ADVERTISEMENT

ದಾವಣಗೆರೆ ಡಯಟ್‌ನಲ್ಲಿ 5 ವರ್ಷಗಳಿಂದ ಒಂದಂಕಿ ದಾಖಲಾತಿ! ವಿದ್ಯಾರ್ಥಿಗಳ ನಿರಾಸಕ್ತಿ

ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ವಿಳಂಬ: ವಿದ್ಯಾರ್ಥಿಗಳ ನಿರಾಸಕ್ತಿ

ಚಂದ್ರಶೇಖರ ಆರ್‌.
Published 1 ಅಕ್ಟೋಬರ್ 2022, 4:40 IST
Last Updated 1 ಅಕ್ಟೋಬರ್ 2022, 4:40 IST
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌)
ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌)   

ದಾವಣಗೆರೆ: 5 ವರ್ಷಗಳಿಂದ ಈಚಿಗೆ ಇಲ್ಲಿನ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್‌)ಯಲ್ಲಿ ಪ್ರವೇಶ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಒಂದಂಕಿಯನ್ನು ದಾಟುತ್ತಿಲ್ಲ.

ಮೂರು ವರ್ಷಗಳಿಂದ ಡಯಟ್‌ನಲ್ಲಿ ಡಿ.ಇಡಿ ಕೋರ್ಸ್‌ಗೆ ಇಬ್ಬರು,ಮೂವರು ಎಂಬಂತೆ ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಿದ್ದಾರೆ.

ಈ ವರ್ಷವಂತೂ ಕೇವಲ ಇಬ್ಬರು ಪ್ರವೇಶ ಪಡೆದಿದ್ದಾರೆ. 2008ರಿಂದ 2013ರವರೆಗೂ ಸರಾಸರಿ 300 ವಿದ್ಯಾರ್ಥಿಗಳು ಡಿ.ಇಡಿಗೆ ಪ್ರವೇಶ ಪಡೆಯುತ್ತಿದ್ದರು. 2013ರ ಬಳಿಕ ಪ್ರವೇಶ ಸಂಖ್ಯೆ ಇಳಿಕೆಯಾಗುತ್ತ ಬಂದಿದೆ. 5 ವರ್ಷಗಳಿಂದ ಈಚೆಯಂತೂ ಅದು ಒಂದಂಕಿಗೆ ಇಳಿದಿದೆ.

ADVERTISEMENT

ಹಲವು ವರ್ಷಗಳಿಂದ ಪ್ರಾಥಮಿಕ ಶಾಲೆಗಳ ಶಿಕ್ಷಕರ ಹುದ್ದೆಗೆ ನೇಮಕಾತಿ ಪ್ರಕ್ರಿಯೆ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ. ಇದರಿಂದ ವಿದ್ಯಾರ್ಥಿಗಳು ಡಿ.ಇಡಿ ಓದುವತ್ತ ಆಸಕ್ತಿ ತೋರುತ್ತಿಲ್ಲ.

ಇದು ದಾವಣಗೆರೆ ಜಿಲ್ಲೆಯ ಪರಿಸ್ಥಿತಿ ಮಾತ್ರವಲ್ಲ. ಬದಲಿಗೆ, ಇತರ ಕೆಲವು ಜಿಲ್ಲೆಗಳಲ್ಲಿನ ಡಯಟ್‌ಗಳದ್ದೂ ಇದೇ ಕಥೆ. ರಾಜ್ಯದಲ್ಲಿ 34 ಡಯಟ್‌ಗಳಿದ್ದು, ಈ ಪೈಕಿ 20 ಡಯಟ್‌ಗಳಲ್ಲಿ ಒಬ್ಬರೂ ಪ್ರವೇಶ ಪಡೆದಿಲ್ಲ. 14 ಡಯಟ್‌ಗಳಲ್ಲಿ ಇರುವುದು ಬೆರಳೆಣಿಕೆಯ ವಿದ್ಯಾರ್ಥಿಗಳು.

ಕನ್ನಡ ಹಾಗೂ ಉರ್ದು ಮಾಧ್ಯಮದಲ್ಲಿಡಿ.ಇಡಿಯಲ್ಲಿ ಕಲಿಯಲು ಅವಕಾಶ ಇರುವ ಕಾರಣ ಹೆಚ್ಚಿನ ವಿದ್ಯಾರ್ಥಿಗಳು ಕಲಿಯಲು ಆಸಕ್ತಿ ತೋರುತ್ತಿಲ್ಲ. ಇಂಗ್ಲಿಷ್‌ ಮಾಧ್ಯಮದಲ್ಲಿ ಡಿ.ಇಡಿ ಮಾಡಲು ಅವಕಾಶ ಇದ್ದರೆ ವಿದ್ಯಾರ್ಥಿಗಳು ಆಸಕ್ತಿ ತೋರಬಹುದು. ಆದರೆ, ಸರ್ಕಾರ ಕನ್ನಡಕ್ಕೆ ಆದ್ಯತೆ ನೀಡುತ್ತಿರುವ ಕಾರಣ ಇಂಗ್ಲಿಷ್‌ ಮಾಧ್ಯಮದಲ್ಲಿ ಡಿ.ಇಡಿ ಶಿಕ್ಷಣ ದೊರೆಯುತ್ತಿಲ್ಲ. ಇದೂ ದಾಖಲಾತಿ ಕುಸಿತಕ್ಕೆ ಕಾರಣವಾಗಿದೆ.

