠ್ಯಗಳೇ ರಚಿಸುತ್ತಿರುವ ಇಂದಿನ ದಿನಮಾನದಲ್ಲಿ ಮಕ್ಕಳಿಗೆ ಭಾರತೀಯ ಸಂಸ್ಕೃತಿ, ಸಾಮಾಜಿಕ ಮೌಲ್ಯಗಳನ್ನು ತಿಳಿಸಿಕೊಡುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.

ಯುವ ಜನಾಂಗ ಸುಸಜ್ಜಿತವಾಗುತ್ತಿದೆ. ಆದರೆ ಸುಸಂಸ್ಕೃತವಾಗುತ್ತಿಲ್ಲ. ನೈತಿಕ ಶಿಕ್ಷಣ ನೀಡದ ಪರಿಣಾಮ, ಇಂದು ಯುವಕರು ಭಯೋತ್ಪಾದಕರಾಗಿ ಜೀವನ ನಡೆಸುತ್ತಿದ್ದಾರೆ. ಮಾದಕ ವಸ್ತುಗಳ ದಾಸರಾಗಿ, ಆಸ್ತಿ–ಅಂತಸ್ತು ಅಪರಿಸುವ ಸಾಮಾಜಿಕ ವಿರೋಧಿ ಕೆಲಸಗಳನ್ನು ಮಾಡುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

‘ಭಾರತೀಯ ಪರಂಪರೆಯ ಸಾಂಸ್ಕೃತಿಕ ಸಂಪತ್ತನ್ನು ಮಕ್ಕಳಿಗೆ ಪರಿಚಯಿಸುವ ಅಗತ್ಯವಿದೆ. ನಮ್ಮ ದೇಶಕ್ಕೆ ಸುಸಂಸ್ಕೃತರು ಬೇಕಾಗಿದ್ದಾರೆ. ಅವರೇ ದೇಶದ ಸಂಪತ್ತು. ಅದನ್ನು ಉಳಿಸಿ, ಬೆಳೆಸಲು ಇಂತಹ ಶಿಬಿರಗಳು ಸಹಕಾರಿಯಾಗಿವೆ’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸುಶ್ರಾವ್ಯ ಸಂಗೀತ ವಿದ್ಯಾಲಯದ ನಿರ್ದೇಶಕಿ ಯಶಾ ದಿನೇಶ್, ‘ಕವಿ ಲಕ್ಷ್ಮೀನಾರಾಯಣ ಭಟ್ಟ ಅವರು 400ಕ್ಕೂ ಹೆಚ್ಚು ಗೀತೆಗಳನ್ನು ಬರೆದಿದ್ದಾರೆ. 100ಕ್ಕೂ ಹೆಚ್ಚು ಶಿಶು ಗೀತೆಗಳನ್ನು ರಚಿಸಿದ್ದಾರೆ. ಅವರ ಕಾವ್ಯ ರಚನೆ ಹೇಗೆ ಉನ್ನತವಾದ್ದವೋ ಹಾಗೆಯೇ ಅವರು ವ್ಯಕ್ತಿತ್ವವೂ ಶ್ರೇಷ್ಠವಾಗಿದೆ. ಅವರ 15 ಕವಿತೆಗಳನ್ನು ಹಾಡಲು ಶಿಬಿರದಲ್ಲಿ ಹೇಳಿಕೊಡಲಾಗುವುದು’ ಎಂದು ಹೇಳಿದರು.

ಶಿಬಿರದ ಸಂಚಾಲಕರಾದ ಪ್ರೇಮಾ ಜಿ.ಎಸ್. ಹಾಗೂ ತ್ರಿವೇಣಿ ವಿ.ಡಿ. ಉಪಸ್ಥಿತರಿದ್ದರು. ಪೂರ್ಣಿಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.