ADVERTISEMENT

ಹವಾಯಿ ದ್ವೀಪದಲ್ಲಿ ಸಿರಿಗೆರೆಯ ಶ್ರೀಗಳಿಂದ ವಚನ ಕಂಪು

​ಪ್ರಜಾವಾಣಿ ವಾರ್ತೆ
Published 30 ಜುಲೈ 2023, 15:03 IST
Last Updated 30 ಜುಲೈ 2023, 15:03 IST
ಫೆಸಿಫಿಕ್‌ ಮಹಾಸಾಗರದ ಹವಾಯಿ ದ್ವೀಪದ ಬಳಿ ಇರುವ ಆಶ್ರಮವೊಂದರಲ್ಲಿ ತರಳಬಾಳು ಶ್ರೀಗಳು ವಚನ ಸಂಪುಟ ಪ್ರಾತ್ಯಕ್ಷಿಕೆ ನೀಡಿದರು
ಫೆಸಿಫಿಕ್‌ ಮಹಾಸಾಗರದ ಹವಾಯಿ ದ್ವೀಪದ ಬಳಿ ಇರುವ ಆಶ್ರಮವೊಂದರಲ್ಲಿ ತರಳಬಾಳು ಶ್ರೀಗಳು ವಚನ ಸಂಪುಟ ಪ್ರಾತ್ಯಕ್ಷಿಕೆ ನೀಡಿದರು   

ಸಿರಿಗೆರೆ: ಫೆಸಿಫಿಕ್‌ ಮಹಾಸಾಗರದ ಹವಾಯಿ ದ್ವೀಪದ ಹಿಂದೂ ಆಶ್ರಮವೊಂದರಲ್ಲಿ ತರಳಬಾಳು ಬೃಹನ್ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರು ಶನಿವಾರ ವಚನ ಸಾಹಿತ್ಯದ ಕಂಪನ್ನು ಪಸರಿಸಿದರು.

ಅಮೆರಿಕ ಪ್ರವಾಸದಲ್ಲಿರುವ ಶ್ರೀಗಳು ಹವಾಯಿ ದ್ವೀಪ‍ದ ಹಿಂದೂ ಆಶ್ರಮಕ್ಕೆ ಭೇಟಿ ನೀಡಿ, ಅನೌಪಚಾರಿಕ ಮಾತುಕತೆಯ ನಂತರ 12ನೇ ಶತಮಾನದ ಹೋರಾಟ, ಸಾಮಾಜಿಕ ಸಂಘರ್ಷ, ವಚನ ಸಾಹಿತ್ಯ, ಶರಣರ ಬದುಕು ಕುರಿತ ವಿವರಗಳನ್ನು ಅಲ್ಲಿನ ಸನ್ಯಾಸಿಗಳೊಂದಿಗೆ ಹಂಚಿಕೊಂಡರು.

ಇತ್ತೀಚೆಗೆ ವಿವಿಧ ಶರಣರ 22 ಸಾವಿರ ವಚನಗಳನ್ನು ಗಣಕೀಕರಣಗೊಳಿಸಿ ರೂಪಿಸಿರುವ ವಚನ ಸಂಪುಟದ ಪ್ರಾತ್ಯಕ್ಷಿಕೆಯನ್ನು ನೀಡಿದರು. ಆಶ್ರಯಮದಲ್ಲಿನ ಹಿರಿಯ, ಕಿರಿಯ ಸನ್ಯಾಸಿಗಳು ತದೇಕಚಿತ್ತದಿಂದ ಶ್ರೀಗಳ ವಿವರಣೆಯನ್ನು ಆಲಿಸಿದರು. ಕೆಲವರು ಬಸವಣ್ಣನವರ ಕೆಲವು ಸರಳ ವಚನಗಳಿಗೆ ಶ್ರೀಗಳಿಂದ ವ್ಯಾಖ್ಯಾನ ಪಡೆದುಕೊಂಡರು.

ADVERTISEMENT

ಸುದೀರ್ಘ ಒಂದು ಘಂಟೆಯ ಕಾಲದ ಚರ್ಚೆಯ ನಂತರ ಪ್ರಖ್ಯಾತ ʼಹಿಂದೂಯಿಸಂ ಟುಡೆʼ ಪತ್ರಿಕೆಗೆ ಲೇಖನವೊಂದನ್ನು ಬರೆಯಬೇಕಾಗಿ ಮನವಿ ಮಾಡಿದರು. ಶಾಲಾ ಮಕ್ಕಳು ಹಾಡುವ ವಚನಗಳನ್ನು ಕೇಳುವ ಹಂಬಲವನ್ನು ವ್ಯಕ್ತಪಡಿಸಿದರು.

ಆಶ್ರಮಕ್ಕೆ ಆಗಮಿಸಿದ ತರಳಬಾಳು ಶ್ರೀಗಳಿಗೆ ಹೃದಯಸ್ಪರ್ಶಿ ಸ್ವಾಗತ ನೀಡಲಾಯಿತು. ‌‌ಆಶ್ರಮದಲ್ಲಿ 18 ಜನ ಅಮೆರಿಕ ಮೂಲದ ಸನ್ಯಾಸಿಗಳು ನೆಲೆಸಿದ್ದಾರೆ. ಆಶ್ರಮವು 300 ಎಕರೆ ಭೂಪ್ರದೇಶದಲ್ಲಿ ಹರಡಿಕೊಂಡಿದೆ. ರುದ್ರಾಕ್ಷಿ ಹಾರ ನೀಡಿ ಗೌರವ: ಆಶ್ರಮದ ಸಸ್ಯ ರಾಶಿಗಳಲ್ಲಿ ರುದ್ರಾಕ್ಷಿಯನ್ನು ಬೆಳೆಯಲಾಗುತ್ತಿದೆ. ರುದ್ರಾಕ್ಷಿ ಹಾರವೊಂದನ್ನು ಶ್ರೀಗಳಿಗೆ ಹಾಕಿ ಗೌರವಿಸಲಾಯಿತು ಎಂದು ಮಠದ ಪ್ರಕಟಣೆ ತಿಳಿಸಿದೆ. 

ಹವಾಯಿ ದ್ವೀಪದ ಆಶ್ರಮದ ಹಿರಿಯ ಸನ್ಯಾಸಿಗಳೊಂದಿಗೆ ವಿಹಾರ ನಡೆಸಿದ ತರಳಬಾಳು ಶ್ರೀ
ಆಶ್ರಮದಲ್ಲಿ ಬೆಳೆಯುತ್ತಿರುವ ರುದ್ರಾಕ್ಷಿ ಹಣ್ಣು ಹಾಗೂ ಸಂಸ್ಕರಿಸಿದ ರುದ್ರಾಕ್ಷಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.