ಬೇಡಿಕೆ ಕುಸಿತಕ್ಕೆ ಕಾರಣ:

‘ಶಿಕ್ಷಕ ಹುದ್ದೆಯ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಡಿ.ಇಡಿ ಕೋರ್ಸ್ ಮಾಡಲು ಹೆಚ್ಚಿನ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿಲ್ಲ. ಡಿ.ಇಡಿ ಓದಿದರೆ 1ನೇ ತರಗತಿಯಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಮಾತ್ರ ಬೋಧಿಸಬಹುದು. ಪಿಯುಸಿ ಬಳಿಕ ಪದವಿ ಓದಿ ಬಳಿಕ ಬಿ.ಇಡಿ ಓದಿದವರಿಗೆ 6ನೇ ತರಗತಿಯಿಂದ 8 ನೇ ತರಗತಿಯವರೆಗೆ ಪಾಠ ಮಾಡಲು ಅವಕಾಶವಿದೆ. ಅಲ್ಲದೆ, ವೇತನದಲ್ಲೂ ವ್ಯತ್ಯಾಸ ಇದೆ. ಪದವಿ ಬಳಿಕ ಬೇರೆ ಕೋರ್ಸ್‌ಗಳತ್ತ ವಿದ್ಯಾರ್ಥಿಗಳು ಮುಖಮಾಡುತ್ತಾರೆ. ಹೀಗಾಗಿ ದಾಖಲಾತಿ ಕಡಿಮೆ ಸಂಖ್ಯೆಯಲ್ಲಿದೆ‘ ಎಂದು ಡಯಟ್‌ ಪ್ರಾಚಾರ್ಯರಾದ ಗೀತಾ ಎಸ್‌. ‘ಪ್ರಜಾವಾಣಿ’ಗೆ ತಿಳಿಸಿದರು.

‘ದಾಖಲಾತಿ ಕಡಿಮೆ ಆಗುತ್ತಿರುವ ಬಗ್ಗೆ ಇಲಾಖೆ ಮಟ್ಟದಲ್ಲಿ ಚರ್ಚೆಯೂ ಆಗಿದೆ. ಇಂಗ್ಲಿಷ್ ಮಾಧ್ಯಮದಲ್ಲಿ ಡಿ.ಇಡಿ ಶಿಕ್ಷಣ ನೀಡಲು ತಜ್ಞರಿಂದ ಸಲಹೆಯೂ ಬಂದಿದೆ. ದಾಖಲಾತಿ ಹೆಚ್ಚಳ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ’ ಎಂದು ಅವರು ತಿಳಿಸಿದರು.

ವಿದ್ಯಾರ್ಥಿಗಳಿಲ್ಲದಿದ್ದರೂ ಶಿಕ್ಷಕರಿಗಿದೆ ಕೆಲಸ

ಇಲ್ಲಿನ ಡಯಟ್‌ನಲ್ಲಿ 8 ಜನ ಉಪನ್ಯಾಸಕರು ಡಿ.ಇಡಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡುತ್ತಾರೆ. ವಿದ್ಯಾರ್ಥಿಗಳು ಕಡಿಮೆ ಇರುವ ಕಾರಣ ಈ ಉಪನ್ಯಾಸಕರನ್ನು ಬೇರೆ ಕೆಲಸಕ್ಕೆ ನಿಯೋಜಿಸಿಕೊಳ್ಳಲಾಗಿದೆ. ಇಲಾಖೆಯ ವಿವಿಧ ಕಾರ್ಯಕ್ರಮಗಳ ಅನುಷ್ಠಾನ, ಮೇಲ್ವಿಚಾರಣೆ, ಸರ್ಕಾರಿ ಶಾಲೆಗಳ ಶಿಕ್ಷಕರಿಗೆ ಕಾರ್ಯಾಗಾರ ನಡೆಸಿ, ತರಬೇತಿ ನೀಡುವುದು ಸೇರಿ ಹಲವು ಕಾರ್ಯಕ್ರಮಗಳ ಉಸ್ತುವಾರಿ ವಹಿಸುತ್ತಾರೆ. ವಿದ್ಯಾರ್ಥಿಗಳಿಲ್ಲ ಎಂದು ಯಾರೂ ಸುಮ್ಮನೆ ಕೂರುವುದಿಲ್ಲ. ಅವರು ಹೆಚ್ಚುವರಿ ಕೆಲಸ ನಿಭಾಯಿಸುತ್ತಾರೆ ಎಂದುಗೀತಾ ಎಸ್‌. ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.